ಅರುಂಧತಿ ರಾಯ್ ಅವರಿಗೆ ಪಿಇಎನ್‌ ಪಿಂಟರ್ ಪ್ರಶಸ್ತಿ
x

ಅರುಂಧತಿ ರಾಯ್ ಅವರಿಗೆ ಪಿಇಎನ್‌ ಪಿಂಟರ್ ಪ್ರಶಸ್ತಿ

1997 ರಲ್ಲಿ ಅರುಂದತಿ ರಾಯ್‌ ತಮ್ಮ ಚೊಚ್ಚಲ ಕಾದಂಬರಿ, ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್‌ ಗೆ ಬೂಕರ್ ಪ್ರಶಸ್ತಿ ಗಳಿಸಿದರು. ನೊಬೆಲ್‌ ಪುರಸ್ಕೃತ ನಾಟಕಕಾರ ಹೆರಾಲ್ಡ್‌ ಪಿಂಟರ್‌ ನೆನಪಿನಲ್ಲಿ ಪೆನ್‌ ಪಿಂಟರ್‌ ಪ್ರಶಸ್ತಿಯನ್ನು 2009 ರಲ್ಲಿ ಸ್ಥಾಪಿಸಲಾಯಿತು. ಈ ಪುರಸ್ಕಾರವನ್ನು ಫೇಬರ್ ಮತ್ತು ರುತ್ ಮ್ಯಾಕ್ಸ್ಟೆಡ್ ಬೆಂಬಲಿಸಿದೆ.


ಲೇಖಕಿ ಅರುಂಧತಿ ರಾಯ್ ಅವರು 2024 ರ ಪಿಇಎನ್‌ ಪಿಂಟರ್ ಪ್ರಶಸ್ತಿಗೆ ಪಾತ್ಯರವಾಗಿದ್ದಾರೆ.

ದಿವಂಗತ ನಾಟಕಕಾರ ಹೆರಾಲ್ಡ್ ಪಿಂಟರ್ ಅವರ ಮಾತಿನ ಪ್ರಕಾರ, ʻಪ್ರಪಂಚದ ಮೇಲೆ ಅಚಲವಾದ, ಹಿಮ್ಮೆಟ್ಟದ ನೋಟವನ್ನು ಬೀರುವ ಹಾಗೂ ನಮ್ಮ ಜೀವನ ಮತ್ತು ಸಮಾಜಗಳ ನೈಜ ಸತ್ಯವನ್ನು ವ್ಯಾಖ್ಯಾನಿಸಲು ಉಗ್ರ ಬೌದ್ಧಿಕ ಬದ್ಧತೆಯನ್ನು ಪ್ರದರ್ಶಿಸುವ ಬರಹಗಾರನಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ,ʼ.

2010 ರಲ್ಲಿ ನವದೆಹಲಿಯಲ್ಲಿ ನಡೆದ ಸೆಮಿನಾರ್‌ನಲ್ಲಿ ನೀಡಿದ ಹೇಳಿಕೆಗಾಗಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಕಾಶ್ಮೀರ ಮೂಲದ ಶೇಖ್ ಶೌಕತ್ ಹುಸೇನ್ ಹಾಗೂ ರಾಯ್ ಅವರನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಅನುಮತಿ ನೀಡಿದ ಕೆಲವು ದಿನಗಳ ನಂತರ ಈ ಪುರಸ್ಕಾರ ಬಂದಿದೆ. ಅಕ್ಟೋಬರ್ 10 ರಂದು ಬ್ರಿಟಿಷ್ ಲೈಬ್ರರಿ ಸಹಯೋಗದಲ್ಲಿ ನಡೆಯುವ ಸಮಾರಂಭದಲ್ಲಿ ರಾಯ್‌ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ʻಪೆನ್‌ ಪಿಂಟರ್‌ ಪ್ರಶಸ್ತಿಯನ್ನು ಸ್ವೀಕರಿಸಲು ಸಂತೋಷಪಡುತ್ತೇನೆ,ʼ ಎಂದು ರಾಯ್ ಹೇಳಿದರು. ʻಜಗತ್ತು ಗ್ರಹಿಸಲು ಸಾಧ್ಯವಿಲ್ಲದ ತಿರುವು ಗಳನ್ನು ತೆಗೆದುಕೊಳ್ಳುತ್ತಿರುವ ಕಾಲದಲ್ಲಿ ಆ ಕುರಿತು ಬರೆಯಲು ಹೆರಾಲ್ಡ್ ಪಿಂಟರ್ ಇಂದು ನಮ್ಮೊಂದಿಗೆ ಇರಬೇಕಿತ್ತೆಂದು ಆಶಿಸುತ್ತೇನೆ. ಅವರು ಇಲ್ಲದ ಕಾರಣ, ಆ ಜಾಗವನ್ನು ತುಂಬಲು ಕೈಲಾದಷ್ಟು ಪ್ರಯತ್ನಿಸಬೇಕು,ʼ ಎಂದು ಹೇಳಿದರು.

ʻಕಾಶ್ಮೀರದ ವಿವಾದಿತ ಪ್ರದೇಶವು ಎಂದಿಗೂ ಭಾರತದ ಅವಿಭಾಜ್ಯ ಭಾಗವಾಗಿರಲಿಲ್ಲʼ ಎಂಬ ರಾಯ್ ಅವರ ಹೇಳಿಕೆ ಮೇಲೆ ಕಾನೂನು ಕ್ರಮ ಜರುಗಿಸಬಾರದೆಂದು 200 ಕ್ಕೂ ಹೆಚ್ಚು ಶಿಕ್ಷಣ ತಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರು ಜೂನ್ 14 ರಂದು ಬಹಿರಂಗ ಪತ್ರ ಬರೆದಿದ್ದರು.

ಆಯ್ಕೆ ಮಂಡಳಿಯಲ್ಲಿ ರುತ್‌ ಬೋರ್ತ್ವಿಕ್‌, ನಟ ಖಾಲಿದ್‌ ಅಬ್ದಲ್ಲಾ ಹಾಗೂ ಲೇಖಕ-ಸಂಗೀತಕಾರ ರೋಜರ್‌ ರಾಬಿನ್ಸನ್‌ ಇದ್ದರು. ಬುದ್ಧಿವಂತಿಕೆ, ಸೌಂದರ್ಯದೊಂದಿಗೆ ಅನ್ಯಾಯದ ಕಥೆಗಳ ಅನಾವರಣ: 1997 ರಲ್ಲಿ ಅರುಂದತಿ ರಾರ್‌ ತಮ್ಮ ಚೊಚ್ಚಲ ಕಾದಂಬರಿ, ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್‌ ಗೆ ಬೂಕರ್ ಪ್ರಶಸ್ತಿ ಗಳಿಸಿದರು. ರುತ್‌ ಬೋ‌ರ್ತವಿಕ್‌ ಪ್ರಕಾರ, 'ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯಲ್ಲಿ ಸಕ್ರಿಯ ವಾಗಿರುವ ಲೇಖಕಿ. ಬುದ್ಧಿವಂತಿಕೆ ಮತ್ತು ಸೌಂದರ್ಯದೊಂದಿಗೆ ಅನ್ಯಾಯದ ಕಥೆಗಳನ್ನು ಹೇಳುತ್ತಾರೆ. ಅಂತಾರಾಷ್ಟ್ರೀಯ ಚಿಂತಕಿ ಮತ್ತು ಅವರ ಪ್ರಬಲ ಧ್ವನಿಯನ್ನು ಮೌನಗೊಳಿಸಲು ಆಗದು,ʼ ಎಂದಿದ್ದಾರೆ.

ಖಾಲಿದ್ ಅಬ್ದಲ್ಲಾ ಪ್ರತಿಕ್ರಿಯಿಸಿ, ʻರಾಯ್ ಅವರು ಸ್ವಾತಂತ್ರ್ಯ ಮತ್ತು ನ್ಯಾಯದ ಪ್ರಕಾಶಮಾನವಾದ ಧ್ವನಿ. ಅವರ ಮಾತುಗಳು ತೀವ್ರ ಸ್ಪಷ್ಟತೆ ಮತ್ತು ನಿರ್ಧಾರಗಳೊಂದಿಗೆ ಬಂದಿವೆ,ʼ ಎನ್ನುತ್ತಾರೆ.

ಇದಕ್ಕೆ ಧ್ವನಿಗೂಡಿಸಿರುವ ರೋಜರ್ ರಾಬಿನ್ಸನ್, ʻರಾಯ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆಯಾದರು. ಇದು ಸಾಹಿತ್ಯಕ್ಕೆ ಅವರ ಅಪ್ರತಿಮ ಕೊಡುಗೆಗೆ ಸಾಕ್ಷಿಯಾಗಿದೆ. ಪರಿಸರ ನಾಶದಿಂದ ಹಿಡಿದು ಮಾನವ ಹಕ್ಕುಗಳ ದುರುಪಯೋಗ ಕುರಿತು ರಾಯ್ ಅವರ ಕಟುವಾದ ವ್ಯಾಖ್ಯಾನವು ಅಂಚಿನಲ್ಲಿರುವವರ ಪರವಾಗಿ ಮತ್ತು ಯಥಾಸ್ಥಿತಿಗೆ ಸವಾಲು ಹಾಕುವ ಅವರ ಬದ್ಧತೆಯನ್ನು ಪ್ರದರ್ಶಿಸು ತ್ತದೆ,ʼ ಎಂದಿದ್ದಾರೆ.

ರಾಯ್ ಅವರ ಎರಡನೇ ಕಾದಂಬರಿ ದಿ ಮಿನಿಸ್ಟ್ರಿ ಆಫ್ ಅಟ್ಮೋಸ್ಟ್ ಹ್ಯಾಪಿನೆಸ್ ( 2017). ಇನ್ನಿತರ ಪುಸ್ತಕಗಳು ಕ್ಯಾಪಿಟಲಿಸಂ: ಎ ಘೋಸ್ಟ್ ಸ್ಟೋರಿ ಮತ್ತು ದಿ ಆಲ್ಜೀಬ್ರಾ ಆಫ್ ಇನ್‌ ಫೈನೈಟ್ ಜಸ್ಟೀಸ್.

ಪೆನ್‌ ಪಿಂಟರ್‌ ಪ್ರಶಸ್ತಿಯ ಹಿಂದಿನ ವಿಜೇತರು ಮಾಲೋರಿ ಬ್ಲ್ಯಾಕ್‌ಮನ್, ಸಿಟ್ಸಿ ದಂಗರೆಂಬ್ಗಾ, ಮಾರ್ಗರೆಟ್ ಅಟ್ವುಡ್ ಮತ್ತು ಸಲ್ಮಾನ್ ರಶ್ದಿ. ‌ 2023 ರಲ್ಲಿ ಮೈಕೆಲ್ ರೋಸೆನ್ ಅವರು ಪ್ರಶಸ್ತಿ ಪಡೆದರು. ನೊಬೆಲ್‌ ಪುರಸ್ಕೃತ ನಾಟಕಕಾರನ ನೆನಪಿನಲ್ಲಿ ಪೆನ್‌ ಪಿಂಟರ್‌ ಪ್ರಶಸ್ತಿ ಯನ್ನು 2009 ರಲ್ಲಿ ಸ್ಥಾಪಿಸಲಾಯಿತು. ಯುನೈಟೆಡ್ ಕಿಂಗ್‌ಡಮ್, ಐರ್ಲೆಂಡ್ ಅಥವಾ ಕಾಮನ್‌ವೆಲ್ತ್‌ ದೇಶಗಳ ಬರಹಗಾರರಿಗೆ ವಾರ್ಷಿಕವಾಗಿ ನೀಡುವ ಈ ಪುರಸ್ಕಾರವನ್ನು ಫೇಬರ್ ಮತ್ತು ರುತ್ ಮ್ಯಾಕ್ಸ್ಟೆಡ್ ಬೆಂಬಲಿಸಿದೆ.

Read More
Next Story