
ಇಂದು ಬಿಗ್‌ಬಾಸ್ ಪ್ರೀ-ಫಿನಾಲೆ ನಡೆಯಲಿದೆ.
ಬಿಗ್ ಬಾಸ್ ಫಿನಾಲೆಗೆ ಕ್ಷಣಗಣನೆ: ಅಂತಿಮ ಹಣಾಹಣಿಗೆ ಸಜ್ಜಾದ ಆರು ಮಂದಿ ಫೈನಲಿಸ್ಟ್‌ಗಳು
ಸೀಸನ್ ಉದ್ದಕ್ಕೂ ಸ್ಪರ್ಧಿಗಳ ನಡುವೆ ಇದ್ದ ಸಣ್ಣಪುಟ್ಟ ಮನಸ್ತಾಪ, ಪೈಪೋಟಿ ಮತ್ತು ಜಗಳಗಳನ್ನು ಮರೆತು 'ಗತಕಾಲದ ವಿಷಯಗಳನ್ನು ಬಿಟ್ಟುಬಿಡಿ' ಎಂಬ ವಿಶೇಷ ಕಾರ್ಯವನ್ನು ಬಿಗ್ ಬಾಸ್ ನೀಡಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಕಿಚ್ಚ ಸುದೀಪ್ ನಡೆಸಿಕೊಡುವ ವಾರಾಂತ್ಯದ ಎಪಿಸೋಡ್‌ಗೂ ಮುನ್ನ ನಡೆದ ಕೊನೆಯ ದಿನದ ಆಟವು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಸ್ಪರ್ಧಿಗಳ ನಡುವಿನ ಹಳೆಯ ಕಹಿಯನ್ನು ಮರೆತು 'ಗತಕಾಲದ ವಿಷಯಗಳನ್ನು ಬಿಟ್ಟುಬಿಡಿ'ಎಂಬ ವಿಶೇಷ ಟಾಸ್ಕ್‌ನೊಂದಿಗೆ ಎಪಿಸೋಡ್ ಆರಂಭವಾಯಿತು. ಈ ಕಾರ್ಯವು ಸೀಸನ್‌ನ ಉದ್ದಕ್ಕೂ ಇದ್ದ ಪೈಪೋಟಿಯನ್ನು ದೂರ ಮಾಡಿ, ಸ್ಪರ್ಧಿಗಳಲ್ಲಿ ಪರಸ್ಪರ ಗೌರವ ಮತ್ತು ಸ್ನೇಹವನ್ನು ಬೆಳೆಸುವ ಮೂಲಕ ಅಂತಿಮ ಹಂತದತ್ತ ಸಾಗಲು ಮುನ್ನುಡಿ ಬರೆಯಿತು.
ಇದರ ಬೆನ್ನಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಮನದ ಆಸೆಗಳನ್ನು ಈಡೇರಿಸುವ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಸ್ಪರ್ಧಿ ಕಾವ್ಯಾ ಶೈವ ಅವರು ವ್ಯಕ್ತಪಡಿಸಿದ ವಿಚಿತ್ರ ಆಸೆಯೊಂದು ಎಲ್ಲರ ಗಮನ ಸೆಳೆಯಿತು. ಬಿಗ್ ಬಾಸ್ ಮನೆಯಲ್ಲಿ ಉತ್ತಮ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದ ಕಾವ್ಯಾ, ತಮಗೊಮ್ಮೆ 'ಜೈಲು ಶಿಕ್ಷೆ' ಅನುಭವಿಸಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಈ ಆಸೆಯನ್ನು ಈಡೇರಿಸಲು ಮುಂದಾದ ಬಿಗ್ ಬಾಸ್, ಉಳಿದ ಮನೆಯವರಿಗೆ ಕಾವ್ಯಾ ಅವರನ್ನು ತಮಾಷೆಯಾಗಿ ನಾಮಿನೇಟ್ ಮಾಡಲು ಸೂಚಿಸಿದರು. ಅದರಂತೆ ಸಹ ಸ್ಪರ್ಧಿಗಳು ಹಾಸ್ಯಮಯವಾಗಿ ಅವರನ್ನು ಜೈಲಿಗೆ ಕಳುಹಿಸಿದಾಗ ಇಡೀ ಮನೆ ನಗುವಿನ ಕಡಲಲ್ಲಿ ತೇಲಿತು.
ಈ ಮೂಲಕ ಬಿಗ್ ಬಾಸ್ ಕನ್ನಡ 12ರ ಅಂತಿಮ ಘಟ್ಟವು ಕೇವಲ ಪೈಪೋಟಿಯಷ್ಟೇ ಅಲ್ಲದೆ, ಭಾವನಾತ್ಮಕ ಬಾಂಧವ್ಯ ಮತ್ತು ಮನರಂಜನೆಯಿಂದ ಕೂಡಿದೆ. ಆರು ಮಂದಿ ಫೈನಲಿಸ್ಟ್‌ಗಳಾದ ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ಧನುಷ್ ಗೌಡ, ರಘು ಮತ್ತು ಕಾವ್ಯಾ ಅವರಲ್ಲಿ ಈ ಬಾರಿಯ ಟ್ರೋಫಿ ಯಾರ ಪಾಲಾಗಲಿದೆ ಎಂಬ ಕುತೂಹಲ ಇದೀಗ ರಾಜ್ಯಾದ್ಯಂತ ಮನೆ ಮಾಡಿದೆ. ಭಾನುವಾರ ನಡೆಯಲಿರುವ ಮಹಾ ಸಂಗ್ರಾಮದಲ್ಲಿ ವಿಜೇತರ ಹೆಸರನ್ನು ಕಿಚ್ಚ ಸುದೀಪ್ ಅಧಿಕೃತವಾಗಿ ಘೋಷಿಸಲಿದ್ದಾರೆ.
ಇಂದು ಕಿಚ್ಚನಿಲ್ಲದ ಪ್ರೀ ಫಿನಾಲೆ
ಇನ್ನು 'ಬಿಗ್ ಬಾಸ್ ಕನ್ನಡ ಸೀಸನ್ 12' ರ ಫಿನಾಲೆ ಘಟ್ಟಕ್ಕೆ ಕ್ಷಣಗಣನೆ ಆರಂಭವಾಗಿದೆ. ನಿಗದಿಯಂತೆ ಶನಿವಾರ ಅದ್ಧೂರಿ ಫಿನಾಲೆ ಜರುಗಬೇಕಿತ್ತು. ಆದರೆ ಕಿಚ್ಚ ಸುದೀಪ್ ಅವರ ಅನುಪಸ್ಥಿತಿಯಿಂದಾಗಿ ಕಾರ್ಯಕ್ರಮದ ರೂಪರೇಷೆಯಲ್ಲಿ ಕೊನೆಯ ಕ್ಷಣದ ಬದಲಾವಣೆಗಳಾಗಿವೆ ಎಂಬ ಮಾಹಿತಿ ಹೊರಬಿದ್ದಿದೆ. ಇಂದು ಬಿಗ್ ಬಾಸ್ ವೇದಿಕೆಯ ಮೇಲೆ ಸುದೀಪ್ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ಪಂದ್ಯಾವಳಿಯಲ್ಲಿ ಅವರು ಭಾಗಿಯಾಗಿರುವ ಕಾರಣ, ಇಂದು ನಡೆಯಬೇಕಿದ್ದ ಗ್ರ್ಯಾಂಡ್ ಫಿನಾಲೆಗೆ ಅಡ್ಡಿಯಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸಂಚಿಕೆಯಲ್ಲಿ ನೇರ ಫಿನಾಲೆ ಬದಲಿಗೆ ವಿಶೇಷ 'ಪ್ರೀ-ಫಿನಾಲೆ' ಕಾರ್ಯಕ್ರಮ ನಡೆಯಲಿದೆ ಎಂದು ʻಕಲರ್ಸ್ ಕನ್ನಡʼ ಮಾಹಿತಿ ನೀಡಿದೆ. ಕಿಚ್ಚನಿಲ್ಲದ ಪ್ರೀ-ಫಿನಾಲೆ ಹೇಗಿರಲಿದೆ ಎಂಬ ಬಗ್ಗೆ ವೀಕ್ಷಕರಲ್ಲಿ ಭಾರೀ ಕುತೂಹಲ ಮನೆಮಾಡಿದೆ.

