
ಮುಂಬೈನಲ್ಲಿ ನಟ ಅಕ್ಷಯ್ ಕುಮಾರ್ ಕಾರು ಅಪಘಾತ
ಅಕ್ಷಯ್ ಕುಮಾರ್ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ 'ಕಿಲಾಡಿ' ದಂಪತಿ
ಅಕ್ಷಯ್ ಕುಮಾರ್ ತಕ್ಷಣವೇ ತಮ್ಮ ವಾಹನದಿಂದ ಕೆಳಗಿಳಿದು, ಭದ್ರತಾ ಸಿಬ್ಬಂದಿಯೊಂದಿಗೆ ಸೇರಿ ಆಟೋವನ್ನು ಎತ್ತಿ ಅದರಲ್ಲಿದ್ದವರನ್ನು ರಕ್ಷಿಸಿದ್ದಾರೆ. ಘಟನೆಯಲ್ಲಿ ಆಟೋ ಚಾಲಕನಿಗೆ ಗಾಯಗಳಾಗಿದೆ.
ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಖನ್ನಾ ಮುಂಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಸೋಮವಾರ ರಾತ್ರಿ ವಿದೇಶಿ ಪ್ರವಾಸ ಮುಗಿಸಿ ವಿಮಾನ ನಿಲ್ದಾಣದಿಂದ ಜುಹುನಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ವೇಗವಾಗಿ ಬಂದ ಮರ್ಸಿಡಿಸ್ ಕಾರೊಂದು ಮೊದಲು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು, ಅದರ ರಭಸಕ್ಕೆ ಆಟೋ ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ವಾಹನಕ್ಕೆ ಅಪ್ಪಳಿಸಿದೆ. ಬಳಿಕ ಆ ವಾಹನವು ನಟ ಪ್ರಯಾಣಿಸುತ್ತಿದ್ದ ಎಸ್‌ಯುವಿಗೆ ಡಿಕ್ಕಿಯಾಗಿದೆ. ಜುಹುವಿನ ಸಿಲ್ವರ್ ಬೀಚ್ ಕೆಫೆ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಆ ಸಮಯದಲ್ಲಿ ಸಮೀಪದಲ್ಲೇ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಅವರ ಕಾರ್ಯಕ್ರಮವಿದ್ದ ಕಾರಣ ಆ ಪ್ರದೇಶವು ಜನರಿಂದ ಕಿಕ್ಕಿರಿದು ತುಂಬಿತ್ತು.
ಅಪಘಾತದ ವಿಡಿಯೊ ಇಲ್ಲಿದೆ
ಅಪಘಾತದ ತೀವ್ರತೆಗೆ ಆಟೋ ರಿಕ್ಷಾ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಮತ್ತು ಪ್ರಯಾಣಿಕ ಒಳಗೆ ಸಿಲುಕಿಕೊಂಡಿದ್ದರು. ಕೂಡಲೇ ತಮ್ಮ ವಾಹನದಿಂದ ಕೆಳಗಿಳಿದ ಅಕ್ಷಯ್ ಕುಮಾರ್, ತಮ್ಮ ತಂಡದವರೊಂದಿಗೆ ಸೇರಿ ಆಟೋವನ್ನು ಎತ್ತಿ ಅದರಲ್ಲಿದ್ದವರನ್ನು ರಕ್ಷಿಸಲು ನೆರವಾಗಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಅಪಘಾತದ ದೃಶ್ಯಗಳು ವೈರಲ್ ಆಗುತ್ತಿದ್ದು, ಅಕ್ಷಯ್ ಕುಮಾರ್ ಅವರ ಕಾರು ಆಟೋ ಮೇಲೆ ಪಲ್ಟಿಯಾಗಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ಸದ್ಯಕ್ಕೆ ಪೊಲೀಸರು ಮರ್ಸಿಡಿಸ್ ಚಾಲಕನ ಅಜಾಗರೂಕತೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಇನ್ನೂ ಯಾವುದೇ ಅಧಿಕೃತ ಎಫ್‌ಐಆರ್ ದಾಖಲಾಗಿಲ್ಲ. ಅಕ್ಷಯ್ ಕುಮಾರ್ ಅವರ ತಂಡದಿಂದ ಈ ಕುರಿತು ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲವಾದರೂ, ಅಭಿಮಾನಿಗಳು ತಮ್ಮ ನೆಚ್ಚಿನ ನಟ ಸುರಕ್ಷಿತವಾಗಿರುವುದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ಅಕ್ಷಯ್ ಕುಮಾರ್ ಅವರು ಪ್ರಿಯದರ್ಶನ್ ನಿರ್ದೇಶನದ 'ಹೈವಾನ್' ಚಿತ್ರದ ಬಿಡುಗಡೆಗೆ ಸಿದ್ಧರಾಗುತ್ತಿದ್ದು, ಈ ಸಿನಿಮಾ 2026ರಲ್ಲಿ ತೆರೆಕಾಣುವ ನಿರೀಕ್ಷೆಯಿದೆ.

