ಆಯುಷ್ಮಾನ್-ರಶ್ಮಿಕಾ ನಟನೆಯ ಥಮ್ಮಾ ಚಿತ್ರಕ್ಕೆ ಅದ್ಭುತ ಆರಂಭ, ಪ್ರೇಕ್ಷಕರ ಮೆಚ್ಚುಗೆಯ ಮಹಾಪೂರ
x

ಥಮ್ಮಾ

ಆಯುಷ್ಮಾನ್-ರಶ್ಮಿಕಾ ನಟನೆಯ 'ಥಮ್ಮಾ' ಚಿತ್ರಕ್ಕೆ ಅದ್ಭುತ ಆರಂಭ, ಪ್ರೇಕ್ಷಕರ ಮೆಚ್ಚುಗೆಯ ಮಹಾಪೂರ

ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಯಶಸ್ವಿ ಹಾರರ್-ಕಾಮಿಡಿ ಯೂನಿವರ್ಸ್‌ನ ಐದನೇ ಕೊಡುಗೆಯಾದ 'ಥಮ್ಮಾ', ಈ ಹಿಂದಿನ 'ಸ್ತ್ರೀ', 'ಭೇಡಿಯಾ', 'ರೂಹಿ' ಮತ್ತು 'ಮುಂಜ್ಯಾ' ಚಿತ್ರಗಳ ಸರಣಿಯನ್ನು ಮುಂದುವರೆಸಿದೆ.


Click the Play button to hear this message in audio format

ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಇಂದು (ಅಕ್ಟೋಬರ್ 21) ತೆರೆ ಕಂಡಿರುವ ಬಹು ನಿರೀಕ್ಷಿತ ಹಾರರ್-ಕಾಮಿಡಿ ಚಿತ್ರ 'ಥಮ್ಮಾ', ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಾ, ಬೆಚ್ಚಿ ಬೀಳಿಸುತ್ತಾ ಯಶಸ್ವಿ ಪ್ರದರ್ಶನವನ್ನು ಆರಂಭಿಸಿದೆ. ನಟ ಆಯುಷ್ಮಾನ್ ಖುರಾನಾ ಮತ್ತು ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ, ಹಬ್ಬದ ವಾರಾಂತ್ಯದ ಬಿಡುಗಡೆಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ.

ಚಿತ್ರತಂಡ ಕಥಾವಸ್ತುವನ್ನು ಗೌಪ್ಯವಾಗಿಟ್ಟಿದ್ದರೂ, ಬೆಳಿಗ್ಗೆಯ ಪ್ರಥಮ ಪ್ರದರ್ಶನ ವೀಕ್ಷಿಸಿದ ಸಿನಿಪ್ರಿಯರು ಇದನ್ನು 'ಸಂಪೂರ್ಣ ಮನರಂಜನಾತ್ಮಕ ಪ್ಯಾಕೇಜ್' ಎಂದು ಹಾಡಿ ಹೊಗಳುತ್ತಿದ್ದಾರೆ.

ಮ್ಯಾಡಾಕ್‌ನ ಭಯಾನಕ ಬ್ರಹ್ಮಾಂಡಕ್ಕೆ ರಕ್ತಸಿಕ್ತ ಪ್ರೇಮಕಥೆ

ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಯಶಸ್ವಿ ಹಾರರ್-ಕಾಮಿಡಿ ಯೂನಿವರ್ಸ್‌ನ ಐದನೇ ಕೊಡುಗೆಯಾದ 'ಥಮ್ಮಾ', ಈ ಹಿಂದಿನ 'ಸ್ತ್ರೀ', 'ಭೇಡಿಯಾ', 'ರೂಹಿ' ಮತ್ತು 'ಮುಂಜ್ಯಾ' ಚಿತ್ರಗಳ ಸರಣಿಯನ್ನು ಮುಂದುವರೆಸಿದೆ. ನಿರ್ದೇಶಕ ಆದಿತ್ಯ ಸರ್ಪೋತದಾರ್ ಅವರು ಈ ಬಾರಿ ಭಾರತೀಯ ಜಾನಪದ ಕಥೆಗಳಲ್ಲಿ 'ವ್ಯಾಂಪೈರ್' ಪುರಾಣಕ್ಕೆ ಹೊಸ ಭಾಷ್ಯ ಬರೆದಿದ್ದಾರೆ. ಭಯಾನಕ ಹಿನ್ನೆಲೆಯಿದ್ದರೂ, ಇದು ಭಾವನಾತ್ಮಕ ಸನ್ನಿವೇಶಗಳು ಮತ್ತು ಕೌಟುಂಬಿಕ ಮೌಲ್ಯಗಳಿಗೆ ಒತ್ತು ನೀಡಿರುವುದು ಹಿಂದಿನ ಮ್ಯಾಡಾಕ್ ಸೂತ್ರದಂತೆಯೇ ಕೆಲಸ ಮಾಡಿದೆ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಯ ಸುರಿಮಳೆ

ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳು 'ಥಮ್ಮಾ' ಕುರಿತ ಸಕಾರಾತ್ಮಕ ಪ್ರತಿಕ್ರಿಯೆಗಳಿಂದ ತುಂಬಿ ಹೋಗಿವೆ. ಹಬ್ಬದ ವಾತಾವರಣದಲ್ಲಿ 'ಥಮ್ಮಾ' 'ಪರಿಪೂರ್ಣ ದೀಪಾವಳಿ ವೀಕ್ಷಣೆ' ಎಂದು ನೆಟ್ಟಿಗರು ಕೊಂಡಾಡಿದ್ದಾರೆ.

ಒಬ್ಬ ವೀಕ್ಷಕರು, ಈ ಚಿತ್ರದಲ್ಲಿ ಹಾಸ್ಯ, ನಾಟಕ ಮತ್ತು ಅನಿರೀಕ್ಷಿತ ತಿರುವುಗಳಿದ್ದು, ಇದು ವೀಕ್ಷಕರನ್ನು ಹಿಡಿದಿಡುತ್ತದೆ ಎಂದು ಬರೆದಿದ್ದಾರೆ. ಮತ್ತೊಬ್ಬರು, ಆರಂಭದಾರ್ಧ ನಿಧಾನವಾಗಿದ್ದರೂ, ದ್ವಿತೀಯಾರ್ಧದ ಕಥಾ ಹಂದರ ಅತ್ಯುತ್ತಮವಾಗಿದೆ. ನಟಿ ರಶ್ಮಿಕಾ ಮಂದಣ್ಣ ಅವರ ನೈಸರ್ಗಿಕ ಮತ್ತು ಹೃದಯಸ್ಪರ್ಶಿ ಅಭಿನಯವನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ನಟರ ಪ್ರದರ್ಶನಕ್ಕೆ 4.5 ಸ್ಟಾರ್‌ಗಳ ರೇಟಿಂಗ್

ಚಿತ್ರವನ್ನು ವೀಕ್ಷಿಸಿದ ವಿಮರ್ಶಕರೂ ಕೂಡ ಧಾರಾಳವಾಗಿ ಅಂಕಗಳನ್ನು ನೀಡಿದ್ದಾರೆ. ಓರ್ವ ವಿಮರ್ಶಕರಂತೂ ಚಿತ್ರಕ್ಕೆ 4.5 ಸ್ಟಾರ್‌ಗಳನ್ನು ನೀಡಿ, ಹಾಸ್ಯ, ಭಯ ಮತ್ತು ದೇಸೀ ಸಂಸ್ಕೃತಿಯ ಜಾನಪದವನ್ನು ಸಮರ್ಥವಾಗಿ ಬೆರೆಸಿದ 'ಸಂಪೂರ್ಣ ಮನರಂಜನೆ' ಎಂದು ಕರೆದಿದ್ದಾರೆ. ನಾಯಕ ಆಯುಷ್ಮಾನ್ ಖುರಾನಾ ಅವರು ಕಾಮಿಡಿ ಮತ್ತು ಭಯ ಎರಡನ್ನೂ ಸುಲಭವಾಗಿ ನಿಭಾಯಿಸಿದ್ದು, ನವಾಜುದ್ದೀನ್ ಸಿದ್ದಿಕಿ ಅವರ ಪಾತ್ರ ಅನಿರೀಕ್ಷಿತ ಮತ್ತು ಆಕರ್ಷಕವಾಗಿದೆ. ವಿಶೇಷವಾಗಿ ಹಿರಿಯ ನಟ ಪರೇಶ್ ರಾವಲ್ ಅವರ ಹಾಸ್ಯಪ್ರಜ್ಞೆ ಚಿತ್ರದ ಭಯದ ವಾತಾವರಣಕ್ಕೆ ಸಮತೋಲನ ತಂದಿದೆ ಎಂದು ಬರೆದುಕೊಂಡಿದ್ದಾರೆ.

ಬಾಕ್ಸ್ ಆಫೀಸ್ ನಿರೀಕ್ಷೆ

ಚಿತ್ರದ ಹಾಡುಗಳು ಮತ್ತು ಹಿನ್ನೆಲೆ ಸಂಗೀತಕ್ಕೆ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಭಯ ಮತ್ತು ವಿನೋದದ ಅಂಶಗಳನ್ನು ಸಮಾನವಾಗಿ ಹೆಚ್ಚಿಸಿದೆ ಎಂದು ವಿಶ್ಲೇಷಿಸಲಾಗಿದೆ. 4,000ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಿರುವ 'ಥಮ್ಮಾ' ಚಿತ್ರಕ್ಕೆ, 30-32 ಕೋಟಿ ರೂ.ಗಳ ಬೃಹತ್ ಆರಂಭಿಕ ಗಳಿಕೆ ತಜ್ಞರು ನಿರೀಕ್ಷಿಸುತ್ತಿದ್ದಾರೆ. ಚಿತ್ರಕ್ಕೆ ಸಿಕ್ಕಿರುವ ಮೌಖಿಕ ಪ್ರಚಾರ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್ ಗಳಿಕೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಸಕಾರಾತ್ಮಕ ವಿಮರ್ಶೆಗಳೊಂದಿಗೆ 'ಥಮ್ಮಾ' ದೀಪಾವಳಿ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಬಾಲಿವುಡ್‌ಗೆ ಮತ್ತೊಂದು ಯಶಸ್ವಿ ಹಾರರ್-ಕಾಮಿಡಿ ಚಿತ್ರವಾಗುವ ಭರವಸೆ ಮೂಡಿಸಿದೆ.

Read More
Next Story