
ಉದ್ಯಮಿ ರಿಕ್ಕಿ ರೈ ವಿರುದ್ಧ ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಐಷಾರಾಮಿ ಲ್ಯಾಂಬೋರ್ಗಿನಿ ಕಾರಿಗೆ ನಕಲಿ ನಂಬರ್ ಪ್ಲೇಟ್: ಉದ್ಯಮಿ ರಿಕ್ಕಿ ರೈ ವಿರುದ್ಧ ಎಫ್‌ಐಆರ್ ದಾಖಲು
ದುಬಾರಿ ಬೆಲೆಯ ವಾಹನಗಳ ನೋಂದಣಿಗೆ ದೊಡ್ಡ ಮೊತ್ತದ ತೆರಿಗೆ ಪಾವತಿಸಬೇಕಾಗಿರುವುದರಿಂದ, ನಿಯಮಗಳನ್ನು ಉಲ್ಲಂಘಿಸಿ ನಕಲಿ ನಂಬರ್ ಪ್ಲೇಟ್ ಬಳಸುವ ಮೂಲಕ ವಂಚನೆ ಎಸಗಿರುವ ಅಂಶ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಬೆಂಗಳೂರಿನಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿಗೆ ನಕಲಿ ನೋಂದಣಿ ಸಂಖ್ಯೆ ಅಳವಡಿಸಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸಿದ ಗಂಭೀರ ಆರೋಪದಡಿ ಉದ್ಯಮಿ ರಿಕ್ಕಿ ರೈ ವಿರುದ್ಧ ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದುಬಾರಿ ಬೆಲೆಯ ವಾಹನಗಳ ನೋಂದಣಿಗೆ ದೊಡ್ಡ ಮೊತ್ತದ ತೆರಿಗೆ ಪಾವತಿಸಬೇಕಾಗಿರುವುದರಿಂದ, ನಿಯಮಗಳನ್ನು ಉಲ್ಲಂಘಿಸಿ ನಕಲಿ ನಂಬರ್ ಪ್ಲೇಟ್ ಬಳಸುವ ಮೂಲಕ ವಂಚನೆ ಎಸಗಿರುವ ಅಂಶ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಮೂಲತಃ ಈ ಕಾರು ದೆಹಲಿಯಲ್ಲಿ (DL 1 CT 1515) ನೋಂದಣಿಯಾಗಿದ್ದು, ಕರ್ನಾಟಕದಲ್ಲಿ ಮರು-ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ಮುನ್ನವೇ ಆಕರ್ಷಕ ನಕಲಿ ನಂಬರ್ ಪ್ಲೇಟ್ ಅಳವಡಿಸಿ ರಸ್ತೆಗಿಳಿಸಲಾಗಿತ್ತು.
ವಿಡಿಯೋ ವೈರಲ್
ಈ ವಂಚನೆ ಜಾಲ ಬೆಳಕಿಗೆ ಬಂದಿರುವುದು ಮಾರ್ಚ್ 21ರಂದು ನಡೆದ ಒಂದು ರಸ್ತೆ ನಿಯಮ ಉಲ್ಲಂಘನೆ ಘಟನೆಯಿಂದ. ಅಂದು ಬೆಳಗಿನ ಜಾವ ಸುಮಾರು 2:40ರ ಸಮಯದಲ್ಲಿ ಅನಿಲ್ ಕುಂಬ್ಳೆ ವೃತ್ತದಲ್ಲಿ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಅವರಿಗೆ ಸೇರಿದ ಲ್ಯಾಂಬೋರ್ಗಿನಿ ಕಾರನ್ನು ಅತಿ ವೇಗವಾಗಿ ಹಾಗೂ ಅಪಾಯಕಾರಿಯಾಗಿ ಡ್ರಿಫ್ಟಿಂಗ್ (ಸ್ಟಂಟ್) ಮಾಡಲಾಗಿತ್ತು. ಈ ದೃಶ್ಯವನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು, ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಮೂಲಕ ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದರು. ಸಾರ್ವಜನಿಕರ ದೂರಿನ ಆಧಾರದ ಮೇಲೆ ಕಬ್ಬನ್‌ಪಾರ್ಕ್ ಸಂಚಾರ ಪೊಲೀಸರು ಆರಂಭಿಕ ಪ್ರಕರಣ ದಾಖಲಿಸಿಕೊಂಡು, ಕೋಟ್ಯಂತರ ರೂಪಾಯಿ ಮೌಲ್ಯದ ಕಾರನ್ನು ಜಪ್ತಿ ಮಾಡಿದ್ದರು.
ಆರ್.ಟಿ.ಒ ವರದಿಯಿಂದ ಬಯಲಾದ ಅಸಲಿಯತ್ತು
ಕಾರು ಜಪ್ತಿ ಮಾಡಿದ ಬಳಿಕ ಸಂಚಾರ ಪೊಲೀಸರು ವಾಹನದ ಅಧಿಕೃತ ದಾಖಲಾತಿಗಳನ್ನು ಒದಗಿಸುವಂತೆ ಕೋರಿ ಮಾರ್ಚ್ 24ರಂದು ಬೆಂಗಳೂರು ದಕ್ಷಿಣ ಪ್ರಾದೇಶಿಕ ಸಾರಿಗೆ (ಆರ್.ಟಿ.ಒ) ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಈ ವೇಳೆ ಕಾರಿಗೆ ಅಳವಡಿಸಲಾಗಿದ್ದ ಆಕರ್ಷಕ ನೋಂದಣಿ ಸಂಖ್ಯೆ 'ಕೆಎ-05 ಎನ್‌ಆರ್ 0009' ಸಂಪೂರ್ಣ ನಕಲಿ ಹಾಗೂ ಅದು ಇಲಾಖೆಯಲ್ಲಿ ನೋಂದಣಿಯೇ ಆಗಿಲ್ಲ ಎಂಬುದು ದೃಢಪಟ್ಟಿದೆ. ಸಂಚಾರ ನಿಯಮ ಉಲ್ಲಂಘನೆ ಅಥವಾ ಯಾವುದೇ ಅಪರಾಧ ಕೃತ್ಯಗಳ ಸಂದರ್ಭದಲ್ಲಿ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳುವ ದುರುದ್ದೇಶದಿಂದಲೇ ಈ ನಕಲಿ ನಂಬರ್ ಪ್ಲೇಟ್ ಅಳವಡಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದು, ಈ ನಿಟ್ಟಿನಲ್ಲಿ ರಿಕ್ಕಿ ರೈ ವಿರುದ್ಧ ಬಿಎನ್ಎಸ್ (BNS) ಕಾಯ್ದೆಯಡಿ ವಂಚನೆ (ಸೆಕ್ಷನ್ 318) ಹಾಗೂ ನಕಲಿ ದಾಖಲೆ ಸೃಷ್ಟಿಸಿದ (ಸೆಕ್ಷನ್ 340) ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಮುಂದುವರಿಸಿದ್ದಾರೆ.

