
ಗಿಲ್ಲಿ ನಟ
ಬಿಗ್ ಬಾಸ್ 12|ಗಿಲ್ಲಿ ಪರ ವೋಟ್ ಮಾಡಿ:ಶಾಸಕ ನರೇಂದ್ರ ಸ್ವಾಮಿ, ಡಿ.ಸಿ. ತಮ್ಮಣ್ಣ ಮನವಿ
ಮಂಡ್ಯದ ಮಣ್ಣಿನ ಮಗನ ಪರವಾಗಿ ಮಳವಳ್ಳಿಯ ಶಾಸಕ ನರೇಂದ್ರ ಸ್ವಾಮಿ ಹಾಗೂ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರು ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಅಂತಿಮ ಹಂತಕ್ಕೆ ತಲುಪುತ್ತಿದ್ದು, ಮಂಡ್ಯ ಮೂಲದ ಹಾಸ್ಯ ನಟ ಗಿಲ್ಲಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕೇವಲ ಅಭಿಮಾನಿಗಳಷ್ಟೇ ಅಲ್ಲದೆ, ಇದೀಗ ರಾಜಕೀಯ ನಾಯಕರು ಕೂಡ ಗಿಲ್ಲಿ ಪರವಾಗಿ ಪ್ರಚಾರ ಮಾಡುತ್ತಿರುವುದು ವಿಶೇಷವಾಗಿದೆ.
ಮಳವಳ್ಳಿಯ ಶಾಸಕ ನರೇಂದ್ರ ಸ್ವಾಮಿ ಹಾಗೂ ಮಾಜಿ ಸಚಿವ ಡಿ.ಸಿ. ತಮ್ಮಣ್ಣ ಅವರು ಗಿಲ್ಲಿ ನಟನಿಗೆ ಬಿಗ್ ಬಾಸ್ ಟ್ರೋಫಿ ಗೆಲ್ಲಿಸಿಕೊಡಲು ಸಾರ್ವಜನಿಕರಲ್ಲಿ ಮತ್ತು ಮಂಡ್ಯದ ಜನತೆಯಲ್ಲಿ ಮತ ನೀಡುವಂತೆ ಮನವಿ ಮಾಡಿದ್ದಾರೆ. ಮಂಡ್ಯದ ಮಣ್ಣಿನ ಮಗನಾಗಿ ಗಿಲ್ಲಿ ಅವರು ಮನೆಯೊಳಗೆ ನೀಡುತ್ತಿರುವ ಮನರಂಜನೆ ಹಾಗೂ ಅವರ ನೈಜ ಆಟವನ್ನು ನಾಯಕರು ಶ್ಲಾಘಿಸಿದ್ದಾರೆ.
"ನಮ್ಮ ಜಿಲ್ಲೆಯ ಪ್ರತಿಭೆ ಅಂತರಾಷ್ಟ್ರೀಯ ಮಟ್ಟದ ರಿಯಾಲಿಟಿ ಶೋನಲ್ಲಿ ಮಿಂಚುತ್ತಿರುವುದು ನಮಗೆ ಹೆಮ್ಮೆ. ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡುವ ಮೂಲಕ ವಿನ್ನರ್ ಮಾಡೋಣ" ಎಂದು ನಾಯಕರು ಕರೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಮಂಡ್ಯ ಜಿಲ್ಲೆಯಾದ್ಯಂತ ಗಿಲ್ಲಿ ಅಭಿಮಾನಿಗಳ ಕ್ರೇಜ್ ಹೆಚ್ಚಾಗಿದ್ದು, ವಿವಿಧೆಡೆ ಬೈಕ್ ರ್ಯಾಲಿ ಹಾಗೂ ಬ್ಯಾನರ್ ಹಚ್ಚುವ ಮೂಲಕ ಬೆಂಬಲ ವ್ಯಕ್ತಪಡಿಸಲಾಗುತ್ತಿದೆ. ಕಿಚ್ಚ ಸುದೀಪ್ ಅವರ ಸಮ್ಮುಖದಲ್ಲಿ ನಡೆಯಲಿರುವ ಫಿನಾಲೆಯಲ್ಲಿ ಗಿಲ್ಲಿ ನಟ ಕಿರೀಟ ತೊಡಲಿದ್ದಾರೆಯೇ ಎಂಬ ಕುತೂಹಲಕ್ಕೆ ಜನವರಿ 18ರಂದು ಉತ್ತರ ಸಿಗಲಿದೆ.
ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಮನೆಯೊಳಗೆ ಗಿಲ್ಲಿ ನಟನ ಆಟ ಅತ್ಯಂತ ಕುತೂಹಲಕಾರಿಯಾಗಿದೆ. ಈ ವಾರ ನಡೆದ ಕಠಿಣ ಟಾಸ್ಕ್‌ಗಳಲ್ಲಿ ಗಿಲ್ಲಿ ಅವರು ಕೇವಲ ಹಾಸ್ಯಕ್ಕಷ್ಟೇ ಸೀಮಿತವಾಗದೆ, ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಪ್ರದರ್ಶಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ವಿಶೇಷವಾಗಿ ಟಿಕೆಟ್ ಟು ಫಿನಾಲೆ ಹಂತದ ಟಾಸ್ಕ್‌ಗಳಲ್ಲಿ ಇತರ ಬಲಿಷ್ಠ ಸ್ಪರ್ಧಿಗಳಿಗೆ ಸರಿಸಮಾನವಾಗಿ ಹೋರಾಡುವ ಮೂಲಕ ತಾವು ಕೇವಲ ಎಂಟರ್ಟೈನರ್ ಮಾತ್ರವಲ್ಲ, ಉತ್ತಮ ಸ್ಪರ್ಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಸದ್ಯದ ವೋಟಿಂಗ್ ಟ್ರೆಂಡ್‌ಗಳಲ್ಲಿ ಗಿಲ್ಲಿ ನಟ ಅಗ್ರಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಮನೆಯೊಳಗೆ ರಜತ್ ಅವರಂತಹ ಪ್ರಬಲ ಸ್ಪರ್ಧಿಗಳಿಗೆ ಮುಖಾಮುಖಿಯಾಗಿ ನೀಡಿದ ಚಾಲೆಂಜ್‌ಗಳು ಮತ್ತು ಸೀಕ್ರೆಟ್ ಟಾಸ್ಕ್‌ಗಳ ಮೂಲಕ ಅವರು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಟಾಪ್ 7 ಸ್ಪರ್ಧಿಗಳಲ್ಲಿ ಒಬ್ಬರಾಗಿ ಫಿನಾಲೆ ವೇದಿಕೆ ಏರಲು ಸನ್ನದ್ಧರಾಗಿದ್ದಾರೆ.

