ಬರ್ಲಿನ್ ಚಿತ್ರೋತ್ಸವ ಬಹಿಷ್ಕರಿಸಿದ ಅರುಂಧತಿ ರಾಯ್
x
ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿ ಅರುಂಧತಿ ರಾಯ್

ಬರ್ಲಿನ್ ಚಿತ್ರೋತ್ಸವ ಬಹಿಷ್ಕರಿಸಿದ ಅರುಂಧತಿ ರಾಯ್

ಗಾಜಾ ನರಮೇಧದ ಕುರಿತು ಬರ್ಲಿನ್ ಚಿತ್ರೋತ್ಸವದ ಜ್ಯೂರಿ ನೀಡಿದ 'ರಾಜಕೀಯೇತರ' ಹೇಳಿಕೆಗಳಿಂದ ಅರುಂಧತಿ ರಾಯ್ ಅಸಮಾಧಾನಗೊಂಡಿದ್ದಾರೆ. ಶಾರುಖ್ ಖಾನ್ ಅವರ ಮೊದಲ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಿ ಲೇಖಕಿ ಪ್ರತಿಭಟನೆ ನಡೆಸಿದ್ದಾರೆ.


ಬೂಕರ್‌ ಪ್ರಶಸ್ತಿ ವಿಜೇತ ಲೇಖಕಿ ಅರುಂಧತಿ ರಾಯ್ ಅವರು ಪ್ರತಿಷ್ಠಿತ ಬರ್ಲಿನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಿಂದ ಹೊರಬಂದಿದ್ದಾರೆ. ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಮಾನವೀಯ ಬಿಕ್ಕಟ್ಟಿನ ಕುರಿತು ಚಿತ್ರೋತ್ಸವದ ಜ್ಯೂರಿ ಸದಸ್ಯರು ನೀಡಿದ ಹೇಳಿಕೆಗಳು "ಆಘಾತಕಾರಿ ಮತ್ತು ಅಸಹ್ಯಕರವಾಗಿವೆ" ಎಂದು ರಾಯ್ ಕಿಡಿಕಾರಿದ್ದಾರೆ.

ವಿವಾದಕ್ಕೆ ಕಾರಣವೇನು?

ಚಲನಚಿತ್ರೋತ್ಸವದ ಉದ್ಘಾಟನಾ ಪತ್ರಿಕಾಗೋಷ್ಠಿಯಲ್ಲಿ ಜ್ಯೂರಿ ಅಧ್ಯಕ್ಷ ಮತ್ತು ಖ್ಯಾತ ನಿರ್ದೇಶಕ ವಿಮ್ ವೆಂಡರ್ಸ್, "ಸಿನಿಮಾ ರಾಜಕೀಯದಿಂದ ದೂರವಿರಬೇಕು" ಹೇಳಿದ್ದರು. ಗಾಜಾ ಸಂಘರ್ಷ ಮತ್ತು ಇಸ್ರೇಲ್‌ಗೆ ಜರ್ಮನಿ ನೀಡುತ್ತಿರುವ ಬೆಂಬಲದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ, ಕಲಾವಿದರು ರಾಜಕೀಯಕ್ಕೆ ಪ್ರತಿಯಾಗಿ ಮಾನವೀಯ ಕೆಲಸ ಮಾಡಬೇಕೇ ಹೊರತು ನೇರ ರಾಜಕೀಯದಲ್ಲಿ ಭಾಗಿಯಾಗಬಾರದು ಎಂಬ ಧಾಟಿಯಲ್ಲಿ ಮಾತನಾಡಿದ್ದರು.

ಇದಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಅರುಂಧತಿ ರಾಯ್, "ಕಲೆ ರಾಜಕೀಯವಾಗಿರಬಾರದು ಎಂಬ ಮಾತು ಆಘಾತಕಾರಿ. ಕಣ್ಣೆದುರೇ ಮಾನವೀಯತೆಯ ವಿರುದ್ಧ ಅಪರಾಧಗಳು ನಡೆಯುತ್ತಿರುವಾಗ ಕಲಾವಿದರು ಮತ್ತು ಲೇಖಕರು ಮೌನವಾಗಿರುವುದು ಅಕ್ಷಮ್ಯ. ಇಸ್ರೇಲ್ ಗಾಜಾದಲ್ಲಿ ನಡೆಸುತ್ತಿರುವುದು ಪ್ಯಾಲೆಸ್ಟೀನಿಯನ್ನರ ನರಮೇಧ," ಎಂದು ಗುಡುಗಿದ್ದಾರೆ. "ಇತಿಹಾಸ ನಮ್ಮನ್ನು ಗಮನಿಸುತ್ತಿದೆ, ಈ ಕಾಲದ ದೊಡ್ಡ ಕಲಾವಿದರು ಧ್ವನಿ ಎತ್ತದಿದ್ದರೆ ಇತಿಹಾಸ ಅವರನ್ನು ಕ್ಷಮಿಸುವುದಿಲ್ಲ," ಎಂದು ಅವರು ಎಚ್ಚರಿಸಿದ್ದಾರೆ.

ಶಾರುಖ್ ಖಾನ್ ಮೊದಲ ಚಿತ್ರದ ಪ್ರದರ್ಶನ ಇತ್ತು!

ಅರುಂಧತಿ ರಾಯ್ ಅವರು 1989ರಲ್ಲಿ ಚಿತ್ರಕಥೆ ಬರೆದು ನಟಿಸಿದ್ದ 'ಇನ್ ವಿಚ್ ಅ್ಯನಿ ಗಿವ್ಸ್ ಇಟ್ ದೋಸ್ ಒನ್ಸ್' ಚಿತ್ರದ 4K ಡಿಜಿಟಲ್ ಆವೃತ್ತಿಯನ್ನು ಈ ಚಿತ್ರೋತ್ಸವದ 'ಕ್ಲಾಸಿಕ್ಸ್' ವಿಭಾಗದಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿತ್ತು. ವಿಶೇಷವೆಂದರೆ, ಇದು ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಮೊದಲ ಚಿತ್ರ ಕೂಡ ಹೌದು. ಈ ಸಿನಿಮಾದ ಪ್ರದರ್ಶನಕ್ಕಾಗಿ ರಾಯ್ ಬರ್ಲಿನ್‌ಗೆ ಹೋಗಬೇಕಿತ್ತು. ಆದರೆ ಜ್ಯೂರಿ ಹೇಳಿಕೆಯಿಂದ ಮನನೊಂದ ಅವರು ಈಗ ಕಾರ್ಯಕ್ರಮಕ್ಕೆ ಹೋಗದಿರಲು ನಿರ್ಧರಿಸಿದ್ದಾರೆ.

ಚಿತ್ರೋತ್ಸವದ ಪ್ರತಿಕ್ರಿಯೆ

ಅರುಂಧತಿ ರಾಯ್ ಅವರ ನಿರ್ಧಾರಕ್ಕೆ ಬರ್ಲಿನೇಲ್ ಚಿತ್ರೋತ್ಸವದ ವಕ್ತಾರರು ಪ್ರತಿಕ್ರಿಯಿಸಿದ್ದು, "ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಅವರ ಉಪಸ್ಥಿತಿಯು ಚಿತ್ರೋತ್ಸವದ ಚರ್ಚೆಗಳನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತಿತ್ತು, ಅವರು ಬಾರದಿರುವುದು ನಮಗೆ ವಿಷಾದ ತಂದಿದೆ," ಎಂದು ತಿಳಿಸಿದ್ದಾರೆ.

Read More
Next Story