
ಅಪಘಾತದಲ್ಲಿ ಆಟೋ ಚಾಲಕ ಬಸಿತ್ ಖಾನ್ ಮತ್ತು ಓರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದು, ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಅಕ್ಷಯ್ ಕುಮಾರ್ ಕಾರು ಅಪಘಾತ| ಮರ್ಸಿಡಿಸ್ ಚಾಲಕನ ಬಂಧನ
ಅಪಘಾತದಲ್ಲಿ ಆಟೋ ಚಾಲಕ ಬಸಿತ್ ಖಾನ್ ಮತ್ತು ಓರ್ವ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದು, ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಇನೋವಾ ಕಾರಿಗೆ ಡಿಕ್ಕಿ ಹೊಡೆದಿದ್ದ ಮರ್ಸಿಡೀಸ್ ಕಾರಿನ ಚಾಲಕನನ್ನು ಮುಂಬೈ ಜುಹು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಧೇಶ್ಯಾಮ್ ರೈ ಎಂದು ಗುರುತಿಸಲಾಗಿದೆ. ಆತನನ್ನು ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಅಪಘಾತ ನಡೆದಿದ್ದು ಹೇಗೆ?
ವಿದೇಶ ಪ್ರವಾಸ ಮುಗಿಸಿ ವಿಮಾನ ನಿಲ್ದಾಣದಿಂದ ಮನೆಗೆ ಮರಳುತ್ತಿದ್ದ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಖನ್ನಾ ಅವರ ಕಾರಿನ ಹಿಂದೆ ಭದ್ರತಾ ಸಿಬ್ಬಂದಿಯ ಇನ್ನೋವಾ ಕಾರು ಸಾಗುತ್ತಿತ್ತು. ಈ ವೇಳೆ ವೇಗವಾಗಿ ಬಂದ ಮರ್ಸಿಡಿಸ್ ಕಾರೊಂದು ಮೊದಲು ಬೆಂಗಾವಲು ಪಡೆಯ ಇನ್ನೋವಾ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಆಟೋ ರಿಕ್ಷಾ ಮೇಲೆ ಬಿದ್ದಿದೆ. ಪರಿಣಾಮ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಚಾಲಕ ಮತ್ತು ಪ್ರಯಾಣಿಕ ಅದರ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಘಟನೆಯ ನಂತರ ಅಕ್ಷಯ್ ಕುಮಾರ್ ಅವರು ತಮ್ಮ ವಾಹನದಿಂದ ಕೆಳಗಿಳಿದು ಗಾಯಾಳುಗಳ ರಕ್ಷಣೆಗೆ ನೆರವಾಗಿದ್ದಾರೆ ಎಂದು ವರದಿಯಾಗಿದೆ.
ಸಹಾಯಕ್ಕಾಗಿ ಆಟೋ ಚಾಲಕನ ಕುಟುಂಬದ ಮನವಿ
ಗಂಭೀರವಾಗಿ ಗಾಯಗೊಂಡಿರುವ ಆಟೋ ಚಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅವರ ಸಹೋದರ ಮೊಹಮ್ಮದ್ ಸಮೀರ್ ತಿಳಿಸಿದ್ದಾರೆ. "ನನ್ನ ಸಹೋದರ ಆಟೋ ಚಾಲನೆ ಮಾಡುತ್ತಿದ್ದಾಗ ಹಿಂದಿನಿಂದ ಬಂದ ವಾಹನಗಳು ಡಿಕ್ಕಿ ಹೊಡೆದವು. ಆಟೋ ಸಂಪೂರ್ಣವಾಗಿ ಪುಡಿಯಾಗಿದ್ದು, ನನ್ನ ಸಹೋದರನ ಸ್ಥಿತಿ ಗಂಭೀರವಾಗಿದೆ. ನಾವು ಬಡವರು, ಖಾಸಗಿ ಆಸ್ಪತ್ರೆಯ ದುಬಾರಿ ವೆಚ್ಚವನ್ನು ಭರಿಸಲು ನಮ್ಮಿಂದ ಸಾಧ್ಯವಿಲ್ಲ. ದಯವಿಟ್ಟು ನನ್ನ ಸಹೋದರನ ಚಿಕಿತ್ಸೆಗೆ ಆರ್ಥಿಕ ನೆರವು ನೀಡಿ ಮತ್ತು ಹಾನಿಯಾದ ಆಟೋಗೆ ಪರಿಹಾರ ಒದಗಿಸಿ" ಎಂದು ಸಮೀರ್ ಕಣ್ಣೀರು ಹಾಕುತ್ತಾ ಮಾಧ್ಯಮಗಳ ಮುಂದೆ ಮನವಿ ಮಾಡಿದ್ದಾರೆ. ಅಲ್ಲದೆ, ಪೊಲೀಸರು ತಮಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ.
ಮರ್ಸಿಡಿಸ್ ಚಾಲಕನ ವಿರುದ್ಧ ಕೇಸ್ ದಾಖಲು
ಈ ಘಟನೆಗೆ ಸಂಬಂಧಿಸಿದಂತೆ ಜುಹು ಪೊಲೀಸರು ಮರ್ಸಿಡಿಸ್ ಕಾರು ಚಾಲಕ ರಾಧೇಶ್ಯಾಮ್ ರೈ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಅಜಾಗರೂಕತೆ ಮತ್ತು ನಿರ್ಲಕ್ಷ್ಯದ ಚಾಲನೆಗಾಗಿ ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 281, 125(A) ಮತ್ತು 125(B) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಅಪಘಾತದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನೆಯ ಬಗ್ಗೆ ಅಕ್ಷಯ್ ಕುಮಾರ್ ಅವರ ಕಡೆಯಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ.

