
'ಕಾಂತಾರ: ಅಧ್ಯಾಯ 1'
'ಕಾಂತಾರ: ಚಾಪ್ಟರ್ 1' ಮತ್ತು 'ಲೋಕಾ: ಚಾಪ್ಟರ್ 1' ಸಿನಿಮಾ OTTಗೆ; ಸ್ಟ್ರೀಮಿಂಗ್ ಯಾವಾಗ?
ಕಾಂತಾರ: ದಿ ಲೆಜೆಂಡ್ ಚಾಪ್ಟರ್ 1 ಮತ್ತು ಲೋಕಾ: ಚಾಪ್ಟರ್ 1 ಈಗ OTT ಗೆ ಬರುತ್ತಿವೆ. ಎರಡೂ ಚಿತ್ರಗಳು ಅಕ್ಟೋಬರ್ 31ರಂದು ನೀವು ಮನೆಯಲ್ಲೇ ಕುಳಿತು ನೋಡಬಹುದಾಗಿದೆ.
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿರುವ 2025 ರ ದಕ್ಷಿಣ ಭಾರತದ ಎರಡು ದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ ಕಾಂತಾರ: ದಿ ಲೆಜೆಂಡ್ ಚಾಪ್ಟರ್ 1 ಮತ್ತು ಲೋಕಾ: ಚಾಪ್ಟರ್ 1 ಈಗ OTT ಗೆ ಬರುತ್ತಿವೆ. ಎರಡೂ ಚಿತ್ರಗಳು ಅಕ್ಟೋಬರ್ 31ರಂದು ನೀವು ಮನೆಯಲ್ಲೇ ಕುಳಿತು ನೋಡಬಹುದಾಗಿದೆ.
ಜಾಗತಿಕವಾಗಿ 800 ರೂ.ಕೋಟಿಗೂ ಹೆಚ್ಚು ಗಳಿಕೆಯೊಂದಿಗೆ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದ ರಿಷಬ್ ಶೆಟ್ಟಿ ಅವರ ಕಾಂತಾರ: ಚಾಪ್ಟರ್ 1, ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ವೀಕ್ಷಕರು ಇದನ್ನು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ವೀಕ್ಷಿಸಬಹುದು. ಆದರೆ ಹಿಂದಿ ಆವೃತ್ತಿಯು ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಈ ಮಧ್ಯೆ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ ಮಲಯಾಳಂ ಸೂಪರ್‌ಹೀರೋ ವಿದ್ಯಮಾನ ಲೋಕಾ: ಚಾಪ್ಟರ್ 1 ಜಿಯೋಹಾಟ್‌ಸ್ಟಾರ್‌ನಲ್ಲಿ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಲೋಕಾ: ಚಾಪ್ಟರ್ 1ಮಲಯಾಳಂ, ತಮಿಳು, ತೆಲುಗು, ಮರಾಠಿ, ಬಂಗಾಳಿ, ಕನ್ನಡ ಮತ್ತು ಹಿಂದಿ ಆವೃತ್ತಿಗಳಲ್ಲಿ ಪ್ರದರ್ಶನವಾಗಲಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಕಾಂತಾರ: ಅಧ್ಯಾಯ 1' ರಿಷಬ್ ಶೆಟ್ಟಿ ಅವರ 2022ರ ಯಶಸ್ವಿ ಚಿತ್ರ 'ಕಾಂತಾರ'ದ ಪ್ರಿಕ್ವೆಲ್ಆಗಿದೆ. ಅಕ್ಟೋಬರ್ 2ರಂದು ಬಿಡುಗಡೆಯಾದ ಈ ಚಿತ್ರವು ತುಳುನಾಡಿನ ದೈವ ಆರಾಧನೆಯ ಮೂಲ ಮತ್ತು 4ನೇ ಶತಮಾನದ ಕದಂಬ ರಾಜವಂಶದ ಕಥೆಯನ್ನು ಆಧರಿಸಿದೆ.
ರಿಷಬ್ ಶೆಟ್ಟಿ ಅವರು ಅರಣ್ಯದ ಮತ್ತು ಬುಡಕಟ್ಟು ಸಮುದಾಯಗಳ ರಕ್ಷಕ ಬೆರ್ಮೆ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಬಿ. ಅಜನೀಶ್ ಲೋಕನಾಥ್ ಅವರ ಸಂಗೀತದಿಂದ ಈ ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರ ಮೆಚ್ಚುಗೆ ಗಳಿಸಿ 2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿ ಹೊರಹೊಮ್ಮಿದೆ.
ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲ್ಮ್ಸ್ ನಿರ್ಮಿಸಿ ಡೊಮಿನಿಕ್ ಅರುಣ್ ನಿರ್ದೇಶಿಸಿದ ಈ ಮಲಯಾಳಂ ಲೋಕಾ: ಚಾಪ್ಟರ್ 1 ಸಿನಿಮಾ ಆಗಸ್ಟ್ 28ರಂದು ಬಿಡುಗಡೆಯಾಗಿತ್ತು. ಇದು ಭಾವನೆ, ನಂಬಿಕೆ ಮತ್ತು ಗುರುತನ್ನು ಆಧರಿಸಿದ ಕಥೆಯಾಗಿದ್ದು, ವೈಯಕ್ತಿಕ ಹೋರಾಟಗಳನ್ನು ಎದುರಿಸುವ ಮಹಿಳೆಯು ತನ್ನ ಅತೀಂದ್ರಿಯ ಶಕ್ತಿಗಳನ್ನು ಕಂಡುಕೊಳ್ಳುವ ಪಾತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ನಟಿಸಿದ್ದಾರೆ. ಈ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ, ನಿರ್ಮಾಪಕರು ಈಗಾಗಲೇ 'ಲೋಕಾ ಅಧ್ಯಾಯ 2' ಘೋಷಿಸಿದ್ದಾರೆ. ಎರಡನೇ ಭಾಗವು ಟೋವಿನೋ ಥಾಮಸ್ ಅವರ ಚಾತನ್ ಪಾತ್ರದ ಸುತ್ತ ಕೇಂದ್ರೀಕೃತವಾಗಿರಲಿದೆ.

