
ಅನುರಾಧ
Shootout | ರಿಕ್ಕಿ ರೈ ಮೇಲೆ ಗುಂಡಿನ ದಾಳಿ; ಮುತ್ತಪ್ಪ ರೈ 2ನೇ ಪತ್ನಿ ಅನುರಾಧಾ ಅಮೆರಿಕಕ್ಕೆ ಪರಾರಿ?
ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಶೂಟೌಟ್ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ಹಾಗೂ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ರೈ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಿಕ್ಕಿ ರೈ ಮೇಲಿನ ಶೂಟೌಟ್ ಪ್ರಕರಣ ಸಂಬಂಧ ಅವರ ಕಾರು ಚಾಲಕ ಬಸವರಾಜು ನೀಡಿದ ದೂರಿನ ಮೇರೆಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧಾ ರೈ ಮೇಲೂ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅನುರಾಧಾ ರೈ ಅವರ ಸಿಮ್ ಕಾರ್ಡ್ ವಿಳಾಸ ಆಧರಿಸಿ ನೋಟಿಸ್ ನೀಡಲು ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ಅವರ ಮನೆಗೆ ತೆರಳಿದ್ದರು. ಆದರೆ, ಅನುರಾಧಾ ರೈ ಆ ಮನೆಯನ್ನು ಅಮೆರಿಕ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಅಲ್ಲದೆ, ಏಪ್ರಿಲ್ 14ರಂದೇ ಅನುರಾಧ ಅಮೆರಿಕಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಅನುರಾಧಾ ರೈ ಅವರ ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಕೊನೆಯಾಗಿತ್ತು. ಹೀಗಾಗಿ ಅನುರಾಧ ಅವರ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ನಾಲ್ವರ ವಿರುದ್ಧ ಪ್ರಕರಣ
ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಬಿಡದಿ ಪೊಲೀಸ್ ಠಾಣೆಯಲ್ಲಿ ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಮುತ್ತಪ್ಪ ರೈಗೆ ಆಪ್ತರಾಗಿದ್ದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿ ಏನಿದೆ?
ರಿಕ್ಕಿ ರೈ ಬೆಂಗಳೂರಿನ ಸದಾಶಿವನಗರ ಮತ್ತು ಬಿಡದಿಯ ಕರಿಯಪ್ಪನದೊಡ್ಡಿಯಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಸದಾಶಿವನಗರದ ಮನೆಯಿಂದ ಸಂಜೆ 6ರ ಸುಮಾರಿಗೆ ಹೊರಟು ಬಿಡದಿ ಮನೆಗೆ ರಾತ್ರಿ 7ರ ಸುಮಾರಿಗೆ ತಲುಪಿದ್ದೆವು. ಕೆಲ ಹೊತ್ತು ವಿಶ್ರಾಂತಿ ಪಡೆದ ಬಳಿಕ, ರಾತ್ರಿ 11ರ ಸುಮಾರಿಗೆ ಮನೆಯಿಂದ ಬೆಂಗಳೂರಿಗೆ ಹೊರಡಲು ಸಿದ್ಧವಾದವು. ಕಪ್ಪು ಬಣ್ಣದ ಫಾರ್ಚೂನರ್ ಕಾರಿನಲ್ಲಿ ನಾನು. ರಿಕ್ಕಿ ರೈ ಹಾಗೂ ಅಂಗರಕ್ಷಕ ರಾಜ್‌ಪಾಲ್ ಹೊರಟಿದ್ದೆವು. ಮನೆ ಕಾಂಪೌಂಡ್‌ನಿಂದ ಹೊರಕ್ಕೆ ಬಂದಾಗ ಟಪ್ ಎಂಬ ಶಬ್ದ ಕೇಳಿತು. ಟೈಯರ್‌ನಲ್ಲಿ ಸಮಸ್ಯೆ ಇರಬೇಕೆಂದು ಕಾರು ನಿಲ್ಲಿಸಿ ಪರಿಶೀಲಿಸಿ ಹೊರಟೆವು. ಅಲ್ಲಿಂದ ರೈಲ್ವೆ ಕ್ರಾಸ್‌ವರೆಗೆ ಬಂದಾಗ ರಿಕ್ಕಿ ಅವರು ತನ್ನ ಪರ್ಸ್ ಮರೆತಿರುವುದಾಗಿ ಹೇಳಿದರು. ಕಾರನ್ನು ಮತ್ತೆ ಮನೆಗೆ ಹಿಂದಿರುಗಿಸಿದ್ದೆವು. ಬಳಿಕ ಮಧ್ಯರಾತ್ರಿ 12.50ಕ್ಕೆ ಮತ್ತೆ ಬೆಂಗಳೂರಿಗೆ ಹೊರಟೆವು. ಕಾರು ಕಾಂಪೌಂಡ್ ದಾಟಿ ಸ್ವಲ್ಪ ಮುಂದಕ್ಕೆ ಬಂದಾಗ, ಈ ಹಿಂದೆ ಟಪ್ ಎಂದು ಶಬ್ದ ಕೇಳಿದ ಜಾಗದಲ್ಲೇ ಏಕಾಏಕಿ ಗುಂಡಿನ ದಾಳಿ ನಡೆಯಿತು. ಗುಂಡು ಹಿಂದೆ ಕುಳಿತಿದ್ದ ರಿಕ್ಕಿ ಅವರ ಮೂಗು ಮತ್ತು ಬಲತೋಳಿಗೆ ತಗುಲಿ ರಕ್ತ ಸೋರತೊಡಗಿತು. ಕೂಡಲೇ ನಾನು ಕೆಳಕ್ಕಿಳಿದು ಕಾರಿನ ಡೋರ್ ತೆರೆದು ನೋಡಿದಾಗ, ರಿಕ್ಕಿ ಅವರ ಮೂಗು ಛಿದ್ರವಾಗಿ ಮುಖ ರಕ್ತಮಯವಾಗಿತ್ತು. ಕೂಡಲೇ ನನ್ನ ಶರ್ಟ್ ಬಿಚ್ಚಿ ರಕ್ತ ಸೋರಿಕೆಯಾಗದಂತೆ ತಡೆಯಲು ಯತ್ನಿಸಿದೆ. ಬಳಿಕ, ಅದೇ ಕಾರಿನಲ್ಲಿ ರಾಜ್‌ಪಾಲ್ ಮತ್ತು ನಾನು ರಿಕ್ಕಿ ಅವರನ್ನು ಬಿಡದಿಯ ಭರತ್ ಕೆಂಪಣ್ಣ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದೆವು. ವೈದ್ಯರ ಸೂಚನೆ ಮೇರೆಗೆ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರಿಕ್ಕಿ ಅವರನ್ನು ಕರೆತಂದು ದಾಖಲಿಸಿದೆವು ಎಂದು ಬಸವರಾಜು ದೂರಿನಲ್ಲಿ ತಿಳಿಸಿದ್ದಾರೆ.
ಏನಿದು ಘಟನೆ?
ರಿಕ್ಕಿ ರೈ ಮೇಲೆ ನಡೆದ ಶೂಟೌಟ್‌ನಲ್ಲಿ ದುಷ್ಕರ್ಮಿಗಳು ಡ್ರೈವಿಂಗ್ ಸೀಟ್‌ನನ್ನೇ ಗುರಿಯಾಗಿಸಿ ಮೂರು ಸುತ್ತು ಗುಂಡು ಹಾರಿಸಿದ್ದರು. ರಿಕ್ಕಿ ರೈ ಸಾಮಾನ್ಯವಾಗಿ ತಾನೇ ಕಾರು ಚಾಲನೆ ಮಾಡುತ್ತಿದ್ದ ಕಾರಣ, ದಾಳಿಕೋರರು ಡ್ರೈವಿಂಗ್ ಸೀಟ್‌ನ ಮೇಲೆ ಗುರಿ ಇಟ್ಟಿದ್ದರು. ಆದರೆ, ಈ ಬಾರಿ ಕಾರನ್ನು ಚಾಲಕ ರಾಜು ಚಲಾಯಿಸುತ್ತಿದ್ದು, ಗುಂಡಿನ ದಾಳಿಯ ವೇಳೆ ತಕ್ಷಣ ಮುಂದೆ ಬಾಗಿದ್ದರಿಂದ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಪಕ್ಕದ ಸೀಟ್‌ನಲ್ಲಿದ್ದ ರಿಕ್ಕಿ ರೈ ಅವರ ಮೂಗು ಮತ್ತು ಕೈಗೆ ಗುಂಡು ತಾಕಿದ್ದು, ಗಂಭೀರ ಗಾಯಗೊಂಡಿದ್ದರು.