ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ; ಸಾವಿಗೂ ಮುನ್ನ ಮೇಲಾಧಿಕಾರಿ ವಿರುದ್ಧ ವಿಡಿಯೋ
x
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಆತ್ಮಹತ್ಯೆ

ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲೇ ಅಧಿಕಾರಿ ಆತ್ಮಹತ್ಯೆ; ಸಾವಿಗೂ ಮುನ್ನ ಮೇಲಾಧಿಕಾರಿ ವಿರುದ್ಧ ವಿಡಿಯೋ

Government Officer Suicide| ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರ ಕಿರುಕುಳದ ಬಗ್ಗೆ ವಿಡಿಯೋ ಮಾಡಿರುವ ಅವರು, ಡೆತ್ ನೋಟ್ ಕೂಡ ಬರೆದಿದ್ದಾರೆ.


Click the Play button to hear this message in audio format

ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ (59) ಅವರು ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾರಿ ಸಂಚಲನ ಮೂಡಿಸಿದೆ. ಮೃತ ಅಧಿಕಾರಿಯು ತಮ್ಮ ಸಾವಿಗೆ ಮೇಲಾಧಿಕಾರಿಯ ಕಿರುಕುಳವೇ ಕಾರಣ ಎಂದು ವಿಡಿಯೋ ಮಾಡಿರುವುದು ಈಗ ಇಲಾಖೆಯಲ್ಲಿ ಸಂಚಲನ ಮೂಡಿಸಿದೆ.

ಮೇಲಾಧಿಕಾರಿ ಕಿರುಕುಳಕ್ಕೆ ಬೇಸತ್ತು ಅಧಿಕಾರಿಯ ತೀವ್ರ ನಿರ್ಧಾರ

ಮೂಲತಃ ಪಾವಗಡ ತಾಲೂಕಿನವರೇ ಆದ ಮಲ್ಲಿಕಾರ್ಜುನ ಅವರು ಕಳೆದ ಮೂರು ವರ್ಷಗಳಿಂದ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ನಿವೃತ್ತಿಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗಲೇ ಈ ದುರ್ಘಟನೆ ಸಂಭವಿಸಿದೆ. ಕಚೇರಿಯ ಕೆಲಸ ಮುಗಿಸಿ ಸಿಬ್ಬಂದಿ ತೆರಳಿದ ನಂತರ ಅವರು ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೈರಲ್ ವಿಡಿಯೋದಲ್ಲಿ ಸ್ಫೋಟಕ ಮಾಹಿತಿ!

ಆತ್ಮಹತ್ಯೆಗೂ ಮುನ್ನ ಮಲ್ಲಿಕಾರ್ಜುನ ಅವರು ಮೊಬೈಲ್‌ನಲ್ಲಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದಾರೆ. "ನನ್ನ ತಾಯಿ, ಪತ್ನಿ ಮತ್ತು ಮಕ್ಕಳು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರು ನೀಡಿದ ಮಾನಸಿಕ ಕಿರುಕುಳದಿಂದಾಗಿ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ಕೃಷ್ಣಪ್ಪ ಅವರಿಗೆ ದೇವರು ಮತ್ತು ಕಾನೂನು ಖಂಡಿತವಾಗಿಯೂ ಶಿಕ್ಷೆ ನೀಡಲಿದೆ" ಎಂದು ವಿಡಿಯೋದಲ್ಲಿ ಅಳಲು ತೋಡಿಕೊಂಡಿದ್ದಾರೆ.

ಡೆತ್ ನೋಟ್ ವಶಕ್ಕೆ ಪಡೆದ ಪೊಲೀಸರು

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪಾವಗಡ ಪೊಲೀಸರು ಮಲ್ಲಿಕಾರ್ಜುನ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸ್ಥಳದಲ್ಲಿ ಲಭ್ಯವಿರುವ ಡೆತ್ ನೋಟ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರ ಹೆಸರು ಹಾಗೂ ಕೆಲವು ಹಣಕಾಸಿನ ವಿಚಾರಗಳ ಕುರಿತು ಪ್ರಸ್ತಾಪಿಸಲಾಗಿದೆ ಎಂದು ತಿಳಿದುಬಂದಿದೆ.

ಸೇವಾ ಅವಧಿಯ ಕೊನೆಯ ದಿನಗಳಲ್ಲಿ ಅಧಿಕಾರಿಯೊಬ್ಬರು ಕಿರುಕುಳಕ್ಕೆ ಬಲಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಸದ್ಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Read More
Next Story