
'ಟಾಕ್ಸಿಕ್'|ಕಾರಿನೊಳಗಿನ ಹಾಟ್ ಸೀನ್: ಇನ್‌ಸ್ಟಾಗ್ರಾಮ್‌ಗೆ ಗುಡ್‌ಬೈ ಹೇಳಿದ ನಟಿ ಬೀಟ್ರಿಜ್
ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾದ ತೀವ್ರ ವಿರೋಧ ಮತ್ತು ಟೀಕೆಗಳಿಂದಾಗಿ ನಟಿ ಬೀಟ್ರಿಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದದ ಸುಳಿಗೆ ಸಿಲುಕಿದೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್‌ನಲ್ಲಿರುವ `ಕಾರಿನ ಒಳಗಿನ ಹಸಿ ಬಿಸಿ ದೃಶ್ಯ' ಈಗ ಕಾನೂನು ಸಂಕಷ್ಟಕ್ಕೆ ಕಾರಣವಾಗಿದೆ.
ಬ್ರೆಜಿಲ್ ನಟಿ ಇನ್‌ಸ್ಟಾಗ್ರಾಮ್ ಖಾತೆ ಡಿಲೀಟ್
ಟೀಸರ್ ಬಿಡುಗಡೆಯಾದ ನಂತರ ಯಶ್ ಜೊತೆಗಿನ ಆ ದೃಶ್ಯದಲ್ಲಿ ಕಾಣಿಸಿಕೊಂಡ ನಟಿ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿತ್ತು. ಈ ಕುತೂಹಲಕ್ಕೆ ತೆರೆ ಎಳೆದಿದ್ದ ನಿರ್ದೇಶಕಿ ಗೀತು ಮೋಹನ್ ದಾಸ್, ಅವರು ಬ್ರೆಜಿಲಿಯನ್ ಮಾಡೆಲ್ ಬೀಟ್ರಿಜ್ ತೌಫೆನ್‌ಬಾಚ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದರು. ಆದರೆ ದೃಶ್ಯದ ಕುರಿತು ತೀವ್ರ ಟೀಕೆ ಮತ್ತು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ನಟಿ ಬೀಟ್ರಿಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ. 2014ರಿಂದ ಮಾಡೆಲಿಂಗ್ ಕ್ಷೇತ್ರದಲ್ಲಿರುವ ಇವರು ಗಾಯಕಿ ಕೂಡ ಹೌದು.
ಮಹಿಳಾ ಆಯೋಗಕ್ಕೆ ದೂರು
ಆಮ್ ಆದ್ಮಿ ಪಾರ್ಟಿಯ ಮಹಿಳಾ ಘಟಕವು ಈ ಟೀಸರ್ ವಿರುದ್ಧ ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೆ ಅಧಿಕೃತ ದೂರು ಸಲ್ಲಿಸಿದೆ. ಟೀಸರ್‌ನಲ್ಲಿರುವ ದೃಶ್ಯಗಳು ಅಶ್ಲೀಲ ಮತ್ತು ಕಾಮೋದ್ರೇಕಕಾರಿಯಾಗಿದ್ದು, ಇವು ಮಹಿಳೆಯರ ಘನತೆಗೆ ಕುಂದು ತರುವುದಲ್ಲದೆ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಇದು ಕನ್ನಡದ ಸಾಂಸ್ಕೃತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಸೆನ್ಸಾರ್ ಮಂಡಳಿ ಸ್ಪಷ್ಟನೆ
ಇತ್ತ ಟೀಸರ್‌ನಲ್ಲಿನ ದೃಶ್ಯಗಳ ಕುರಿತು ಬಂದ ದೂರಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ, ಈ ಟೀಸರ್ ನೇರವಾಗಿ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವುದರಿಂದ ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುವ ಚಿತ್ರಗಳಿಗೆ ಮಾತ್ರ ಸೆನ್ಸಾರ್ ಪ್ರಮಾಣಪತ್ರ ಅನ್ವಯಿಸುತ್ತದೆ ಎಂದು ಬೋರ್ಡ್ ತಿಳಿಸಿದೆ.
`ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದು ಮುಂಬರುವ ಭಾರತೀಯ ಅವಧಿಯ ಗ್ಯಾಂಗ್‌ಸ್ಟರ್ ಆಕ್ಷನ್ ಥ್ರಿಲ್ಲರ್ ಆಗಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ನಟಿಸಿದ್ದಾರೆ. ಇದನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸಿದ್ದಾರೆ. ನಿಮಾವು ಮಾರ್ಚ್ 19 ರಂದು ತೆರೆಕಾಣಲಿದೆ. ಅದೇ ದಿನ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಕೂಡ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮಟ್ಟದ ಹಣಾಹಣಿ ಏರ್ಪಡಲಿದೆ.

