
ದಶಕದ ನಂತರ ಆಸ್ಕರ್ ಪ್ರೆಸೆಂಟರ್ ಆಗಿ ಮರಳಿದ ಪ್ರಿಯಾಂಕಾ: ಡಿಯೋರ್ ಗೌನ್ನಲ್ಲಿ ಮಿಂಚಿದ ದೇಸಿ ಗರ್ಲ್
Oscar Award 2026| ಪ್ರಿಯಾಂಕಾ, ಇಶಾ ಅಂಬಾನಿ ಸೇರಿ ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಚೆಲುವೆಯರು
98ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಫ್ಯಾಷನ್ ಸಂಚಲನ! ಬಿಳಿ ಬಣ್ಣದ ಡಿಯೋರ್ ಗೌನ್ನಲ್ಲಿ ಪ್ರಿಯಾಂಕಾ ಚೋಪ್ರಾ ಮಿಂಚಿದರೆ, ವಿಂಟೇಜ್ ವ್ಯಾಲೆಂಟಿನೋ ಉಡುಗೆಯಲ್ಲಿ ಇಶಾ ಅಂಬಾನಿ ರಾಜಕುಮಾರಿಯಂತೆ ಕಂಗೊಳಿಸಿದರು.
ಪ್ರತಿಷ್ಠಿತ 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭವು ಜಾಗತಿಕ ಮಟ್ಟದ ಫ್ಯಾಷನ್ ಸಂಚಲನಕ್ಕೆ ಸಾಕ್ಷಿಯಾಗಿದೆ. ಈ ಬಾರಿಯ ಆಸ್ಕರ್ ವೇದಿಕೆಯಲ್ಲಿ ಕೈಲಿ ಜೆನ್ನರ್, ಇಶಾ ಅಂಬಾನಿ ಮತ್ತು ಪ್ರಿಯಾಂಕಾ ಚೋಪ್ರಾ ತಮ್ಮ ಅದ್ಭುತ ಉಡುಗೆಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸುಮಾರು ಒಂದು ದಶಕದ ನಂತರ ಆಸ್ಕರ್ ವೇದಿಕೆಗೆ ಪ್ರೆಸೆಂಟರ್ ಆಗಿ ಮರಳಿದ ಜಾಗತಿಕ ನಟಿ ಪ್ರಿಯಾಂಕಾ ಚೋಪ್ರಾ ಜೊನಾಸ್, ತಮ್ಮ ಪತಿ ನಿಕ್ ಜೊನಾಸ್ ಅವರೊಂದಿಗೆ ರೆಡ್ ಕಾರ್ಪೆಟ್ ಮೇಲೆ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದರು.
ಕಸ್ಟಮ್ ಮೇಡ್ ಬಿಳಿ ಬಣ್ಣದ ಡಿಯೋರ್ ಗೌನ್ ಧರಿಸಿದ್ದ ಪ್ರಿಯಾಂಕಾ, ಹಳೆಯ ಹಾಲಿವುಡ್ ಗ್ಲಾಮರ್ ಅನ್ನು ಮರುಸೃಷ್ಟಿಸಿದರು. ತೊಡೆಯವರೆಗಿನ ಸೀಳು ಮತ್ತು ಅದಕ್ಕೆ ಪೂರಕವಾಗಿ ನೀಡಲಾಗಿದ್ದ ಪೆದರ್ (ಗರಿ) ವಿನ್ಯಾಸವು ಅವರ ಉಡುಗೆಯ ವಿಶೇಷತೆಯಾಗಿತ್ತು. ವಜ್ರದ ಹಾರ ಮತ್ತು ಕಿವಿಯೋಲೆಗಳೊಂದಿಗೆ ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಂಡಿದ್ದ ಪ್ರಿಯಾಂಕಾ, ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ತಾವೊಬ್ಬ ಫ್ಯಾಷನ್ ಐಕಾನ್ ಎಂಬುದನ್ನು ಸಾಬೀತುಪಡಿಸಿದರು.
ರಿಯಾಲಿಟಿ ಸ್ಟಾರ್ ಮತ್ತು ಉದ್ಯಮಿ ಕೈಲಿ ಜೆನ್ನರ್ ಈ ಬಾರಿ ರೆಡ್ ಕಾರ್ಪೇಟ್ ಮೇಲೆ ಕಾಣಿಸಿಕೊಳ್ಳದಿದ್ದರೂ, ಸಮಾರಂಭದ ಮುನ್ನವೇ ತಮ್ಮ ವಿಶಿಷ್ಟ ಶೈಲಿಯ ಮೂಲಕ ಸುದ್ದಿಯಾಗಿದ್ದಾರೆ. ಸಾಮಾನ್ಯವಾಗಿ ಕಪ್ಪು ಬಣ್ಣದ ಉಡುಪುಗಳಿಗೆ ಆದ್ಯತೆ ನೀಡುತ್ತಿದ್ದ ಕೈಲಿ, ಈ ಬಾರಿ ಸಕಾಲಿಕ ಬದಲಾವಣೆ ಎಂಬಂತೆ ಸ್ಕಿಯಾಪರೆಲ್ಲಿ ಸಂಸ್ಥೆಯ ವಿನ್ಯಾಸದ 'ಚೆರ್ರಿ-ರೆಡ್' ಗೌನ್ನಲ್ಲಿ ಮಿಂಚಿದ್ದಾರೆ.
ಹೊಳೆಯುವ ಸೀಕ್ವಿನ್ಸ್ಗಳಿಂದ ಕೂಡಿದ ಈ ಉಡುಗೆಯಲ್ಲಿ ಅವರು ಹಾಲಿವುಡ್ನ ಐಕಾನಿಕ್ ಪಾತ್ರ 'ಜೆಸ್ಸಿಕಾ ರಾಬಿಟ್' ಅನ್ನು ನೆನಪಿಸುವಂತಿದ್ದರು. ಸುಮಾರು 200 ಕ್ಯಾರೆಟ್ ತೂಕದ ಲೊರೆನ್ ಶ್ವಾರ್ಟ್ಜ್ ವಜ್ರದ ಆಭರಣಗಳನ್ನು ಧರಿಸಿದ್ದ ಕೈಲಿ, ನಂತರ ನಟ ಟಿಮೊಥಿ ಚಾಲಮೆಟ್ ಅವರೊಂದಿಗೆ ಸಮಾರಂಭದಲ್ಲಿ ಕಾಣಿಸಿಕೊಂಡು ಸಾರ್ವಜನಿಕರ ಕುತೂಹಲಕ್ಕೆ ಕಾರಣರಾದರು.
ಮತ್ತೊಂದೆಡೆ, ಭಾರತೀಯ ಉದ್ಯಮಿ ಮುಕೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ತಮ್ಮ ಪತಿ ಆನಂದ್ ಪಿರಮಲ್ ಅವರೊಂದಿಗೆ ಆಸ್ಕರ್ ರೆಡ್ ಕಾರ್ಪೆಟ್ ಮೇಲೆ ಸಾಂಪ್ರದಾಯಿಕ ಮತ್ತು ಆಧುನಿಕತೆಯ ಸಮ್ಮಿಲನದಂತೆ ಕಂಗೊಳಿಸಿದರು.
ವ್ಯಾಲೆಂಟಿನೋ ವಿನ್ಯಾಸದ ವಿಂಟೇಜ್ ಶೈಲಿಯ ಶಾಂಪೇನ್ ಬಣ್ಣದ ಗೌನ್ ಧರಿಸಿದ್ದ ಇಶಾ, ಆಸ್ಕರ್ ಸಮಾರಂಭಕ್ಕೂ ಮುನ್ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್ಗೆ ಭೇಟಿ ನೀಡಿದ್ದ ಅವರು, ಅಲ್ಲಿನ ನಿರ್ದೇಶಕಿ ಆಮಿ ಹೊಮ್ಮಾ ಅವರೊಂದಿಗೆ ಸಿನಿಮಾ ಮತ್ತು ಕಲೆಯ ಕುರಿತು ಚರ್ಚೆ ನಡೆಸಿದರು. ಆ ಸಮಯದಲ್ಲಿ ಅತ್ಯಂತ ಸರಳವಾದ ಬಿಳಿ ಶರ್ಟ್ ಮತ್ತು ಡೆನಿಮ್ ಪ್ಯಾಂಟ್ ಧರಿಸುವ ಮೂಲಕ ಇಶಾ ತಮ್ಮ ಫ್ಯಾಷನ್ ವೈವಿಧ್ಯತೆಯನ್ನು ಪ್ರದರ್ಶಿಸಿದರು.
ಸಮಾರಂಭದ ಪ್ರಮುಖ ಆಕರ್ಷಣೆಯಾಗಿದ್ದ ಡೆಮಿ ಮೂರ್, ಕಸ್ಟಮ್ ಮೇಡ್ 'ಗುಸ್ಸಿ' ಸಂಸ್ಥೆ ವಿನ್ಯಾಸಗೊಳಿಸಿದ ಪಚ್ಚೆ ಹಸಿರು ಬಣ್ಣದ ಫೆದರ್ ಗೌನ್ ಧರಿಸಿದ್ದರು. ಕಪ್ಪು ಬಣ್ಣದ ಶೇಡಿಂಗ್ ಹಾಗೂ ಹೊಳೆಯುವ ಮೆಟಾಲಿಕ್ ಮೆರುಗು ಹೊಂದಿದ್ದ ಈ ಗೌನ್ ಅವರಿಗೆ ಒಂದು ವಿಶಿಷ್ಟ ಕಳೆಯನ್ನು ನೀಡಿತ್ತು. ಉಡುಪಿನ ಮೇಲ್ಭಾಗದಲ್ಲಿ ಮೇಲ್ಮುಖವಾಗಿ ಚಾಚಿಕೊಂಡಿದ್ದ ಕೃತಕ ಹಕ್ಕಿ ಪುಕ್ಕಗಳ ವಿನ್ಯಾಸ ಹಾಗೂ ಕೆಳಭಾಗದಲ್ಲಿ ಹರಿದು ಬಂದಂತಿದ್ದ ಉದ್ದನೆಯ ಟ್ರೈನ್ ನೋಡುಗರ ಕಣ್ಮನ ಸೆಳೆಯುವಂತಿತ್ತು.
ಖ್ಯಾತ ನಟ ಕ್ರಿಸ್ ಇವಾನ್ಸ್ ಮತ್ತು ಅವರ ಪತ್ನಿ ಆಲ್ಬಾ ಬಾಪ್ಟಿಸ್ಟಾ ಅವರು ಅಪರೂಪದಲ್ಲೇ ಅಪರೂಪ ಎಂಬಂತೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್ ನೀಡಿದ್ದಾರೆ. ಮದುವೆಯಾಗಿ ಮೂರು ವರ್ಷಗಳೇ ಕಳೆದಿದ್ದರೂ, ಈ ದಂಪತಿ ಇದುವರೆಗೆ ಕೇವಲ ಎರಡು ಬಾರಿ ಮಾತ್ರ ಒಟ್ಟಿಗೆ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು.
2026ರ ಆಸ್ಕರ್ ಪ್ರಶಸ್ತಿ ಸಮಾರಂಭದ ಕೆಂಪು ಹಾಸಿನ ಮೇಲೆ ಆಸ್ಟ್ರೇಲಿಯಾದ ಖ್ಯಾತ ನಟಿ ರೋಸ್ ಬೈರ್ನ್ ತಮ್ಮ ಅದ್ಭುತ ಸೌಂದರ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ನಡೆದ ಈ ಪ್ರತಿಷ್ಠಿತ ಸಮಾರಂಭದಲ್ಲಿ ರೋಸ್ ಬೈರ್ನ್ ಧರಿಸಿದ್ದ ಕ್ರಿಸ್ಟಿಯನ್ ಡಿಯೋರ್ ಸಂಸ್ಥೆಯ ಕಪ್ಪು ಬಣ್ಣದ ಗೌನ್ ಈ ಬಾರಿಯ 'ಬೆಸ್ಟ್ ಡ್ರೆಸ್' ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಾಲಿವುಡ್ ತಾರೆಯರಾದ ಝೆಂಡಾಯಾ ಮತ್ತು ರಾಬರ್ಟ್ ಪ್ಯಾಟಿನ್ಸನ್ ಅವರ ಅಪರೂಪದ ಉಪಸ್ಥಿತಿ ಹೊಸ ಸಂಚಲನ ಮೂಡಿಸಿದೆ. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪ್ರದಾನ ಮಾಡಲು ಈ ಜೋಡಿ ಒಟ್ಟಾಗಿ ವೇದಿಕೆ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಸಂಸತ ತಂದಿದೆ.
ಖ್ಯಾತ 'ಬ್ರಿಡ್ಜರ್ಟನ್' ಸರಣಿಯ ನಟಿ ಚರಿತ್ರಾ ಚಂದ್ರನ್ ಅವರು 2026ರ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಚೊಚ್ಚಲ ಪ್ರವೇಶವನ್ನು ಅದ್ದೂರಿಯಾಗಿ ಮಾಡಿದ್ದಾರೆ. ಹಾಲೀವುಡ್ನ ಈ ಪ್ರತಿಷ್ಠಿತ ಸಮಾರಂಭದ ಕೆಂಪು ಹಾಸಿನ ಮೇಲೆ ಹಸಿರು ಬಣ್ಣದ ಕಂಗೊಳಿಸುವ ಗೌನ್ ಧರಿಸಿ ಮಿಂಚಿದ ಅವರು, ಅಂತರಾಷ್ಟ್ರೀಯ ವೇದಿಕೆಯಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ.
ಖ್ಯಾತ ಹಾಲಿವುಡ್ ನಟಿ ಎಲ್ ಫ್ಯಾನಿಂಗ್ 98ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ತಮ್ಮ ರಾಜಕುಮಾರಿಯಂತಹ ನೋಟದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಸಂಭ್ರಮದಲ್ಲಿದ್ದ ಅವರು, ರೆಡ್ ಕಾರ್ಪೆಟ್ ಮೇಲೆ ಬಿಳಿ ಬಣ್ಣದ ಭವ್ಯವಾದ 'ಬಾಲ್ ಗೌನ್' ಧರಿಸಿ ಮಿಂಚಿದರು. ಸಾರಾ ಬರ್ಟನ್ ವಿನ್ಯಾಸಗೊಳಿಸಿದ ಈ ಜಿವೆಂಚಿ ಗೌನ್ ಮೇಲೆ ಅವರ ಬಾಲ್ಯದ ಮನೆಯ ನೆನಪನ್ನು ಮರುಕಳಿಸುವಂತೆ ನೇರಳೆ ಬಣ್ಣದ ವಿಸ್ಟೇರಿಯಾ ಹೂವುಗಳ ಕಸೂತಿ ಕೆಲಸ ಮಾಡಲಾಗಿತ್ತು. ಇದಕ್ಕೆ ಪೂರಕವಾಗಿ ಅವರು ಕಾರ್ಟಿಯರ್ ಸಂಸ್ಥೆಯ ಪುರಾತನ ವಜ್ರದ ಹಾರವನ್ನು ಧರಿಸಿದ್ದರು.
ಜೆಸ್ಸಿ ಬಕ್ಲಿ ಅವರ ಸರಳ ಮತ್ತು ಸುಂದರ ಶೈಲಿಯ ನಡಿಗೆಗೆ ಆಸ್ಕರ್ ವೇದಿಕೆ ಸಾಕ್ಷಿಯಾಯಿತು. 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'ಹ್ಯಾಮ್ನೆಟ್' ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡ ಐರಿಶ್ ನಟಿ ಜೆಸ್ಸಿ ಬಕ್ಲಿ, ತಮ್ಮ ವೇಷಭೂಷಣದ ಮೂಲಕವೂ ಎಲ್ಲರ ಗಮನ ಸೆಳೆದರು. ಪ್ರಶಸ್ತಿಗಳ ಹಂಗಾಮಿನಲ್ಲಿ ಅತಿರಂಜಿತ ಅಲಂಕಾರಕ್ಕಿಂತ ಸರಳತೆ ಮತ್ತು ಆರಾಮದಾಯಕ ಉಡುಪುಗಳಿಗೆ ಆದ್ಯತೆ ನೀಡಿರುವ ಅವರು, ಆಸ್ಕರ್ ರೆಡ್ ಕಾರ್ಪೆಟ್ ಮೇಲೆ ಗುಲಾಬಿ ಬಣ್ಣದ ಶನೆಲ್ ಗೌನ್ ಧರಿಸಿ ಮಿಂಚಿದರು.

