
ಸಿ.ಜೆ. ರಾಯ್ ಆತ್ಮಹತ್ಯೆ; ಐಟಿ ಅಧಿಕಾರಿಗಳಿಂದ ಕರ್ತವ್ಯ ಲೋಪ? ಸಿಐಡಿ ತನಿಖೆ ಸಾಧ್ಯತೆ
ಬೆಂಗಳೂರಿನ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣವನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಉದ್ಯಮಿ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಹಾಕೇ ಅವರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ರಾಯ್ ಅವರ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ (IT) ದಾಳಿ ನಡೆದಾಗ ಅಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳ ಸಂಪೂರ್ಣ ಪಟ್ಟಿಯನ್ನು ಈಗಾಗಲೇ ಸಂಗ್ರಹಿಸಲಾಗಿದೆ.
ಐಟಿ ಅಧಿಕಾರಿಗಳ ಹೇಳಿಕೆ ದಾಖಲು
ದಾಳಿಯ ಸಮಯದಲ್ಲಿ ಸ್ಥಳದಲ್ಲಿದ್ದ ಐಟಿ ಅಧಿಕಾರಿಗಳನ್ನು ಇಂದು ಡಿಸಿಪಿ ಸಂಪರ್ಕಿಸಲಿದ್ದಾರೆ. ದಾಳಿ ನಡೆಯುತ್ತಿದ್ದಾಗ ಅಲ್ಲಿ ಏನು ಸಂಭವಿಸಿತು? ಸಿಜೆ ರಾಯ್ ಅವರ ವರ್ತನೆ ಹೇಗಿತ್ತು? ಎಂಬುದರ ಕುರಿತು ಅಧಿಕಾರಿಗಳ ಅಧಿಕೃತ ಹೇಳಿಕೆಯನ್ನು ಪಡೆಯಲಾಗುವುದು ಎನ್ನಲಾಗಿದೆ.
ಘಟನಾ ಸ್ಥಳದಲ್ಲಿ ಶುಕ್ರವಾರ ಏನಾಗಿತ್ತು ಎಂಬ ಬಗ್ಗೆ ತಿಳಿಯಲು ಕಚೇರಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಐಟಿ ಅಧಿಕಾರಿಗಳು ದಾಳಿಯ ವೇಳೆ ಮಾಡಿದ ವಿಡಿಯೋ ರೆಕಾರ್ಡಿಂಗ್‌ಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ.
ಕುಟುಂಬ ದೂರು ನೀಡಿದರೆ?
ಸಿಜೆ ರಾಯ್ ಅವರ ಕುಟುಂಬಸ್ಥರು ಇನ್ನೂ ಅಧಿಕೃತ ದೂರು ದಾಖಲಿಸಿಲ್ಲ. ಒಂದು ವೇಳೆ ಐಟಿ ಅಧಿಕಾರಿಗಳ ವಿರುದ್ಧ ಅಥವಾ ತನಿಖಾ ಕ್ರಮದ ವಿರುದ್ಧ ಅಧಿಕೃತ ದೂರು ನೀಡಿದರೆ, ಪ್ರಕರಣದ ತನಿಖೆ ಮತ್ತೊಂದು ಹಂತಕ್ಕೆ ತಲುಪಲಿದೆ.
ಸದ್ಯ ನಗರದ ಖಾಸಗಿ ಹೋಟೆಲ್‌ನಲ್ಲಿ ತಂಗಿರುವ ರಾಯ್ ಅವರ ಕುಟುಂಬದವರನ್ನು ಪೊಲೀಸರು ಭೇಟಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಯ್ ಅವರು ಯಾರೊಂದಿಗಾದರೂ ಮಾತನಾಡಿದ್ದರೇ? ಮನೆಯಲ್ಲಿ ಅವರ ವರ್ತನೆ ಹೇಗಿತ್ತು? ಮತ್ತು ಐಟಿ ದಾಳಿಯ ನಂತರ ಅವರು ವ್ಯಕ್ತಪಡಿಸಿದ್ದ ಕಳವಳಗಳೇನು ಎಂಬುದರ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಒಂದು ವೇಳೆ ಕುಟುಂಬಸ್ಥರು ಐಟಿ ಅಧಿಕಾರಿಗಳ ವಿರುದ್ಧ ಕಿರುಕುಳದ ಆರೋಪ ಮಾಡಿದರೆ, ಪೊಲೀಸರು ಎಫ್‌ಐಆರ್ ದಾಖಲಿಸುವ ಸಾಧ್ಯತೆಯಿದೆ.
ಕರ್ತವ್ಯ ಲೋಪದ ಪ್ರಶ್ನೆ: ನಿಯಮಾವಳಿಗಳು ಏನು ಹೇಳುತ್ತವೆ?
ಕೇಂದ್ರೀಯ ತನಿಖಾ ಸಂಸ್ಥೆಗಳ (IT/ED/CBI) ನಿಯಮಾವಳಿಗಳ ಪ್ರಕಾರ, ಯಾವುದೇ ವ್ಯಕ್ತಿಯ ಮೇಲೆ ಅಥವಾ ಕಚೇರಿಯ ಮೇಲೆ ದಾಳಿ ನಡೆಸುವ ಮೊದಲು ಆವರಣದಲ್ಲಿರುವ ಸುರಕ್ಷತಾ ಕ್ರಮಗಳನ್ನು ಗಮನಿಸಬೇಕು. ದಾಳಿಗೆ ಒಳಗಾಗುವ ವ್ಯಕ್ತಿಯ ಬಳಿ ಯಾವುದೇ ಆಯುಧ ಅಥವಾ ಮಾರಕಾಸ್ತ್ರಗಳಿವೆಯೇ ಎಂಬುದನ್ನು ಅಧಿಕಾರಿಗಳು ಮೊದಲೇ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಆಯುಧಗಳಿದ್ದರೆ, ಅವುಗಳನ್ನು ವಶಕ್ಕೆ ಪಡೆದು ಅಥವಾ ಸುರಕ್ಷಿತವಾಗಿರಿಸಿದ ನಂತರವೇ ತನಿಖೆ ಮುಂದುವರಿಸಬೇಕು.
ಸಿಜೆ ರಾಯ್ ಅವರ ಬಳಿ ಪರವಾನಗಿ ಪಡೆದ ಬಂದೂಕು ಇರುವುದು ತಿಳಿದಿದ್ದರೂ ಅಧಿಕಾರಿಗಳು ಅದನ್ನು ಏಕೆ ಗಮನಿಸಲಿಲ್ಲ? ಎಂಬುದು ಈಗ 'ಕರ್ತವ್ಯ ಲೋಪ'ದ ಅನುಮಾನಕ್ಕೆ ಕಾರಣವಾಗಿದೆ.
ಸಿಜೆ ರಾಯ್ ಅನುಭವಿಸಿದ ಸಂಕಷ್ಟವೇನು?
ದಾಳಿಯ ವೇಳೆ ಸಿಜೆ ರಾಯ್ ಅವರು ಅತೀವ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ? ಅಥವಾ ಅಧಿಕಾರಿಗಳ ವಿಚಾರಣಾ ವೈಖರಿ ಅವರನ್ನು ಅಷ್ಟು ದೊಡ್ಡ ಮಟ್ಟದ ಆತಂಕಕ್ಕೆ ತಳ್ಳಿತೇ? ಎಂಬ ಪ್ರಶ್ನೆಗಳು ಕಾಡುತ್ತಿವೆ. ಕಚೇರಿಯಲ್ಲಿದ್ದ ಸಿಬ್ಬಂದಿಗಳ ವಿಚಾರಣೆಯಿಂದ ಈ ಎಲ್ಲಾ ರಹಸ್ಯಗಳು ಹೊರಬರಬೇಕಿದೆ.
ಪ್ರಕರಣ ಸಿಐಡಿಗೆ ವಹಿಸಲು ಮುಂದಾದ ಸರ್ಕಾರ
ಬೆಂಗಳೂರಿನ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ಸಿಐಡಿಗೆ (CID) ವಹಿಸಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ಈಗಾಗಲೇ ಗೃಹ ಸಚಿವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಹಾಗೂ ಪ್ರಾಥಮಿಕ ತನಿಖಾ ವರದಿ ಕೈಸೇರಿದ ನಂತರ ತನಿಖಾ ಸಂಸ್ಥೆಯ ಬದಲಾವಣೆಯ ಬಗ್ಗೆ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.
ಘಟನೆ ಹಿನ್ನೆಲೆ
ಶುಕ್ರವಾರ (ಜನವರಿ 30, 2026) ಮಧ್ಯಾಹ್ನ ಸುಮಾರು 3:15 ಗಂಟೆಗೆ ಬೆಂಗಳೂರಿನ ರಿಚ್‌ಮಂಡ್ ಸರ್ಕಲ್ ಬಳಿ ಇರುವ ತಮ್ಮ ಕಚೇರಿಯಲ್ಲಿ ಸಿಜೆ ರಾಯ್ ಅವರು ತಮ್ಮ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಮೂರು ದಿನಗಳಿಂದ ಸಿಜೆ ರಾಯ್ ಅವರ ಕಚೇರಿ ಮತ್ತು ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದರು. ತೆರಿಗೆ ವಂಚನೆಯ ದೂರಿನ ಹಿನ್ನೆಲೆಯಲ್ಲಿ ಕೇರಳದ ಐಟಿ ತಂಡವು ಈ ತನಿಖೆ ಕೈಗೊಂಡಿತ್ತು.
ಘಟನೆಯ ದಿನ ಅಧಿಕಾರಿಗಳು ರಾಯ್ ಅವರನ್ನು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಅವರು "ದಾಖಲೆಗಳನ್ನು ತರುತ್ತೇನೆ" ಅಥವಾ "ಮನೆಯವರ ಜೊತೆ ಮಾತನಾಡಬೇಕು" ಎಂದು ಹೇಳಿ ಪಕ್ಕದ ಕೊಠಡಿಗೆ ತೆರಳಿ, ಅಲ್ಲಿ ಗುಂಡು ಹಾರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಿಜೆ ರಾಯ್ ಯಾರು?
ಸಿಜೆ ರಾಯ್ ಬೆಂಗಳೂರು, ಕೇರಳ ಮತ್ತು ದುಬೈನಲ್ಲಿ 160ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿದ್ದ ಇವರು ದಕ್ಷಿಣ ಭಾರತದ ಪ್ರಭಾವಿ ಬಿಲ್ಡರ್ ಆಗಿದ್ದರು. ಇವರು ಕೇವಲ ಉದ್ಯಮಿಯಷ್ಟೇ ಅಲ್ಲದೆ, 'ಮರಕ್ಕಾರ್' ನಂತಹ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳು ಸೇರಿದಂತೆ ಹಲವು ಕನ್ನಡ ಮತ್ತು ಮಲಯಾಳಂ ಸಿನಿಮಾಗಳನ್ನು ನಿರ್ಮಿಸಿದ್ದರು.
ಸಿ.ಜೆ. ರಾಯ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯು ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯಕೀಯ ಪರೀಕ್ಷೆಯ ಸಂಪೂರ್ಣ ವರದಿಯು ಸಾವಿನ ನಿಖರ ಸಮಯ ಮತ್ತು ಗುಂಡು ಹಾರಿಸಿಕೊಂಡ ಸಂದರ್ಭದ ತಾಂತ್ರಿಕ ವಿವರಗಳನ್ನು ನೀಡಲಿದೆ. ಪರೀಕ್ಷೆಯ ನಂತರ ಮೃತದೇಹವನ್ನು ಅವರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎನ್ನಲಾಗಿದೆ.

