ಟಾಕ್ಸಿಕ್‌ v/s ಧುರಂಧರ್ 2: ಮಾ.19ರಂದು ಬಾಕ್ಸ್ ಆಫೀಸ್ ವಾರ್
x

ಟಾಕ್ಸಿಕ್‌ v/s ಧುರಂಧರ್ 2: ಮಾ.19ರಂದು ಬಾಕ್ಸ್ ಆಫೀಸ್ ವಾರ್

ಮಾರ್ಚ್ 19ಕ್ಕೆ ಬಾಕ್ಸ್ ಆಫೀಸ್ ವಾರ್ ಶುರುವಾಗಲಿದೆ. ಯಶ್ ನಟನೆಯ ಟಾಕ್ಸಿಕ್ ಮತ್ತು ರಣವೀರ್ ಸಿಂಗ್‌ರ ಧುರಂಧರ್ 2 ಮುಖಾಮುಖಿ ಪೈಪೋಟಿ ನಡೆಸಲಿದೆ.


Click the Play button to hear this message in audio format

ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದ ‘ಧುರಂಧರ್’ ಮೊದಲ ಭಾಗದ ಬಳಿಕ ಇದೀಗ 'ಧುರಂಧರ್ 2: ದಿ ರಿವೆಂಜ್' ಸಿನಿಮಾ ಅಕ್ಷರಶಃ ಬಿರುಗಾಳಿ ಎಬ್ಬಿಸಲು ಸಿದ್ಧವಾಗಿದೆ. ಇದೇ ಮಾರ್ಚ್ 19ರಂದು ಸಿನಿಮಾ ವಿಶ್ವದಾದ್ಯಂತ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದ್ದು, ಈ ಸುದ್ದಿ ಕೇಳಿ ಪೈಪೋಟಿಗೆ ಇಳಿದಿದ್ದ ಹಲವು ದೊಡ್ಡ ತಮ್ಮ ಬಿಡುಗಡೆ ದಿನಾಂಕವನ್ನು ಮುಂದೂಡುತ್ತಿವೆ.

ಧುರಂಧರ್ 2 ಬಿಡುಗಡೆಯ ದಿನವೇ ಬಿಡುಗಡೆಯಾಗಬೇಕಿದ್ದ ಅಡಿವಿ ಶೇಷ್ ಅವರ ಪ್ಯಾನ್ ಇಂಡಿಯಾ ಚಿತ್ರ 'ಡಕಾಯ್ತ್' ಈಗ ತನ್ನ ಬಿಡುಗಡೆಯನ್ನು ಏಪ್ರಿಲ್‌ಗೆ ಮುಂದೂಡಿದೆ. ಮಾರ್ಚ್ 27ಕ್ಕೆ ಬರಬೇಕಿದ್ದ ರಾಮ್ ಚರಣ್ ಅಭಿನಯದ 'ಪೆದ್ದಿ' ಸಿನಿಮಾ ಕೂಡ ಸದ್ಯದ ಪರಿಸ್ಥಿತಿಯಲ್ಲಿ ಸೋಲೋ ರಿಲೀಸ್ ಪಡೆಯುವುದು ಕ್ಷೇಮ ಎಂದು ಭಾವಿಸಿ ತನ್ನ ಡೇಟ್ ಬದಲಿಸಿಕೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಬಾಕ್ಸ್ ಆಫೀಸ್ ಕಣದಲ್ಲಿ ಈಗ ಬಾಲಿವುಡ್‌ನ ‘ಧುರಂಧರ್ 2’ ಎದುರು ಸ್ಯಾಂಡಲ್‌ವುಡ್‌ ನಟ ಯಶ್ ಅವರ 'ಟಾಕ್ಸಿಕ್' ಮಾತ್ರ ಸೆಣಸಾಡಬೇಕಿದೆ.

ಅಭಿಮಾನಿಗಳ ಆತಂಕ

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಕೂಡ ಮಾರ್ಚ್ 19ರಂದೇ ತೆರೆಗೆ ಬರಲಿದೆ ಎಂದು ಮೊದಲೇ ಘೋಷಿಸಲಾಗಿತ್ತು. ಸಿನಿಮಾದ ಟೀಸರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ ದೊಡ್ಡ ಮಟ್ಟದ ಕ್ರೇಜ್ ಹುಟ್ಟುಹಾಕಿತ್ತು. ಆದರೆ, ಆನಂತರ ಚಿತ್ರತಂಡದಿಂದ ಯಾವುದೇ ಪ್ರಚಾರ ಅಥವಾ ಅಪ್‌ಡೇಟ್ ಬಂದಿರಲಿಲ್ಲ. ಇನ್ನೊಂದೆಡೆ ಧುರಂಧರ್ 2 ಚಿತ್ರತಂಡ ನಿರಂತರವಾಗಿ ಪೋಸ್ಟರ್ ಮತ್ತು ಅಪ್‌ಡೇಟ್‌ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಒಂದು ವೇಳೆ ಟಾಕ್ಸಿಕ್ ತಂಡ ಈ ಹಂತದಲ್ಲಿ ಮೌನ ಮುಂದುವರಿಸಿದರೆ, ಅತಿ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಉತ್ತರ ಭಾರತದಲ್ಲಿ ಧುರಂಧರ್ 2 ಸಂಪೂರ್ಣ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ. ಧುರಂಧರ್ 2 ಮೊದಲೇ ಸಕ್ಸಸ್‌ಫುಲ್ ಸರಣಿ ಆಗಿರುವುದರಿಂದ, ಚಿತ್ರದ ಬಗ್ಗೆ ಜನರಲ್ಲಿ ಈಗಾಗಲೇ ಪಾಸಿಟಿವ್ ಅಭಿಪ್ರಾಯವಿದೆ. ಹೀಗಿರುವಾಗ ಯಶ್ ಅವರು ಕೂಡಲೇ ಅಖಾಡಕ್ಕಿಳಿದು ಪ್ರಚಾರದ ಕಾವು ಹೆಚ್ಚಿಸದಿದ್ದರೆ, 'ಟಾಕ್ಸಿಕ್' ಸಿನಿಮಾಗೆ ಕಲೆಕ್ಷನ್ ವಿಚಾರದಲ್ಲಿ ಹಿನ್ನಡೆಯಾಗುವ ಭೀತಿ ಎದುರಾಗಿದೆ.

`ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾವನ್ನು ಗೀತು ಮೋಹನ್‌ದಾಸ್ ನಿರ್ದೇಶನ ಮಾಡಿದ್ದು, ಮುಂಬರುವ ಭಾರತೀಯ ಅವಧಿಯ ಗ್ಯಾಂಗ್‌ಸ್ಟರ್ ಆಕ್ಷನ್ ಥ್ರಿಲ್ಲರ್ ಆಗಿದೆ. ಈ ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ನಟಿಸಿದ್ದಾರೆ. ಇದನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸಿದ್ದಾರೆ.
ಈ ಸಿನಿಮಾ ಮಾರ್ಚ್ 19 ರಂದು ತೆರೆಕಾಣಲಿದೆ.

Read More
Next Story