
ರಾಷ್ಟ್ರಧ್ವಜ ಹಾಗೂ ಭಗವದ್ಗೀತೆ ಮೇಲೆ ಕಾಲಿಟ್ಟು ರೀಲ್ಸ್; ಆರೋಪಿಗಳು ಅರೆಸ್ಟ್
ರಾಯಚೂರಿನಲ್ಲಿ ರಾಷ್ಟ್ರಧ್ವಜ ಹಾಗೂ ಭಗವದ್ಗೀತೆಗೆ ಅಪಮಾನಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ರಾಷ್ಟ್ರ ಧ್ವಜ ಹಾಗೂ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆಗೆ ಚಪ್ಪಲಿ ಕಾಲಿನಿಂದ ತುಳಿದು ರೀಲ್ಸ್ ಮಾಡುವ ಮೂಲಕ ಅಪಮಾನ ಮಾಡಿದ ಆತಂಕಕಾರಿ ಘಟನೆ ರಾಯಚೂರಿನಲ್ಲಿ ನಡೆದಿದೆ. ಪ್ರಕರಣದ ಗಾಂಭೀರ್ಯವನ್ನು ಅರಿತ ಪೊಲೀಸರು ದೂರು ದಾಖಲಾದ ಕೇವಲ 24 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಡೆದಿದ್ದೇನು?
ರಾಯಚೂರು ನಗರದ ಎಲ್.ಬಿ.ಎಸ್ ನಗರದ ನಿವಾಸಿಗಳಾದ ನವಾಜ್ ಮತ್ತು ಸೋಹೆಲ್ ಎಂಬ ಯುವಕರು ರಾಷ್ಟ್ರಧ್ವಜ ಹಾಗೂ ಭಗವದ್ಗೀತೆಯ ಮೇಲೆ ಚಪ್ಪಲಿ ಹಾಕಿ ಕಾಲಿಟ್ಟಿದ್ದಾರೆ. ಈ ವಿಕೃತ ಕೃತ್ಯವನ್ನು ಮೊಬೈಲ್‌ನಲ್ಲಿ ರೀಲ್ಸ್ ಮಾಡಿದ್ದಲ್ಲದೆ, ಅದನ್ನು ತಮ್ಮ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದರು. ದೇಶದ ಅಸ್ಮಿತೆ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತಂದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ದೂರು ಮತ್ತು ತಕ್ಷಣದ ಬಂಧನ
ಆರೋಪಿಗಳ ವಾಟ್ಸಾಪ್ ಸ್ಟೇಟಸ್ ಗಮನಿಸಿದ ವಿನಯ್ ಮತ್ತು ಆಂಜನೇಯ ಎಂಬ ಯುವಕರು ತಕ್ಷಣವೇ ಕಾರ್ತಿಕ್ ರೆಡ್ಡಿ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಕಾರ್ತಿಕ್ ರೆಡ್ಡಿ ಅವರು ರಾಯಚೂರಿನ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು.
"ರಾಷ್ಟ್ರಧ್ವಜ ಮತ್ತು ಭಗವದ್ಗೀತೆಗೆ ಅಪಮಾನ ಮಾಡಿರುವ ಈ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು," ಎಂದು ದೂರಿನಲ್ಲಿ ಒತ್ತಾಯಿಸಲಾಗಿತ್ತು. ದೂರು ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಮಾರ್ಕೆಟ್ ಯಾರ್ಡ್ ಪೊಲೀಸರು, ತಾಂತ್ರಿಕ ಸಾಕ್ಷ್ಯಾಧಾರಗಳ ನೆರವಿನೊಂದಿಗೆ ಆರೋಪಿಗಳಾದ ನವಾಜ್ ಮತ್ತು ಸೋಹೆಲ್‌ನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ತನಿಖೆ ತೀವ್ರಗೊಳಿಸಿದ ಪೊಲೀಸರು
ಬಂಧಿತ ಆರೋಪಿಗಳು ಕೇವಲ 'ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು' ಈ ಕೃತ್ಯ ಎಸಗಿದ್ದಾರೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕೋಮು ಸಂಘರ್ಷದ ಸಂಚು ಇದೆಯೇ ಎಂಬ ಆಯಾಮದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇವರಿಗೆ ಈ ಕೃತ್ಯ ಎಸಗಲು ಯಾರಾದರೂ ಕುಮ್ಮಕ್ಕು ನೀಡಿದ್ದಾರೆಯೇ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ದೃಷ್ಟಿಯಿಂದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

