
ನಟ ರಣವೀರ್ ಸಿಂಗ್‌ಗೆ ಬಿಷ್ಣೋಯಿ ಗ್ಯಾಂಗ್‌ನಿಂದ ಹಣಕ್ಕಾಗಿ ಬೆದರಿಕೆ
ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ವಾಟ್ಸಾಪ್ ಮೂಲಕ ಬಿಷ್ಣೋಯಿ ಗ್ಯಾಂಗ್ ಹೆಸರಲ್ಲಿ ಕೊಲೆ ಬೆದರಿಕೆ ಬಂದಿದೆ. ರೋಹಿತ್ ಶೆಟ್ಟಿ ಮನೆ ಮುಂದೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.
ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ವಾಟ್ಸಾಪ್ ವಾಯ್ಸ್ ನೋಟ್ ಮೂಲಕ ಕೋಟಿಗಟ್ಟಲೆ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಲಾಗಿದೆ. ಈ ಘಟನೆಯ ಬೆನ್ನಲ್ಲೇ ಮುಂಬೈ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ನಟನ ನಿವಾಸದ ಹೊರಗೆ ಭದ್ರತೆಯನ್ನು ಬಲಪಡಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಬಿಷ್ಣೋಯಿ ಗ್ಯಾಂಗ್ ಲಿಂಕ್?
ಬೆದರಿಕೆ ಹಾಕಿದ ವ್ಯಕ್ತಿಯು ತಾನು ಪ್ರಸಿದ್ಧ 'ಬಿಷ್ಣೋಯಿ ಗ್ಯಾಂಗ್'ಗೆ ಸೇರಿದವನು ಎಂದು ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೇ ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಜುಹು ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಬೆನ್ನಲ್ಲೇ ರಣವೀರ್ ಸಿಂಗ್‌ಗೆ ಈ ಬೆದರಿಕೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ಮುಂಬೈ ಕ್ರೈಮ್ ಬ್ರಾಂಚ್ ಗಂಭೀರವಾಗಿ ಪರಿಗಣಿಸಿದ್ದು, ಸಂದೇಶದ ಮೂಲವನ್ನು ಪತ್ತೆಹಚ್ಚುತ್ತಿದೆ.
ರೋಹಿತ್ ಶೆಟ್ಟಿ ನಿವಾಸದ ಮೇಲೆ ಗುಂಡಿನ ದಾಳಿ ಪ್ರಕರಣ
ರೋಹಿತ್ ಶೆಟ್ಟಿ ಅವರ ಮನೆಯ ಮುಂದೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಐವರು ಆರೋಪಿಗಳನ್ನು (ಅಮನ್ ಮರೋಟೆ, ಆದಿತ್ಯ ಗಾಯಕಿ, ಸಿದ್ದಾರ್ಥ್ ಯೆನ್ಪುರೆ, ಸಮರ್ಥ್ ಪೋಮಾಜಿ ಮತ್ತು ಸ್ವಪ್ನಿಲ್ ಸಕತ್) ಬಂಧಿಸಲಾಗಿದೆ. ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸದಸ್ಯ ಶುಭಂ ಲೋಂಕರ್ ಎಂಬಾತನನ್ನು ಈ ಪ್ರಕರಣದಲ್ಲಿ ವಾಂಟೆಡ್ ಆರೋಪಿ ಎಂದು ಹೆಸರಿಸಲಾಗಿದೆ. ಶೂಟರ್‌ಗಳು 7.62 ಎಂಎಂ ಮದ್ದುಗುಂಡುಗಳನ್ನು ಬಳಸಿದ್ದು, ಈ ಬಗ್ಗೆ ವಿಧಿವಿಜ್ಞಾನ ತನಿಖೆ ನಡೆಯುತ್ತಿದೆ.
ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದ 'ಧುರಂಧರ್': ರಣವೀರ್ ಸಿಂಗ್ ಅವರು ಇತ್ತೀಚೆಗೆ ಆದಿತ್ಯ ಧರ್ ನಿರ್ದೇಶನದ 'ಧುರಂಧರ್' (2025) ಎಂಬ ಸ್ಪೈ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದರು. ಡಿಸೆಂಬರ್ 5, 2025 ರಂದು ಬಿಡುಗಡೆಯಾದ ಈ ಚಿತ್ರವು ವಿಶ್ವಾದ್ಯಂತ 1,305 ಕೋಟಿ ರೂ. ಗಳಿಸುವ ಮೂಲಕ ಐತಿಹಾಸಿಕ ಯಶಸ್ಸು ಸಾಧಿಸಿತ್ತು. ವಿಶೇಷವೆಂದರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದೇ ಭಾಷೆಯಲ್ಲಿ (ಹಿಂದಿ) 1,000 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿತ್ತು.
ಮುಂದಿನ ಚಿತ್ರದ ತಯಾರಿ
ರಣವೀರ್ ಸಿಂಗ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಧುರಂಧರ್: ದಿ ರಿವೆಂಜ್' ಈ ವರ್ಷದ ಮಾರ್ಚ್ 19 ರಂದು ಬಿಡುಗಡೆಯಾಗಲಿದೆ. ಟೀಸರ್‌ನಲ್ಲಿ ರಣವೀರ್ ಅವರು ಹಮ್ಜಾ ಅಲಿ ಮಜಾರಿ ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದು, ಅಕ್ಷಯ್ ಖನ್ನಾ, ಸಂಜಯ್ ದತ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಅವರಂತಹ ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿದ್ದಾರೆ.

