ಬಿಗ್ ಬಾಸ್ 12|ಫಿನಾಲೆಗೆ ಧನುಷ್ ಎಂಟ್ರಿ; ಗಿಲ್ಲಿ ನಟನಿಗೆ ಹಿನ್ನಡೆ
x

ಬಿಗ್‌ಬಾಸ್‌ನಲ್ಲಿ ಗಿಲ್ಲಿ ನಟನನ್ನೇ ಹಿಂದಿಕ್ಕಿ ಫಿನಾಲೆಗೆ ಹಾರಿದ ಧನುಷ್

ಬಿಗ್ ಬಾಸ್ 12|ಫಿನಾಲೆಗೆ ಧನುಷ್ ಎಂಟ್ರಿ; ಗಿಲ್ಲಿ ನಟನಿಗೆ ಹಿನ್ನಡೆ

ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಮತ್ತು ಮೊದಲು ಫಿನಾಲೆ ತಲುಪಬಹುದು ಎಂದು ಊಹಿಸಲಾಗಿದ್ದ ಗಿಲ್ಲಿ ನಟ ಅವರು ಟಾಪ್ 6 ಆಟದಲ್ಲಿ ಎಡವಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.


Click the Play button to hear this message in audio format

‘ಬಿಗ್ ಬಾಸ್ ಕನ್ನಡ ಸೀಸನ್ 12’ ಈಗ ಕುತೂಹಲದ ಘಟ್ಟ ತಲುಪಿದ್ದು, ಯಾರು ವಿನ್ನರ್ ಆಗಲಿದ್ದಾರೆ ಎಂಬ ಚರ್ಚೆ ಎಲ್ಲೆಡೆ ಜೋರಾಗಿದೆ. ಈ ರೇಸ್‌ನಲ್ಲಿ ಅತಿ ಹೆಚ್ಚು ನಿರೀಕ್ಷೆ ಮೂಡಿಸಿದ್ದ ಗಿಲ್ಲಿ ನಟ ಅವರು ಟಾಪ್ 6 ಆಟದಲ್ಲಿ ಎಡವಿರುವುದು ಅವರ ಅಭಿಮಾನಿಗಳಿಗೆ ಕೊಂಚ ನಿರಾಸೆ ತಂದಿದೆ. ಗಿಲ್ಲಿ ನಟ ಅವರೇ ಮೊದಲು ಫಿನಾಲೆ ಹಂತ ತಲುಪಲಿದ್ದಾರೆ ಎಂದು ಎಲ್ಲರೂ ಊಹಿಸಿದ್ದರು, ಆದರೆ ಇದೀಗ ಧನುಷ್, ಅಧಿಕೃತವಾಗಿ ಫಿನಾಲೆ ಪ್ರವೇಶಿಸಿದ ಮೊದಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಕಳೆದ ವಾರ ಮನೆಯ ಕ್ಯಾಪ್ಟನ್ ಆಗಿದ್ದ ಧನುಷ್ ಅವರಿಗೆ ಸೀಸನ್‌ನ ಕೊನೆಯ ಕ್ಯಾಪ್ಟನ್ ಎಂಬ ಕಾರಣಕ್ಕೆ ವಿಶೇಷ ಅಧಿಕಾರಗಳು ಲಭಿಸಿದ್ದವು. ಇದರ ಲಾಭ ಪಡೆದ ಅವರು ಟಾಪ್ 6 ಸ್ಥಾನಕ್ಕಾಗಿ ನಡೆದ ಕಠಿಣ ಟಾಸ್ಕ್‌ನಲ್ಲಿ ನೇರವಾಗಿ ಪಾಲ್ಗೊಳ್ಳುವ ಅವಕಾಶ ಪಡೆದರು. ಅಶ್ವಿನಿ ಗೌಡ, ರಘು ಮತ್ತು ಕಾವ್ಯಾ ಶೈವ ಅವರ ವಿರುದ್ಧ ನಡೆದ ಈ ಕಠಿಣ ಸ್ಪರ್ಧೆಯಲ್ಲಿ ಧನುಷ್ ಅತ್ಯಂತ ವೇಗವಾಗಿ ಟಾಸ್ಕ್ ಪೂರ್ಣಗೊಳಿಸುವ ಮೂಲಕ ಫಿನಾಲೆ ಟಿಕೆಟ್ ಗಿಟ್ಟಿಸಿಕೊಂಡರು. ಧನುಷ್ ಅವರ ಈ ಸಾಧನೆಗೆ ಅವರ ಅಭಿಮಾನಿಗಳು ಹಾಗೂ ಮನೆಯಲ್ಲಿ ಅವರಿಗೆ ಆಪ್ತರಾಗಿರುವ ರಾಶಿಕಾ ಶೆಟ್ಟಿ ಅವರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ.

ಆರಂಭದ ದಿನಗಳಲ್ಲಿ ಧನುಷ್ ಅವರು ಆಟದಲ್ಲಿ ಅಷ್ಟಾಗಿ ಸಕ್ರಿಯರಾಗಿರಲಿಲ್ಲ ಮತ್ತು ಮನರಂಜನೆಯ ವಿಷಯದಲ್ಲಿ ಹಿಂದುಳಿದಿದ್ದರು ಎಂಬ ಮಾತು ಕೇಳಿಬಂದಿತ್ತು. ಆದರೆ ಸಮಯ ಬಂದಾಗ ಟಾಸ್ಕ್‌ಗಳನ್ನು ಸಮರ್ಥವಾಗಿ ಎದುರಿಸಿದ ಅವರು ಸದ್ದಿಲ್ಲದೆ ಫಿನಾಲೆಗೆ ಲಗ್ಗೆ ಇಟ್ಟಿದ್ದಾರೆ. ಕಿರುತೆರೆಯ ಜನಪ್ರಿಯ ನಟನಾಗಿರುವ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಮತಗಳ ವಿಚಾರದಲ್ಲೂ ಅವರು ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ಸಿಕ್ಕಿದೆ.

ಮತ್ತೊಂದೆಡೆ ಗಿಲ್ಲಿ ನಟ ಅವರು ಈ ಸೀಸನ್‌ನ ಅತ್ಯಂತ ಜನಪ್ರಿಯ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಒಳಗಿರುವಾಗಲೇ ಅವರ ಇನ್​ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ 10 ಲಕ್ಷ ದಾಟಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ತಮ್ಮ ಕನಸಿನ ಮೈಲಿಗಲ್ಲನ್ನು ತಲುಪಿರುವ ಗಿಲ್ಲಿ ನಟ ಅವರು ಫಿನಾಲೆ ಹಂತದಲ್ಲಿ ಧನುಷ್ ಹಾಗೂ ಇತರ ಸ್ಪರ್ಧಿಗಳಿಗೆ ಯಾವ ರೀತಿ ಟಕ್ಕರ್ ಕೊಡಲಿದ್ದಾರೆ ಮತ್ತು ಅಂತಿಮವಾಗಿ ಟ್ರೋಫಿ ಯಾರ ಪಾಲಾಗಲಿದೆ ಎಂಬುದನ್ನು ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

Read More
Next Story