
'ಕಪ್ಪು ಲೆಹೆಂಗಾ', ಡೈಮಂಡ್ ರಿಂಗ್': ರಶ್ಮಿಕಾ ಕೈಬೆರಳಿನ ಉಂಗುರದ ಕಡೆಗೇ ಗಮನ!
ರಶ್ಮಿಕಾ ಮಂದಣ್ಣ ಅವರ ಮುಂಬರುವ ಹಾರರ್-ಕಾಮಿಡಿ ಚಿತ್ರ 'ಥಾಮಾ'ದ ಪ್ರಚಾರಕ್ಕಾಗಿ ರಶ್ಮಿಕಾ ಅವರು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಆಯುಷ್ಮಾನ್ ಖುರಾನಾ ಅವರೊಂದಿಗೆ ಭಾಗವಹಿಸಿದ್ದರು.
ಕನ್ನಡತಿ, ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿರುವ 'ನ್ಯಾಷನಲ್ ಕ್ರಶ್' ನಟಿ ರಶ್ಮಿಕಾ ಮಂದಣ್ಣ ಅವರು, ತೆಲುಗು ಸ್ಟಾರ್ ವಿಜಯ್ ದೇವರಕೊಂಡ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂಬ ಸುದ್ದಿ ಈಗ ಟಾಲಿವುಡ್‌ನಿಂದ ಬಾಲಿವುಡ್‌ವರೆಗೆ ಸಂಚಲನ ಮೂಡಿಸಿದೆ. ಈ ಸುದ್ದಿಗೆ ಪುಷ್ಟಿ ನೀಡುವಂತೆ, ನಿಶ್ಚಿತಾರ್ಥದ ನಂತರ ಮೊದಲ ಬಾರಿಗೆ ರಶ್ಮಿಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಅವರ ಎಡಗೈ ಬೆರಳಿನಲ್ಲಿದ್ದ ವಜ್ರದ ಉಂಗುರವೇ ಈಗ ಎಲ್ಲರ ಕಣ್ಮನ ಸೆಳೆದಿದೆ.
ತಮ್ಮ ಮುಂಬರುವ ಹಾರರ್-ಕಾಮಿಡಿ ಚಿತ್ರ 'ಥಾಮಾ'ದ ಪ್ರಚಾರಕ್ಕಾಗಿ ರಶ್ಮಿಕಾ ಅವರು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಆಯುಷ್ಮಾನ್ ಖುರಾನಾ ಅವರೊಂದಿಗೆ ಭಾಗವಹಿಸಿದ್ದರು. ಮಲೈಕಾ ಅರೋರಾ ಅವರ ಇತ್ತೀಚಿನ ಹಾಡು 'ಪಾಯ್ಸನ್ ಬೇಬಿ'ಯ ಬಿಡುಗಡೆ ಸಮಾರಂಭ ಇದಾಗಿತ್ತು. ರಶ್ಮಿಕಾ, ಆಯುಷ್ಮಾನ್ ಜೊತೆಗೆ ಮಲೈಕಾ ಮತ್ತು ನಿರ್ದೇಶಕ ಆದಿತ್ಯ ಸರ್ಪೋತ್ದಾರ್ ಸಹ ವೇದಿಕೆ ಹಂಚಿಕೊಂಡಿದ್ದರು.
ಕಪ್ಪು ಬಣ್ಣದ ಪ್ರಿಂಟೆಡ್ ಲೆಹೆಂಗಾದಲ್ಲಿ ರಶ್ಮಿಕಾ ಆಗಮಿಸುತ್ತಿದ್ದಂತೆಯೇ, ಅವರ ಸೌಂದರ್ಯಕ್ಕಿಂತಲೂ ಹೆಚ್ಚು, ಫ್ಲ್ಯಾಷ್‌ಲೈಟ್‌ಗಳು ಅವರ ಎಡಗೈಯತ್ತ ನೆಟ್ಟಿದ್ದವು. ಕಾರಣ ಆಕರ್ಷಕವಾಗಿ ಮಿಂಚುತ್ತಿದ್ದ ವಜ್ರದ ಉಂಗುರ. ಈ ತಿಂಗಳ ಆರಂಭದಲ್ಲಿ 'ಗೀತಾ ಗೋವಿಂದಂ' ಜೋಡಿ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡ ನಂತರ ರಶ್ಮಿಕಾ ಅವರ ಮೊದಲ ಸಾರ್ವಜನಿಕ ಪ್ರದರ್ಶನ ಇದಾಗಿದ್ದು, ಈ ನಿಶ್ಚಿತಾರ್ಥದ 'ಡೈಮಂಡ್ ರಿಂಗ್' ಇಡೀ ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು.
ವಿಜಯ್ ಮತ್ತು ರಶ್ಮಿಕಾ ಅವರ ನಿಶ್ಚಿತಾರ್ಥದ ವಿಷಯ ಖಚಿತವಾಗಿದೆ. 'ಗೀತಾ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಚಿತ್ರಗಳಲ್ಲಿ ಒಟ್ಟಿಗೆ ನಟಿಸಿ ಪ್ರೇಕ್ಷಕರ ಮನ ಗೆದ್ದ ಈ ಜೋಡಿ, ಫೆಬ್ರವರಿ 2026 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ ಎಂದು ಮೂಲಗಳು ತಿಳಿಸಿವೆ.
ಇತ್ತ ವೈಯಕ್ತಿಕ ಜೀವನದಲ್ಲಿ ಸಖತ್ ಸುದ್ದಿಯಲ್ಲಿರುವ ರಶ್ಮಿಕಾ, ವೃತ್ತಿಪರವಾಗಿಯೂ ಬಿಡುವಿಲ್ಲದ ತಾರೆಯಾಗಿದ್ದಾರೆ. ಇತ್ತೀಚೆಗೆ ನಾಗಾರ್ಜುನ ಮತ್ತು ಧನುಷ್ ಅವರೊಂದಿಗೆ 'ಕುಬೇರಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅವರು, ಅಕ್ಟೋಬರ್ 21 ರಂದು ಬಿಡುಗಡೆಯಾಗಲಿರುವ ಆದಿತ್ಯ ಸರ್ಪೋತ್ದಾರ್ ಅವರ ಹಾರರ್-ಹಾಸ್ಯ ಚಿತ್ರ 'ಥಾಮಾ'ದ ನಾಯಕಿಯಾಗಿದ್ದಾರೆ. ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ, ಪರೇಶ್ ರಾವಲ್ ಮತ್ತು ನವಾಜುದ್ದೀನ್ ಸಿದ್ದಿಕಿ ಅವರಂತಹ ದಿಗ್ಗಜರಿದ್ದಾರೆ. ಇದರ ಜೊತೆಗೆ, ರಶ್ಮಿಕಾ 'ದಿ ಗರ್ಲ್‌ಫ್ರೆಂಡ್', 'ಮೈಸಾದಲ್ಲಿ' ಮತ್ತು ಕೃತಿ ಸನೋನ್-ಶಾಹಿದ್ ಕಪೂರ್ ಅವರೊಂದಿಗೆ 'ಕಾಕ್‌ಟೈಲ್ 2' ನಂತಹ ಬಹುನಿರೀಕ್ಷಿತ ಸಿನಿಮಾಗಳಲ್ಲೂ ಮುಖ್ಯ ಭೂಮಿಕೆ ವಹಿಸುತ್ತಿದ್ದಾರೆ.
'ಥಾಮಾ' ಕುರಿತು ರಶ್ಮಿಕಾ ಮಾತು
"ನನಗೆ 'ಥಾಮಾ' ಸಿನಿಮಾ ತುಂಬಾ ವಿಶೇಷ. ಇದು ಹಾರರ್, ಕಾಮಿಡಿ, ಜಾನಪದ ಕಥೆ ಮತ್ತು ಭಾರತೀಯ ಪ್ರೇಮಕಥೆಯನ್ನು ಒಟ್ಟಿಗೆ ಬೆಸೆಯುತ್ತದೆ. 'ತಡಕಾ' ಎಂಬ ದಂತಕಥೆಯ ಪಾತ್ರವನ್ನು ನಿರ್ವಹಿಸುವುದು ಒಂದು ಸವಾಲು ಮತ್ತು ರೋಮಾಂಚಕಾರಿ ಅನುಭವವಾಗಿತ್ತು. ಈ ಅವಕಾಶ ನೀಡಿದ ಮ್ಯಾಡಾಕ್ ಫಿಲ್ಮ್ಸ್‌ಗೆ ನಾನು ಆಭಾರಿ. ಪ್ರತಿಯೊಬ್ಬರೂ 'ಥಾಮಾ'ವನ್ನು ಅನುಭವಿಸಲಿ ಎಂದು ನಾನು ಎದುರು ನೋಡುತ್ತಿದ್ದೇನೆ" ಎಂದು ರಶ್ಮಿಕಾ ಮಂದಣ್ಣ ಹೇಳಿದರು.