
ಕಾವ್ಯ ಸೇಫ್ ಆಗುವ ಮೂಲಕ ಫಿನಾಲೆ ರೇಸ್‌ನಲ್ಲಿ ಉಳಿದುಕೊಂಡಿದ್ದಾರೆ.
ಕನ್ನಡ ಬಿಗ್‌ಬಾಸ್| ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಧ್ರುವಂತ್ ಔಟ್, ಕಾವ್ಯ ಶೈವ ಸೇಫ್
ಧನುಷ್, ಗಿಲ್ಲಿ ನಟ, ರಘು, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಮತ್ತು ಕಾವ್ಯ ಶೈವ ಅವರು ಬಿಗ್ ಬಾಸ್ ಸೀಸನ್ 12ರ ಟಾಪ್ 6 ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಹಂತಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವೆ ನಡೆದ ರೋಚಕ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸ್ಪರ್ಧಿ ಧ್ರುವಂತ್ ಮನೆಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಅವರು ಟಾಪ್ 6 ಹಂತಕ್ಕೇರುವ ಅವಕಾಶ ಕಳೆದುಕೊಂಡರೆ, ಕಾವ್ಯ ಸೇಫ್ ಆಗುವ ಮೂಲಕ ಫಿನಾಲೆ ರೇಸ್‌ನಲ್ಲಿ ಉಳಿದುಕೊಂಡಿದ್ದಾರೆ.
ಈಗಾಗಲೇ ಮನೆಯಲ್ಲಿರುವ ಏಳು ಮಂದಿ ಸದಸ್ಯರ ಪೈಕಿ ಧನುಷ್ ಅವರು ನೇರವಾಗಿ ಫಿನಾಲೆ ತಲುಪುವ ಮೂಲಕ ಮೊದಲ ಸ್ಥಾನ ಭದ್ರಪಡಿಸಿಕೊಂಡಿದ್ದರು. ಇನ್ನುಳಿದಂತೆ ಗಿಲ್ಲಿ ನಟ, ರಘು, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯ ಶೈವ ಹಾಗೂ ಧ್ರುವಂತ್ ಕಳೆದ ವಾರ ನಾಮಿನೇಟ್ ಆಗಿದ್ದರು. ಈ ಎಲಿಮಿನೇಷನ್ ಕುರಿತು ಭಾನುವಾರದ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮೊದಲೇ ಸುಳಿವು ನೀಡಿದ್ದರು.
ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯು ಅತ್ಯಂತ ಕುತೂಹಲಕಾರಿಯಾಗಿ ಸಾಗಿತ್ತು. ಬಿಗ್ ಬಾಸ್ ಎಲ್ಲ ನಾಮಿನೇಟೆಡ್ ಸದಸ್ಯರನ್ನು ಆಕ್ಟಿವಿಟಿ ರೂಮ್‌ಗೆ ಕರೆದಿದ್ದರು. ಅಲ್ಲಿಂದ ಒಬ್ಬೊಬ್ಬರನ್ನೇ ಹೊರಗೆ ಕಳುಹಿಸುವ ಪ್ರಕ್ರಿಯೆ ಆರಂಭವಾಯಿತು. ಯಾರು ಆಕ್ಟಿವಿಟಿ ರೂಮ್‌ನಿಂದ ಹೊರಬಂದು ಮುಖ್ಯ ಮನೆಗೆ ಮರಳುತ್ತಾರೋ ಅವರು ಫಿನಾಲೆ ತಲುಪಿದಂತೆ ಎಂದು ಬಿಗ್ ಬಾಸ್ ಘೋಷಿಸಿದ್ದರು. ಈ ನಿಯಮದಂತೆ ರಕ್ಷಿತಾ, ಗಿಲ್ಲಿ ನಟ, ಅಶ್ವಿನಿ ಹಾಗೂ ರಘು ಒಬ್ಬೊಬ್ಬರಾಗಿ ಮನೆಯ ಬೇರೆ ಬೇರೆ ದ್ವಾರಗಳ ಮೂಲಕ ಮತ್ತೆ ಒಳಬಂದು ಫಿನಾಲಿಸ್ಟ್ ಆಗಿ ಆಯ್ಕೆಯಾದರು.
ಅಂತಿಮ ಹಂತದಲ್ಲಿ ಧ್ರುವಂತ್ ಮತ್ತು ಕಾವ್ಯ ಇಬ್ಬರೂ ಉಳಿದುಕೊಂಡಿದ್ದರು. ಕೊನೆಯದಾಗಿ ಅವರಿಬ್ಬರೂ ಆಕ್ಟಿವಿಟಿ ರೂಮ್‌ನಿಂದ ಹೊರಬಂದಾಗ ಅತೀವ ಕುತೂಹಲ ಮನೆಮಾಡಿತ್ತು. ಆದರೆ ಕಾವ್ಯ ಮುಖ್ಯ ದ್ವಾರದ ಮೂಲಕ ಮನೆಯೊಳಗೆ ಪ್ರವೇಶಿಸಿ ಸೇಫ್ ಆದರು. ಇತ್ತ ಧ್ರುವಂತ್ ಅವರಿಗೆ ಬಿಗ್ ಬಾಸ್ ಮನೆಯ ಮುಖ್ಯ ದ್ವಾರ ತೆರೆಯಲಿಲ್ಲ, ಈ ಮೂಲಕ ಅವರ 108 ದಿನಗಳ ಸುದೀರ್ಘ ಪಯಣ ಫಿನಾಲೆಗಿಂತ ಕೇವಲ ನಾಲ್ಕು ದಿನಗಳ ಮುನ್ನವೇ ಅಂತ್ಯಗೊಂಡಿದೆ. ಇಡೀ ಸೀಸನ್‌ನಲ್ಲಿ 'ಕಿಚ್ಚನ ಚಪ್ಪಾಳೆ' ಪಡೆದು ಪ್ರಬಲ ಸ್ಪರ್ಧಿಯಾಗಿದ್ದ ಧ್ರುವಂತ್ ಹೊರಬಿದ್ದಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಫಿನಾಲೆ ಹಂತಕ್ಕೆ ತಲುಪಿರುವ ಟಾಪ್ 6 ಸ್ಪರ್ಧಿಗಳು ಇವರು
ಧನುಷ್: ಇವರು ಮನೆಯಲ್ಲಿ ನಡೆದ ಟಾಸ್ಕ್‌ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನೇರವಾಗಿ ಫಿನಾಲೆ ತಲುಪಿದ ಮೊದಲ ಸ್ಪರ್ಧಿಯಾಗಿದ್ದರು.
ಗಿಲ್ಲಿ ನಟ: ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ಗಿಲ್ಲಿ ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗಿ ಫಿನಾಲೆ ಪ್ರವೇಶಿಸಿದ್ದಾರೆ.
ರಘು: ಮನೆಯೊಳಗೆ ತಮ್ಮದೇ ಆದ ಶೈಲಿಯಲ್ಲಿ ಆಟವಾಡುತ್ತಾ ಬಂದ ರಘು ಫಿನಾಲೆ ರೇಸ್‌ನಲ್ಲಿದ್ದಾರೆ.
ಅಶ್ವಿನಿ ಗೌಡ: ನಾಮಿನೇಷನ್ ಸುಳಿಯಿಂದ ಪಾರಾಗಿ ಮಹಿಳಾ ಸ್ಪರ್ಧಿಗಳ ಪೈಕಿ ಫಿನಾಲೆಗೆ ಆಯ್ಕೆಯಾಗಿದ್ದಾರೆ.
ರಕ್ಷಿತಾ ಶೆಟ್ಟಿ: ಮನೆಯ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರಾದ ರಕ್ಷಿತಾ ಅವರು ಅಂತಿಮ 6ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಾವ್ಯ ಶೈವ: ಧ್ರುವಂತ್ ಅವರೊಂದಿಗಿನ ಅಂತಿಮ ಹಂತದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಸೇಫ್ ಆಗುವ ಮೂಲಕ ಕಾವ್ಯ ಟಾಪ್ 6 ಸ್ಥಾನಕ್ಕೇರಿದ್ದಾರೆ.
ಬಿಗ್ ಬಾಸ್ ಕನ್ನಡ 12ರ ಫಿನಾಲೆ ಜನವರಿ 17 (ಶನಿವಾರ) ಮತ್ತು ಜನವರಿ 18 (ಭಾನುವಾರ) ರಂದು ನಡೆಯಲಿದೆ. ಈ ಎರಡು ದಿನಗಳ ಕಾಲ ಅದ್ಧೂರಿ ಫಿನಾಲೆ ಸಂಚಿಕೆಗಳು ಪ್ರಸಾರವಾಗಲಿದ್ದು, ಕಿಚ್ಚ ಸುದೀಪ್ ಅವರು ವಿಜೇತರ ಹೆಸರನ್ನು ಘೋಷಣೆ ಮಾಡಲಿದ್ದಾರೆ. ಎರಡೂ ದಿನ ಸಂಜೆ 6:30 ರಿಂದ ಕಲರ್ಸ್ ಕನ್ನಡ ವಾಹಿನಿ ಹಾಗೂ ಜಿಯೋಹಾಟ್‌ಸ್ಟಾರ್ ಒಟಿಟಿಯಲ್ಲಿ ಕಾರ್ಯಕ್ರಮ ನೇರಪ್ರಸಾರವಾಗಲಿದೆ. ಟ್ರೋಫಿ ಗೆಲ್ಲುವ ಅದೃಷ್ಟವಂತ ಸ್ಪರ್ಧಿಗೆ ಭರ್ಜರಿ 50 ಲಕ್ಷ ರೂಪಾಯಿ ನಗದು ಬಹುಮಾನದ ಜೊತೆಗೆ ಆಕರ್ಷಕ ಬಿಗ್ ಬಾಸ್ ಟ್ರೋಫಿ ಲಭಿಸಲಿದೆ.

