ಮಾಜಿ ದೇವದಾಸಿಯರ ಮರು ಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆ: 15 ಜಿಲ್ಲೆಗಳಲ್ಲಿ 23,395 ಮಂದಿಯ ಗುರುತು
x

೨೦೧೯ರಲ್ಲಿ ಹಾಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರದ ದೇವದಾಸಿಯರ ಕಾಲೊನಿಗೆ ಭೇಟಿ ನೀಡಿದ ಸಂದರ್ಭ. ( ಎಕ್ಸ್​ ಪೋಸ್ಟ್​​)

ಮಾಜಿ ದೇವದಾಸಿಯರ ಮರು ಸಮೀಕ್ಷಾ ವರದಿ ಸರ್ಕಾರಕ್ಕೆ ಸಲ್ಲಿಕೆ: 15 ಜಿಲ್ಲೆಗಳಲ್ಲಿ 23,395 ಮಂದಿಯ ಗುರುತು

ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮರು ಸಮೀಕ್ಷೆಯನ್ನು ನಡೆಸಲಾಗಿತ್ತು.


Click the Play button to hear this message in audio format

ರಾಜ್ಯದಲ್ಲಿ ಸಾಮಾಜಿಕ ಪಿಡುಗಾಗಿರುವ ದೇವದಾಸಿ ಪದ್ಧತಿಯಿಂದ ನೊಂದ ಮಹಿಳೆಯರ ಬದುಕಿನಲ್ಲಿ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ನಡೆಸಿದ ಬಹುನಿರೀಕ್ಷಿತ ‘ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷಾ ವರದಿ’ಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಉತ್ತರ ಕರ್ನಾಟಕದ 15 ಜಿಲ್ಲೆಗಳಲ್ಲಿ ಒಟ್ಟು 23,395 ಮಾಜಿ ದೇವದಾಸಿ ಮಹಿಳೆಯರನ್ನು ಗುರುತಿಸಲಾಗಿದೆ.

ಸಮೀಕ್ಷೆಯ ವರದಿಯ ಪಿಡಿಎಫ್ ಇಲ್ಲಿದೆ



ಈ ಸಮೀಕ್ಷೆಯು ಕೇವಲ ದೇವದಾಸಿ ಮಹಿಳೆಯರ ಸಂಖ್ಯೆಯನ್ನು ಮಾತ್ರವಲ್ಲದೆ, ಅವರ ಕುಟುಂಬದ ಮೂರು ತಲೆಮಾರುಗಳ (ಮಕ್ಕಳು ಮತ್ತು ಮೊಮ್ಮಕ್ಕಳು) ಸಮಗ್ರ ಚಿತ್ರಣವನ್ನು ತೆರೆದಿಟ್ಟಿದೆ. ಇವರ ಸರ್ವತೋಮುಖ ಅಭಿವೃದ್ಧಿ ಮತ್ತು ಪುನರ್ವಸತಿಗಾಗಿ ‘ವಿಶೇಷ ಪ್ಯಾಕೇಜ್’ ಘೋಷಣೆ ಸೇರಿದಂತೆ ಹಲವು ಕ್ರಾಂತಿಕಾರಿ ಶಿಫಾರಸುಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಮೀಕ್ಷೆಯ ಪ್ರಮುಖ ಅಂಶಗಳು

ರಾಜ್ಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರ್ಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ 2025ರ ಸೆಪ್ಟೆಂಬರ್ 15 ರಿಂದ ಡಿಸೆಂಬರ್ 31 ರವರೆಗೆ ಈ ಮರು ಸಮೀಕ್ಷೆಯನ್ನು ನಡೆಸಲಾಗಿತ್ತು.

23,395 ಮಂದಿಯನ್ನು ಮಾಜಿ ದೇವದಾಸಿಯರು ಎಂದು ಗುರುತಿಸಲಾಗಿದ್ದು, 3 ತಲೆಮಾರು ಸೇರಿ ಕುಟುಂಬದ ಸದಸ್ಯರನ್ನೂ ಲೆಕ್ಕ ಹಾಕಲಾಗಿದೆ. ಸಮೀಕ್ಷೆಯ ಪ್ರಕಾರ ಮಾಜಿ ದೇವದಾಸಿಯರು, ಅವರ ಮಕ್ಕಳು (1ನೇ ತಲೆಮಾರು), ಮೊಮ್ಮಕ್ಕಳು (2 ಮತ್ತು 3ನೇ ತಲೆಮಾರು) ಸೇರಿದಂತೆ ಒಟ್ಟು 90,092 ಜನರು ಈ ವ್ಯಾಪ್ತಿಗೆ ಬರುತ್ತಾರೆ.

ಜಿಲ್ಲಾವಾರು ಅಂಕಿ-ಅಂಶಗಳು (ಟಾಪ್ 5 ಜಿಲ್ಲೆಗಳು)

ಅತಿ ಹೆಚ್ಚು ಮಾಜಿ ದೇವದಾಸಿ ಮಹಿಳೆಯರನ್ನು ಹೊಂದಿರುವ ಜಿಲ್ಲೆಗಳ ಪೈಕಿ ಬಾಗಲಕೋಟೆ ಮೊದಲ ಸ್ಥಾನದಲ್ಲಿದೆ.

ಇಲ್ಲಿ 4,189 ದೇವದಾಸಿಯರು ಇದ್ದರೆ, ವಿಜಯನಗರ ಜಿಲ್ಲೆಯಲ್ಲಿ 3,876, ಬೆಳಗಾವಿಯಲ್ಲಿ 2,649 ಹಾಗೂ ಕೊಪ್ಪಳ ಜಿಲ್ಲೆಯಲ್ಲಿ 2,469 ಮಂದಿ, ಬಳ್ಳಾರಿಯಲ್ಲಿ 2,333 ದೇವದಾಸಿಯರಿದ್ದಾರೆ.

ಮರು ಸಮೀಕ್ಷೆಯ ಉದ್ದೇಶವೇನಿತ್ತು?

ಹಿಂದಿನ ಸಮೀಕ್ಷೆಗಳಲ್ಲಿ ಕೆಲವು ಮಹಿಳೆಯರ ವಯಸ್ಸು, ವಿಳಾಸ ಮತ್ತು ಸಾಮಾಜಿಕ ಸ್ಥಿತಿಗತಿಯ ಬಗ್ಗೆ ನಿಖರ ಮಾಹಿತಿ ಲಭ್ಯವಿರಲಿಲ್ಲ. ಅಲ್ಲದೆ, ತಾಂತ್ರಿಕ ಕಾರಣಗಳಿಂದ ಹಲವರು ಪಟ್ಟಿಯಿಂದ ಹೊರಗುಳಿದಿದ್ದರು. ಇದೀಗ ಎಲ್ಲರನ್ನೂ ಒಳಗೊಳ್ಳುವ ಉದ್ದೇಶದಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಅತ್ಯಾಧುನಿಕ ವೆಬ್ ಅಪ್ಲಿಕೇಶನ್ ಬಳಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಈ ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿದೆ. ಇದು ಕುಟುಂಬದ ಶಿಕ್ಷಣ, ಉದ್ಯೋಗ, ಆದಾಯ ಮತ್ತು ಆರೋಗ್ಯದ ಸ್ಥಿತಿಗತಿಯ ಮೇಲೂ ಬೆಳಕು ಚೆಲ್ಲಿದೆ.

ಬದುಕಿಗೆ ಹೊಸ ದಾರಿ

ಸಮೀಕ್ಷಾ ವರದಿಯು ಮಾಜಿ ದೇವದಾಸಿ ಕುಟುಂಬಗಳ ಪುನರ್ವಸತಿಗಾಗಿ ಸರ್ಕಾರಕ್ಕೆ ಮಹತ್ವದ ಸಲಹೆಗಳನ್ನು ನೀಡಿದೆ: ಶಿಕ್ಷಣದಲ್ಲಿ ಸುಧಾರಣೆ ತರಲಾಗಿದ್ದು, ತಂದೆಯ ಹೆಸರು ಕಡ್ಡಾಯವಲ್ಲ ಎಂದಿದೆ. ಶಾಲಾ-ಕಾಲೇಜುಗಳ ಪ್ರವೇಶ ಹಾಗೂ ವಿವಿಧ ಅರ್ಜಿ ನಮೂನೆಗಳಲ್ಲಿ 'ತಂದೆಯ ಹೆಸರು' ನಮೂದಿಸುವುದನ್ನು ಕಡ್ಡಾಯಗೊಳಿಸದಂತೆ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗಿದೆ. ಇದು ಈ ಸಮುದಾಯದ ಮಕ್ಕಳು ಎದುರಿಸುವ ಮುಜುಗರ ಮತ್ತು ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸಲು ಸಹಕಾರಿಯಾಗಲಿದೆ.

ಈ ಸಮುದಾಯದ ಬಹುತೇಕರು ಪರಿಶಿಷ್ಟ ಜಾತಿ/ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ್ದು, ಇವರ ಮಕ್ಕಳಿಗೆ ವಿಶೇಷ ವಿದ್ಯಾರ್ಥಿವೇತನ, ವಸತಿ ಶಾಲೆಗಳ ಸೌಲಭ್ಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸೂಚಿಸಲಾಗಿದೆ.

ಆಯುಷ್ಮಾನ್ ಭಾರತ್ ಕಾರ್ಡ್ ವಿತರಣೆ, ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತರಬೇತಿ, ಹಾಗೂ ಸ್ವಾವಲಂಬಿ ಬದುಕಿಗಾಗಿ ಆರ್ಥಿಕ ಸಹಾಯಧನ ಒದಗಿಸಲು ಸಲಹೆ ನೀಡಲಾಗಿದೆ. ದೇವದಾಸಿಯರ ಮಕ್ಕಳು ಮತ್ತು ಮೊಮ್ಮಕ್ಕಳ ಅಂತರ್ಜಾತಿ ವಿವಾಹ ಅಥವಾ ಸಾಮಾನ್ಯ ವಿವಾಹವನ್ನು ಉತ್ತೇಜಿಸಲು ಪ್ರೋತ್ಸಾಹಧನ ನೀಡಲು ಶಿಫಾರಸು ಮಾಡಲಾಗಿದೆ. ಈ ಕುಟುಂಬಗಳ ಸಮಗ್ರ ಪುನರ್ವಸತಿಗಾಗಿ ಸರ್ಕಾರವು ಒಂದು ‘ವಿಶೇಷ ಪ್ಯಾಕೇಜ್’ ಘೋಷಣೆ ಮಾಡಬೇಕೆಂದು ವರದಿ ಬಲವಾಗಿ ಪ್ರತಿಪಾದಿಸಿದೆ.

ಸಚಿವರು ಹೇಳುವುದೇನು?

ವರದಿ ಸಲ್ಲಿಕೆ ಬಳಿಕ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಲಕ್ಷ್ಮೀ ಆರ್. ಹೆಬ್ಬಾಳಕರ್ ಅವರು, "ರಾಜ್ಯದ 15 ಜಿಲ್ಲೆಗಳಲ್ಲಿರುವ ಮಾಜಿ ದೇವದಾಸಿ ಕುಟುಂಬಗಳ ನಿಖರ ಸ್ಥಿತಿಗತಿ ಅರಿಯಲು ಈ ಮರು ಸಮೀಕ್ಷೆ ನಡೆಸಲಾಗಿತ್ತು. ಇವರಿಗೆ ಗೌರವಯುತ ಬದುಕು ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ. ಈಗ ಸಲ್ಲಿಕೆಯಾಗಿರುವ ವರದಿಯನ್ನು ಆಧರಿಸಿ, ಅವರ ಪುನರ್ವಸತಿಗಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ," ಎಂದು ಭರವಸೆ ನೀಡಿದ್ದಾರೆ.

Read More
Next Story