ಮದುವೆ ಆಸೆ ತೋರಿಸಿ ಪ್ರಿಯತಮೆಯ ಹತ್ಯೆ: ಆತ್ಮಹತ್ಯೆ ನಾಟಕವಾಡಿದ್ದ ವಿವಾಹಿತ ಪ್ರಿಯಕರ ಅರೆಸ್ಟ್
x

ಸಾಂದರ್ಭಿಕ ಚಿತ್ರ

ಮದುವೆ ಆಸೆ ತೋರಿಸಿ ಪ್ರಿಯತಮೆಯ ಹತ್ಯೆ: ಆತ್ಮಹತ್ಯೆ ನಾಟಕವಾಡಿದ್ದ ವಿವಾಹಿತ ಪ್ರಿಯಕರ ಅರೆಸ್ಟ್

ಮದುವೆಯಾಗುವ ಭರವಸೆ ನೀಡಿ ಕೊಡಗಿನಿಂದ ಬೆಂಗಳೂರಿಗೆ ಕರೆತಂದಿದ್ ಯುವತಿಯನ್ನು ಆಕೆಯ ಪ್ರಿಯಕರನೇ ಕೇಬಲ್ ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಕೃತ್ಯವನ್ನು ಮುಚ್ಚಿಹಾಕಲು ಆತ್ಮಹತ್ಯೆಯ ನಾಟಕವಾಡಿದ್ದ


Click the Play button to hear this message in audio format

ಕೊಡಗಿನ ಪುಟ್ಟ ಹಳ್ಳಿಯೊಂದರಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದ 23 ವರ್ಷದ ಯುವತಿಯೊಬ್ಬಳನ್ನು ಮದುವೆಯಾಗುವ ಆಸೆ ತೋರಿಸಿ ಬೆಂಗಳೂರಿಗೆ ಕರೆತಂದು ಅಮಾನುಷವಾಗಿ ಕೊಲೆ ಮಾಡಿರುವ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪ್ರಿಯಕರನೇ ಕುತ್ತಿಗೆ ಬಿಗಿದು ಕೊಲೆ ಮಾಡಿ, ಬಳಿಕ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಸಹಜೀವನದಲ್ಲಿ (ಲಿವಿಂಗ್ ರಿಲೇಶನ್‌ಶಿಪ್) ಶುರುವಾದ ಇವರ ಸಂಬಂಧ ಇದೀಗ ಭೀಕರ ಕೊಲೆಯಲ್ಲಿ ಅಂತ್ಯ ಕಂಡಿದೆ.

ಮೂಲತಃ ಕೊಡಗಿನವರಾದ ಅಯ್ಯಪ್ಪ ಹಾಗೂ ರಂಜಿತಾ ಈ ದುರಂತ ಪ್ರಕರಣದ ಪ್ರಮುಖರು. ಆರೋಪಿ ಅಯ್ಯಪ್ಪನಿಗೆ ಈ ಮೊದಲೇ ವಿವಾಹವಾಗಿದ್ದು, ಪತ್ನಿಯಿಂದ ದೂರವಿದ್ದ ಎನ್ನಲಾಗಿದೆ. ಇದೇ ವೇಳೆ ತನ್ನದೇ ಊರಿನ ಅನ್ಯ ಜಾತಿಯ ಯುವತಿ ರಂಜಿತಾಳ ಮೇಲೆ ಕಣ್ಣು ಹಾಕಿದ್ದ ಆತ, ಆಕೆಯನ್ನು ಪ್ರೀತಿಸುವ ನಾಟಕವಾಡಿದ್ದ. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ, ಯುವತಿಯ ಪೋಷಕರಿಗೂ ಮಾತು ಕೊಟ್ಟು ಒಪ್ಪಿಸಿದ್ದ. ತದನಂತರ ಆಕೆಯನ್ನು ತನ್ನೊಂದಿಗೆ ಬೆಂಗಳೂರಿಗೆ ಕರೆತಂದು ಬಾಡಿಗೆ ಮನೆಯೊಂದರಲ್ಲಿ ಇರಿಸಿಕೊಂಡಿದ್ದ.

ವರ್ತೂರಿನಲ್ಲಿ ಜೀವನ

ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಡಿಗೆ ಮನೆಯೊಂದರಲ್ಲಿ ಇಬ್ಬರೂ ಕೆಲವು ತಿಂಗಳುಗಳಿಂದ ಒಟ್ಟಿಗೆ ವಾಸವಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಇವರ ಸಂಬಂಧದಲ್ಲಿ ಇತ್ತೀಚೆಗೆ ಬಿರುಕು ಮೂಡಿತ್ತು. ಇವರಿಬ್ಬರ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎನ್ನಲಾಗಿದೆ. ಸಾವಿಗೂ ಕೆಲವೇ ದಿನಗಳ ಮುನ್ನ ತನ್ನ ಪೋಷಕರಿಗೆ ಕರೆ ಮಾಡಿದ್ದ ರಂಜಿತಾ, ಅಯ್ಯಪ್ಪ ತನ್ನ ಮೇಲೆ ಹಲ್ಲೆ ನಡೆಸುತ್ತಿರುವುದಾಗಿ ಅಳಲು ತೋಡಿಕೊಂಡಿದ್ದಳು. ಅಷ್ಟೇ ಅಲ್ಲದೆ, ಆತ ತನಗೆ ಜಾತಿ ನಿಂದನೆ ಮಾಡುತ್ತಿದ್ದಾನೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಳು ಎಂದು ಆಕೆಯ ಪೋಷಕರು ದೂರಿನಲ್ಲಿ ವಿವರಿಸಿದ್ದಾರೆ.

ಮಗಳು ಕರೆ ಮಾಡಿ ಅಳಲು ತೋಡಿಕೊಂಡ ಎರಡು-ಮೂರು ದಿನಗಳ ಬಳಿಕ, ಅಯ್ಯಪ್ಪನೇ ನೇರವಾಗಿ ರಂಜಿತಾಳ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳು ನೇಣಿಗೆ ಶರಣಾಗಿದ್ದಾಳೆ ಎಂಬ ಸುಳ್ಳು ಕಥೆ ಕಟ್ಟಿದ್ದಾನೆ. ಆತನ ಮಾತುಗಳಿಂದ ಹಾಗೂ ಮಗಳು ಮೊದಲೇ ಹೇಳಿದ್ದ ವಿಚಾರಗಳಿಂದ ತೀವ್ರ ಅನುಮಾನಗೊಂಡ ರಂಜಿತಾಳ ಪೋಷಕರು ತಕ್ಷಣವೇ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೋಷಕರ ದೂರಿನ ಆಧಾರದ ಮೇಲೆ ಆರೋಪಿ ಅಯ್ಯಪ್ಪನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಆತ ಸತ್ಯವನ್ನು ಬಾಯಿಬಿಟ್ಟಿದ್ದಾನೆ. ಕೇಬಲ್ ವೈರ್‌ನಿಂದ ರಂಜಿತಾಳ ಕುತ್ತಿಗೆ ಬಿಗಿದು ಬರ್ಬರವಾಗಿ ಕೊಲೆಗೈದಿರುವ ಆತ, ತನ್ನ ಕೃತ್ಯವನ್ನು ಮುಚ್ಚಿಹಾಕಲು ಮೃತದೇಹವನ್ನು ನೇಣುಹಾಕಿ ಆತ್ಮಹತ್ಯೆಯ ರೂಪ ನೀಡಲು ಯತ್ನಿಸಿದ್ದಾನೆ ಎಂಬ ಆಘಾತಕಾರಿ ವಿಚಾರ ತನಿಖೆಯಿಂದ ಬಯಲಾಗಿದೆ.

ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ರಂಜಿತಾಳ ಮೃತದೇಹವನ್ನು ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ನಂಬಿ ಹೋದ ಮಗಳು ಶವವಾಗಿ ಬಂದಿರುವುದನ್ನು ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಕೊಡಗಿನ ಪೊನ್ನಂಪೇಟೆಯಲ್ಲಿ ಆಕೆಯ ಅಂತ್ಯಕ್ರಿಯೆ ನೆರವೇರಲಿದೆ.

Read More
Next Story