ಬಾಲಿವುಡ್ ನಟಿ ಅಮೀಷಾ ಪಟೇಲ್‌ಗೆ ಜಾಮೀನು ರಹಿತ ವಾರಂಟ್
x

ಬಾಲಿವುಡ್ ನಟಿ ಅಮೀಷಾ ಪಟೇಲ್ ವಿರುದ್ಧ ಉತ್ತರ ಪ್ರದೇಶದ ಮೊರಾದಾಬಾದ್ ನ್ಯಾಯಾಲಯ ಜಾಮೀನು ರಹಿತ ವಾರೆಂಟ್‌ ಹೊರಡಿಸಿದೆ. 

ಬಾಲಿವುಡ್ ನಟಿ ಅಮೀಷಾ ಪಟೇಲ್‌ಗೆ ಜಾಮೀನು ರಹಿತ ವಾರಂಟ್

ಬಾಲಿವುಡ್ ನಟಿ ಅಮೀಷಾ ಪಟೇಲ್ ವಿರುದ್ಧ ಉತ್ತರ ಪ್ರದೇಶದ ಮೊರಾದಾಬಾದ್ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರಂಟ್ ಹೊರಡಿಸಲಾಗಿದೆ.


Click the Play button to hear this message in audio format

2017ರ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ ವಿವಾದದಲ್ಲಿ ಬಾಲಿವುಡ್ ನಟಿ ಅಮೀಷಾ ಪಟೇಲ್ ವಿರುದ್ಧ ಉತ್ತರ ಪ್ರದೇಶದ ಮೊರಾದಾಬಾದ್ ನ್ಯಾಯಾಲಯವು ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ನಟಿ ಅಮೀಷಾ ಪಟೇಲ್ ಮೌನ ಮುರಿದಿದ್ದು, ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಏನಿದು ಪ್ರಕರಣ?

2017ರಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲು ಕಾರ್ಯಕ್ರಮ ಆಯೋಜಕ ಪವನ್ ವರ್ಮಾ ಅವರು ಅಮೀಷಾ ಪಟೇಲ್ ಅವರನ್ನು ಬುಕ್ ಮಾಡಿದ್ದರು. ಆರೋಪದ ಪ್ರಕಾರ, ನವೆಂಬರ್ 16ರಂದು ನಡೆಯಬೇಕಿದ್ದ ಕಾರ್ಯಕ್ರಮಕ್ಕಾಗಿ ನಟಿಗೆ 14.50 ಲಕ್ಷ ರೂ. ಮುಂಗಡ ಹಣ ನೀಡಲಾಗಿತ್ತು ಮತ್ತು ಅವರ ವಾಸ್ತವ್ಯಕ್ಕೆ ಹೋಟೆಲ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಿಗದಿತ ದಿನದಂದು ಅಮೀಷಾ ಪಟೇಲ್ ಕಾರ್ಯಕ್ರಮಕ್ಕೆ ಹಾಜರಾಗಿರಲಿಲ್ಲ. ನಂತರ ನಡೆದ ಮಾತುಕತೆಯಲ್ಲಿ 10 ಲಕ್ಷ ರೂ. ನಗದನ್ನು ಹಿಂತಿರುಗಿಸಲಾಗಿತ್ತು. ಆದರೆ ಬಾಕಿ 4.50 ಲಕ್ಷ ರೂ. ಚೆಕ್ ಬೌನ್ಸ್ ಆಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಯೋಜಕರು ನ್ಯಾಯಾಲಯದ ಮೊರೆ ಹೋಗಿದ್ದರು.

ಅಮೀಷಾ ಪಟೇಲ್ ಸ್ಪಷ್ಟನೆ

ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಸುದೀರ್ಘ ಟಿಪ್ಪಣಿ ಹಂಚಿಕೊಂಡಿರುವ ಅಮೀಷಾ ಪಟೇಲ್, ಇದು ಹಲವಾರು ವರ್ಷಗಳ ಹಿಂದಿನ ಹಳೆಯ ಪ್ರಕರಣವಾಗಿದೆ. ಪವನ್ ವರ್ಮಾ ಎಂಬುವವರು ಈ ಹಿಂದೆ ಇತ್ಯರ್ಥ ಪತ್ರಕ್ಕೆ ಸಹಿ ಹಾಕಿದ್ದರು ಮತ್ತು ಒಪ್ಪಂದದ ಪೂರ್ಣ ಮೊತ್ತವನ್ನು ಪಡೆದುಕೊಂಡಿದ್ದರು. ಹೀಗಿದ್ದರೂ ಅವರು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾನೂನು ಹೋರಾಟದ ಎಚ್ಚರಿಕೆ

ತಮ್ಮ ವಕೀಲರು ಪವನ್ ವರ್ಮಾ ವಿರುದ್ಧ ವಂಚನೆಗಾಗಿ ಸೂಕ್ತ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡಲಿದ್ದಾರೆ ಎಂದು ನಟಿ ತಿಳಿಸಿದ್ದಾರೆ. ಕೇವಲ ಪ್ರಚಾರಕ್ಕಾಗಿ ಮತ್ತು ಸುಳ್ಳು ನೆಪದಲ್ಲಿ ಇಂತಹ ಪ್ರದರ್ಶನ ಸೃಷ್ಟಿಸುವವರನ್ನು ನಾನು ನಿರ್ಲಕ್ಷಿಸಲು ಬಯಸುತ್ತೇನೆ ಮತ್ತು ನನ್ನ ಕೆಲಸದ ಮೇಲೆ ಗಮನ ಕೇಂದ್ರೀಕರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಹಲವು ಬಾರಿ ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ನೀಡಿದ್ದರೂ ನಟಿ ಗೈರುಹಾಜರಾದ ಕಾರಣ ಈ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಮುಂದಿನ ವಿಚಾರಣೆಯಲ್ಲಿ ಸತ್ಯಾಸತ್ಯತೆ ಹೊರಬೀಳಬೇಕಿದೆ.

`ಗದರ್ 2' ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಬಾಲಿವುಡ್ ನಟಿ ಅಮೀಷಾ ಪಟೇಲ್ ಮತ್ತೆ ಸುದ್ದಿಯಲ್ಲಿದ್ದಾರೆ. ಸುದೀರ್ಘ ವಿರಾಮದ ಬಳಿಕ ಬೆಳ್ಳಿಪರದೆಗೆ ಮರಳಿದ ಅವರಿಗೆ ಸದ್ಯ ಅಭಿಮಾನಿಗಳಿಂದ ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು, ಅವರ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಸಿನಿರಂಗದಲ್ಲಿ ಕುತೂಹಲ ಮನೆಮಾಡಿದೆ. ಅಮೀಷಾ ಪಟೇಲ್ ಅವರ ಮುಂದಿನ ಸಿನಿಮಾಗಳ ಪಟ್ಟಿಯಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವುದು 'ಗದರ್ 3'. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದ ಅಮೀಷಾ, 'ಗದರ್ 3' ಸಿನಿಮಾ ದೊಡ್ಡ ಮಟ್ಟದಲ್ಲಿ ಮೂಡಿಬರಲಿದೆ ಎಂಬ ಸುಳಿವು ನೀಡಿದ್ದಾರೆ. ಸನ್ನಿ ಡಿಯೋಲ್ ಮತ್ತು ಅಮೀಷಾ ಜೋಡಿಯನ್ನು ಮತ್ತೆ ಪರದೆಯ ಮೇಲೆ ನೋಡಲು ಪ್ರೇಕ್ಷಕರು ಕಾಯುತ್ತಿದ್ದು, ಈ ಚಿತ್ರದ ಅಧಿಕೃತ ಘೋಷಣೆಗಾಗಿ ಚಿತ್ರತಂಡ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ನಟನೆಯ ಜೊತೆಗೆ ಅಮೀಷಾ ಪಟೇಲ್ ಅವರು ತಮ್ಮದೇ ಆದ 'ಅಮೀಷಾ ಪಟೇಲ್ ಪ್ರೊಡಕ್ಷನ್ಸ್' ಅಡಿಯಲ್ಲಿ 'ದೇಸಿ ಮ್ಯಾಜಿಕ್' ಎಂಬ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ.

Read More
Next Story