ಉದ್ಯಮಿ ರಾಯ್ ಸಿ.ಜೆ. ನಿಧನಕ್ಕೆ ಕಣ್ಣೀರಿಟ್ಟ ಸೆಲೆಬ್ರಿಟಿಗಳು
x
ಆತ್ಮಹತ್ಯೆಗೆ ಶರಣಾದ ರಾಯ್‌ ಸಿ.ಜೆ

ಉದ್ಯಮಿ ರಾಯ್ ಸಿ.ಜೆ. ನಿಧನಕ್ಕೆ ಕಣ್ಣೀರಿಟ್ಟ ಸೆಲೆಬ್ರಿಟಿಗಳು

ರಾಯ್ ಅವರು ಕೇವಲ ರಿಯಲ್ ಎಸ್ಟೇಟ್ ಉದ್ಯಮಿ ಮಾತ್ರವಲ್ಲದೆ, ಕನ್ನಡದ ಖ್ಯಾತ ರಿಯಾಲಿಟಿ ಶೋಗಳಾದ 'ಸರಿಗಮಪ' ಮತ್ತು 'ಬಿಗ್ ಬಾಸ್' ಗೆ ದೊಡ್ಡ ಮಟ್ಟದ ಬೆಂಬಲ ನೀಡುತ್ತಿದ್ದರು.


Click the Play button to hear this message in audio format

ಕಾನ್ಫಿಡೆಂಟ್‌ ಗ್ರೂಪ್ ಮಾಲೀಕ ರಾಯ್‌ ಸಿ.ಜೆ.ಅವರು ಶುಕ್ರವಾರ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಯ್ ಅವರ ಅನಿರೀಕ್ಷಿತ ನಿಧನವು ಕೇವಲ ಉದ್ಯಮ ಕ್ಷೇತ್ರಕ್ಕೆ ಮಾತ್ರವಲ್ಲದೆ, ಇಡೀ ಮನರಂಜನಾ ಲೋಕಕ್ಕೂ ದೊಡ್ಡ ಆಘಾತ ನೀಡಿದೆ. ರಾಯ್‌ ಅವರು ಕೇವಲ ಉದ್ಯಮಿ ಆಗಿರದೆ ಕನ್ನಡ ಹಾಗೂ ಇತರ ಭಾಷೆಯ ರಿಯಾಲಿಟಿ ಶೋ, ಸಿನಿಮಾ, ಕನ್ನಡ ಸೇರಿದಂತೆ ಬೇರೆ ಬೇರೆ ಸಿನಿಮಾ ರಂಗದಲ್ಲಿ ಕೂಡಾ ರಾಯ್ ಹೆಸರು ಮಾಡಿದ್ದರು. ಹೀಗಾಗಿ ಬಿಗ್‌ಬಾಸ್‌ ವಿನ್ನರ್‌ ಹನುಮಂತು ಸೇರಿದಂತೆ ಕಾನ್ಫಿಡೆಂಟ್‌ ಗ್ರೂಪ್‌ನ ರಾಯಭಾರಿಯಾಗಿದ್ದ ನಟಿ ಹರ್ಷಿಕಾ ಪೂಣಚ್ಚ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡದ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ರಲ್ಲಿ ರಾಯ್‌ ಸಿ.ಜೆ. ಅವರು ವಿನ್ನರ್ ಹಾಗೂ ರನ್ನರ್ ಗೆ ಬಹುದೊಡ್ಡ ಮೊತ್ತವನ್ನು ಬಹುಮಾನವಾಗಿ ನೀಡಿದ್ದರು. ಈ ಸಮಯದಲ್ಲಿ ರನ್ನರ್ ಅಪ್ ಆದ ಹನುಮಂತುಗೆ ತಮ್ಮ ಕಡೆಯಿಂದ ಬರೋಬ್ಬರಿ 35 ಲಕ್ಷ ನೀಡಿದ್ದರು. ಇದಲ್ಲದೆ ಹನುಮಂತುಗೆ 35ಲಕ್ಷ ರೂ ಪ್ಲಾಟ್ ಗಿಫ್ಟ್ ಬಿಗ್ ಬಾಸ್ ಕನ್ನಡ 11ಗೆ ರೂ. 50 ಲಕ್ಷ ಹಣ ನೀಡಿದ್ದರು.

ಹನುಮಂತು ಭಾವುಕ

ಅವರ ಹಠಾತ್ತನೆ ನಿಧನಕ್ಕೆ ಹನುಮಂತು ಭಾವುಕರಾಗಿದ್ದು, ತನ್ನ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ತನ್ನ ಹಾಗೂ ರಾಯ್ ಅವರ ಫೋಟೋ ಹಾಕಿಕೊಂಡು ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಅಂದು ಸರಿಗಮಪ ಸೀಸನ್ 15 ನಾನು ರನ್ನರ್ ಅಪ್ ಆಗಿದ್ದಾಗ , ನನಗೆ ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು. ಅಲ್ಲಿಂದ ಹಿಡಿದು ಬಿಗ್‌ಬಾಸ್‌ ಸೀಸನ್ 11 ಅಲ್ಲೂ ಕೂಡ ವಿಜೇತವಾಗಿರುವಾಗಲೂ ನನಗೆ ಪ್ರೀತಿಯಿಂದ ಹಣವನ್ನು ಕೊಡುವುದರ ಮೂಲಕ ಗೆಲುವನ್ನ ಸಂಭ್ರಮಿಸಿದವರು ನೀವು. ನಿಮ್ಮ ಈ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯನೇ ಇಲ್ಲ ಸರ್ ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸ್ಸು ಭಾರವಾಗಿದೆ ಸರ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಮಿಸ್ ಯು ರಾಯ್ ಸರ್ ಎಂದು ಬರೆದು ಕೊಂಡಿದ್ದಾರೆ.

ನಟಿ ಹರ್ಷಿಕಾ ಪೂಣಚ್ಚ ಕಣ್ಣೀರು

ಇನ್ನು ನಟಿ ಹರ್ಷಿಕಾ ಪೂಣಚ್ಚ ಅವರು ‘ಕಾನ್ಫಿಡೆಂಟ್ ಗ್ರೂಪ್​’ನ ಪ್ರಚಾರ ರಾಯಭಾರಿ ಆಗಿದ್ದರು. ಅವರು ಅವರ ಸಾವಿಗೆ ಸಂತಾಪ ಸೂಚಿಸಿದ್ದು,ರಾಯ್ ಅವರ ಒಡನಾಟದ ಬಗ್ಗೆ, ಅವರ ವ್ಯಕ್ತಿತ್ವದ ಬಗ್ಗೆ, ಅವರ ಐಷಾರಾಮಿ ಜೀವನದ ಬಗ್ಗೆ ಮಾತನಾಡಿದ್ದಾರೆ. ‘ರಾಯ್ ಅವರು ಈ ರೀತಿಯ ನಿರ್ಧಾರವನ್ನು ಏಕೆ ತೆಗೆದುಕೊಂಡರೋ ಗೊತ್ತಿಲ್ಲ. ಇದು ನಿಜಕ್ಕೂ ಶಾಕಿಂಗ್ ಆಗಿದೆ. ನನ್ನ ಸಿನಿಮಾನ ಅವರು ನಿರ್ಮಾಣ ಮಾಡಿದ್ದರು. ಅವರ ಕಾನ್ಫಿಡೆಂಟ್ ಗ್ರೂಪ್​​ಗೆ ನಾನು ಪ್ರಚಾರ ರಾಯಭಾರಿ ಆಗಿದ್ದೆ. ಅವರು ಒಳ್ಳೆಯ ವ್ಯಕ್ತಿ. ನನ್ನ ಮದುವೆಗೆ ಬಂದಿದ್ದರು, ಮಗುವಿನ ಹುಟ್ಟುಹಬ್ಬಕ್ಕೆ ಬಂದಿದ್ದರು. ಅವರು ಕುಟುಂಬದಲ್ಲಿ ಒಬ್ಬರಾಗಿದ್ದರು’ ಎಂದು ಹರ್ಷಿಕಾ ಹೇಳಿದ್ದಾರೆ. ‘ರಾಯ್ ಸಿ.ಜೆ. ಕೊಂಚವೂ ಲೋನ್ ಹೊಂದಿರಲಿಲ್ಲ. ರಾಜನ ರೀತಿ ಬದುಕಿದ್ದರು. ದುಬೈನಲ್ಲಿ ಅವರ ಮನೆ ಮ್ಯಾನ್ಶನ್ ರೀತಿ ಇತ್ತು. ಕಾರಿನ ಕಲೆಕ್ಷನ್ ಬಗ್ಗೆ ಅಂತೂ ಹೇಳೋದೇ ಬೇಡ. ಅವರ ಇಡೀ ಕುಟುಂಬ ತುಂಬಾನೇ ಸ್ವೀಟ್. ಜನರಿಗೆ ಒಳ್ಳೆಯದನ್ನು ಮಾಡುವವರು ಇವರು. ಆದರೆ, ಹೀಗೇಕೆ ಮಾಡಿಕೊಂಡರು ಎಂಬುದೇ ಪ್ರಶ್ನೆ’ ಎಂದಿದ್ದಾರೆ ಅವರು.

ಭುವನ್ ಪೊನ್ನಣ್ಣ ಸಂತಾಪ

ನಾವು ಪ್ರೀತಿಯಿಂದ ಕರೆಯುತ್ತಿದ್ದ ಡಾ. ರಾಯ್ ಅವರ ಹಠಾತ್ ನಿಧನದ ಸುದ್ದಿ ಕೇಳಿ ತುಂಬಾ ದುಃಖವಾಯಿತು ಮತ್ತು ಆಘಾತವಾಯಿತು. ಅವರು ಯಾವಾಗಲೂ ಜೀವನ ಮತ್ತು ಮಹತ್ವಾಕಾಂಕ್ಷೆಗಳಿಂದ ತುಂಬಿದ್ದರು. ಹಣ ಮತ್ತು ಇತರ ಭೌತಿಕ ಲಾಭಗಳ ವಿಷಯಕ್ಕೆ ಬಂದಾಗ ಮಾನವೀಯತೆ ಸತ್ತಿದೆ ಎಂದು ನನಗೆ ಕೆಲವೊಮ್ಮೆ ಅನಿಸುತ್ತದೆ. ಕಾರಣ ಯಾರೇ ಆಗಿರಲಿ ಅವರು ಕರ್ಮವನ್ನು ಎದುರಿಸಬೇಕಾಗುತ್ತದೆ. ಓಂ ಶಾಂತಿ ಡಾ. ರಾಯ್. ಎಲ್ಲದಕ್ಕೂ ಧನ್ಯವಾದಗಳು. ನಿಮ್ಮನ್ನು ಎಂದಿಗೂ ಸ್ಮರಿಸುತ್ತೇವೆ ಎಂದು ಬರೆದಿದ್ದಾರೆ.

ಸಿಜೆ ರಾಯ್‌ ಅವರು ಸಾಮಾಜಿಕ ಸೇವೆಯಲ್ಲೂ ಗುರುತಿಸಿಕೊಂಡಿದ್ದರು. 1 ಕೋಟಿ ಹಣವನ್ನ ಮಕ್ಕಳ ವಿದ್ಯಾಬ್ಯಾಸಕ್ಕೆ ಎಂದು ಸಿಜೆ ರಾಯ್ ನೀಡಿದ್ದರು. 80 ಪರ್ಸೆಂಟ್ ಮಾರ್ಕ್ ಪಡೆದಿದ್ದ 201 ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯ ನೀಡಿದ್ದರು. ರಿಯಾಲಿಟಿ ಶೋ ಮೂಲಕ ಗುರುತಿಸಿಕೊಂಡಿದ್ದ ಸಿಜೆ ರಾಯ್,ಕಳೆದ ಸೀಸನ್ ನ ಬಿಗ್ ಬಾಸ್ ನಲ್ಲಿ ಕಾನ್ಫಿಡೆಂಟ್ ಗ್ರೂಪ್‌ನಿಂದ 50 ಲಕ್ಷ ರೂಪಾಯಿ ನೀಡಿದ್ದರು. ಕೇವಲ ಬಿಗ್ ಬಾಸ್ ಮಾತ್ರವಲ್ಲದೆ ಬೇರೆ ಬೇರೆ ರಿಯಾಲಿಟಿ ಶೋ ಗಳಿಗೂ ಕೂಡ ರಾಯ್ ಸಿ.ಜೆ. ಬಹಳಷ್ಟು ದೊಡ್ಡ ಮೊತ್ತದ ಬಹುಮಾನವನ್ನು ನೀಡಿದ್ದರು.

Read More
Next Story