CET-2026: Last date for submission of application is Feb. 27, corrections allowed till March 30
x

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹೊರಡಿಸಿರುವ ಪ್ರಕಟಣೆ

ಸಿಇಟಿ-2026: ಅರ್ಜಿ ಸಲ್ಲಿಕೆಗೆ ಫೆ.27 ಕಡೇ ದಿನ, ತಿದ್ದುಪಡಿಗೆ ಮಾರ್ಚ್ 30ರವರೆಗೆ ಅವಕಾಶ

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ಬಯಸುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಫೆಬ್ರವರಿ 27ರ ಒಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.


Click the Play button to hear this message in audio format

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ವರ್ಷದ ಸಾಮಾನ್ಯ ಪ್ರವೇಶ ಪರೀಕ್ಷೆಗೆ (UGCET-2026) ಸಂಬಂಧಿಸಿದಂತೆ ಮಹತ್ವದ ಪ್ರಕಟಣೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಅಂತಿಮ ದಿನಾಂಕವನ್ನು ನಿಗದಿಪಡಿಸಿದೆ.

ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿ ಬಯಸುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಫೆಬ್ರವರಿ 27ರ ಒಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಅದರಲ್ಲಿರುವ ದೋಷಗಳನ್ನು ಸರಿಪಡಿಸಲು ಅಥವಾ ಮಾಹಿತಿಯನ್ನು ತಿದ್ದುಪಡಿ ಮಾಡಲು ಮಾತ್ರ ಮಾರ್ಚ್ 30ರವರೆಗೆ ವಿಶೇಷ ಕಾಲಾವಕಾಶವನ್ನು ನೀಡಲಾಗಿದೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

ಅರ್ಜಿ ಶುಲ್ಕವನ್ನು ಪಾವತಿಸಲು ಮಾರ್ಚ್ 3 ಕೊನೆಯ ದಿನವಾಗಿದೆ. ಈ ನಿಗದಿತ ಅವಧಿಯೊಳಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಮಾತ್ರ, ಅಗತ್ಯಬಿದ್ದರೆ ತಮ್ಮ ಅರ್ಜಿಯಲ್ಲಿನ ಮಾಹಿತಿಯನ್ನು ಬದಲಾಯಿಸಿಕೊಳ್ಳಲು ಮಾರ್ಚ್ 30ರವರೆಗೆ ಪೋರ್ಟಲ್ ಬಳಸಬಹುದಾಗಿದೆ. ಆದರೆ, ಯಾವುದೇ ಕಾರಣಕ್ಕೂ ಹೊಸದಾಗಿ ಅರ್ಜಿ ಸಲ್ಲಿಸಲು ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಕೆಇಎ ಖಚಿತಪಡಿಸಿದೆ.

ಎಸ್​​ಸಿ ಅಭ್ಯರ್ಥಿಗಳಿಗೆ ಕಡ್ಡಾಯ ಸೂಚನೆ

ಕೆಇಎ ಆಡಳಿತಾಧಿಕಾರಿಯಾಗಿರುವ ಕೆಎಎಸ್ ಅಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳಿಗೆ ಅತಿಮುಖ್ಯ ಹಾಗೂ ಕಡ್ಡಾಯ ಸೂಚನೆಯೊಂದನ್ನು ನೀಡಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಪೋರ್ಟಲ್‌ನಲ್ಲಿ ಒಳ ಮೀಸಲಾತಿ ಪ್ರಮಾಣಪತ್ರದ ಆರ್‌ಡಿ (RD) ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಲೇಬೇಕು. ಈ ಪ್ರಮಾಣಪತ್ರವು ತಹಶೀಲ್ದಾರರಿಂದ ವಿತರಿಸಲ್ಪಟ್ಟಿರಬೇಕು ಹಾಗೂ ಅದರಲ್ಲಿ ಪ್ರವರ್ಗ–ಎ, ಪ್ರವರ್ಗ–ಬಿ ಅಥವಾ ಪ್ರವರ್ಗ–ಸಿ ಎಂದು ಸ್ಪಷ್ಟವಾಗಿ ನಮೂದಾಗಿರಬೇಕು.

ಪ್ರಸ್ತುತ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ, ಅರ್ಜಿ ಸಲ್ಲಿಸಿರುವ ಒಟ್ಟು ಸುಮಾರು 40 ಸಾವಿರ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪೈಕಿ ಕೇವಲ 20 ಸಾವಿರ ಮಂದಿ ಮಾತ್ರ ಒಳ ಮೀಸಲಾತಿಯ ಆಧಾರದ ಮೇಲಿನ ಆರ್‌ಡಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಿದ್ದಾರೆ. ಉಳಿದ 20 ಸಾವಿರ ಅರ್ಜಿದಾರರು ಹಳೆಯ ಅಥವಾ ಸಾಮಾನ್ಯ ಪರಿಶಿಷ್ಟ ಜಾತಿ ಪ್ರಮಾಣಪತ್ರದ ಆರ್‌ಡಿ ಸಂಖ್ಯೆಯನ್ನೇ ನೀಡಿದ್ದು, ಇದು ನಿಯಮಾವಳಿ ಪ್ರಕಾರ ತಪ್ಪು.

ಇದುವರೆಗೆ ಪ್ರವರ್ಗ ಆಧಾರಿತ ಒಳ ಮೀಸಲಾತಿ ಪ್ರಮಾಣಪತ್ರ ಪಡೆಯದ ವಿದ್ಯಾರ್ಥಿಗಳು ತಕ್ಷಣವೇ ಸಂಬಂಧಪಟ್ಟ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಿ ಹೊಸ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು. ಬಳಿಕ ಮಾರ್ಚ್ 30ರವರೆಗೆ ಲಭ್ಯವಿರುವ ಎಡಿಟ್ ಪೋರ್ಟಲ್‌ನಲ್ಲಿ ಆ ಸರಿಯಾದ ಆರ್‌ಡಿ ಸಂಖ್ಯೆಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು ಎಂದು ಕೆಇಎ ಎಚ್ಚರಿಸಿದೆ. ನಿಗದಿತ ಒಳ ಮೀಸಲಾತಿಯ ಆರ್‌ಡಿ ಸಂಖ್ಯೆಯನ್ನು ನಮೂದಿಸಿದ ಅಭ್ಯರ್ಥಿಗಳನ್ನು ಮಾತ್ರವೇ ಮುಂದಿನ ಹಂತದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು ಎಂದು ಪ್ರಾಧಿಕಾರವು ಕಟ್ಟುನಿಟ್ಟಾಗಿ ಸ್ಪಷ್ಟಪಡಿಸಿದೆ.

Read More
Next Story