
ಕಾಂತಾರ ಸಿನಿಮಾದಲ್ಲಿ ರಿಶಬ್ ಶೆಟ್ಟಿ
ಕಾಂತಾರ ಚಾಪ್ಟರ್ 1' ಕಲೆಕ್ಷನ್ ಸುನಾಮಿ: 700 ಕೋಟಿ ರೂ. ದಾಟಿದ ಗಳಿಕೆ
ದೀಪಾವಳಿ ಹಬ್ಬದ ರಜೆಯೂ ಸೇರಿ, ಶನಿವಾರ (ಅಕ್ಟೋಬರ್ 18) 12.5 ಕೋಟಿ ರೂಪಾಯಿ ಮತ್ತು ಭಾನುವಾರ (ಅಕ್ಟೋಬರ್ 19) 17.5 ಕೋಟಿ ರೂಪಾಯಿ ಗಳಿಸುವ ಮೂಲಕ ತನ್ನ ಅಬ್ಬರವನ್ನು ಮುಂದುವರಿಸಿದೆ.
ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದ 'ಕಾಂತಾರ ಚಾಪ್ಟರ್ 1' ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸುತ್ತಿದೆ. ಬಿಡುಗಡೆಯಾದ ಕೇವಲ 18 ದಿನಗಳಲ್ಲಿ, ಈ ಸಿನಿಮಾ ವಿಶ್ವಾದ್ಯಂತ 700 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಭಾರತದಲ್ಲಿನ ಒಟ್ಟು ಗಳಿಕೆ 524 ಕೋಟಿ ರೂಪಾಯಿ ದಾಟಿದೆ
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕರ್ನಾಟಕ ಒಂದರಲ್ಲೇ 200 ಕೋಟಿ ರೂಪಾಯಿ ಗಳಿಸಿದ ಮೊದಲ ಸಿನಿಮಾ ಎಂಬ ಐತಿಹಾಸಿಕ ದಾಖಲೆಯನ್ನು 'ಕಾಂತಾರ ಚಾಪ್ಟರ್ 1' ಬರೆದಿದೆ. ಈ ಹಿಂದೆ 'ಕೆಜಿಎಫ್: ಚಾಪ್ಟರ್ 2' (183.6 ಕೋಟಿ ರೂಪಾಯಿ ) ಮತ್ತು 'ಕಾಂತಾರ' ಮೊದಲ ಭಾಗದ ಕರ್ನಾಟಕದ ಜೀವಮಾನದ ಗಳಿಕೆಯನ್ನು ಈ ಸಿನಿಮಾ ಮೀರಿಸಿದೆ.
ದೀಪಾವಳಿ ಹಬ್ಬದ ವಾರಾಂತ್ಯದಲ್ಲಿ ಭರ್ಜರಿ ಗಳಿಕೆ
ಮೊದಲೆರಡು ವಾರಗಳಲ್ಲಿ ಉತ್ತಮ ಗಳಿಕೆ ಕಂಡಿದ್ದ ಚಿತ್ರ, ಮೂರನೇ ವಾರಾಂತ್ಯದಲ್ಲಿ ಮತ್ತಷ್ಟು ವೇಗ ಪಡೆದುಕೊಂಡಿದೆ. ದೀಪಾವಳಿ ಹಬ್ಬದ ರಜೆಯೂ ಸೇರಿ, ಶನಿವಾರ (ಅಕ್ಟೋಬರ್ 18) 12.5 ಕೋಟಿ ರೂಪಾಯಿ ಮತ್ತು ಭಾನುವಾರ (ಅಕ್ಟೋಬರ್ 19) 17.5 ಕೋಟಿ ರೂಪಾಯಿ ಗಳಿಸುವ ಮೂಲಕ ತನ್ನ ಅಬ್ಬರವನ್ನು ಮುಂದುವರಿಸಿದೆ. ಕೇವಲ ಕನ್ನಡ ಮಾತ್ರವಲ್ಲದೆ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿಯೂ ಚಿತ್ರವು ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಸಿನಿಮಾದ ಈ ಅಭೂತಪೂರ್ವ ಯಶಸ್ಸಿಗೆ ಅದರ ವಿಶಿಷ್ಟ ಕಥೆ, ತುಳುನಾಡಿನ ಸಾಂಸ್ಕೃತಿಕ ಹಿನ್ನೆಲೆ, ಸಂಗೀತ ಮತ್ತು ಬಾಯಿಂದ ಬಾಯಿಗೆ ಹರಡಿದ ಪ್ರಶಂಸೆ ಪ್ರಮುಖ ಕಾರಣವಾಗಿದೆ. 'ಜೈಲರ್', 'ಲಿಯೋ' ನಂತಹ ದೊಡ್ಡ ಬಜೆಟ್ ಚಿತ್ರಗಳ ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿರುವ 'ಕಾಂತಾರ ಚಾಪ್ಟರ್ 1', 'ಕೆಜಿಎಫ್' ಸರಣಿಯ ದಾಖಲೆಗಳನ್ನು ಮೀರಿಸುವತ್ತ ಹೆಜ್ಜೆ ಹಾಕಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.