
Gym Trainer Suicide Case| ವಿವಾಹಿತ ಮಹಿಳೆಯ ಕಾಟಕ್ಕೆ ಬೇಸತ್ತು ಜಿಮ್ ಟ್ರೈನರ್ ಆತ್ಮಹತ್ಯೆ?
ನೆಲಮಂಗಲದ ವಾಜರಹಳ್ಳಿಯಲ್ಲಿ ಜಿಮ್ ಟ್ರೈನರ್ ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿದ್ದು, ವಿವಾಹಿತ ಮಹಿಳೆ ಯೋಗಿತಾಳ ಕಿರುಕುಳವೇ ಇದಕ್ಕೆ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ.
ವಿವಾಹಿತ ಮಹಿಳೆಯೊಬ್ಬಳ ಕಿರುಕುಳ ಹಾಗೂ ಬ್ಲ್ಯಾಕ್‌ಮೇಲ್‌ಗೆ ಬೇಸತ್ತು 28 ವರ್ಷದ ಜಿಮ್ ಟ್ರೈನರ್ ನೇಣಿಗೆ ಶರಣಾಗಿರುವ ಘಟನೆ ನೆಲಮಂಗಲ ಟೌನ್‌ನ ವಾಜರಹಳ್ಳಿಯಲ್ಲಿ ನಡೆದಿದೆ. ಮೃತ ಯುವಕನನ್ನು ದಿಲೀಪ್ (28) ಎಂದು ಗುರುತಿಸಲಾಗಿದ್ದು, ಈತನ ಸಾವಿಗೆ 42 ವರ್ಷದ ಯೋಗಿತಾ ಎಂಬಾಕೆಯೇ ಕಾರಣ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ಜಿಮ್‌ನಲ್ಲಿ ಶುರುವಾದ ಸ್ನೇಹ, ಬ್ಲ್ಯಾಕ್‌ಮೇಲ್‌ನಲ್ಲಿ ಅಂತ್ಯ?
ದಿಲೀಪ್ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದು, ಅಲ್ಲಿಗೆ ಬರುತ್ತಿದ್ದ 42 ವರ್ಷದ ಯೋಗಿತಾ ಎಂಬಾಕೆಯ ಪರಿಚಯವಾಗಿತ್ತು. ಮದುವೆಯಾಗಿದ್ದರೂ ಯೋಗಿತಾ ಯುವಕ ದಿಲೀಪ್‌ನೊಂದಿಗೆ ಸಂಬಂಧ ಬೆಳೆಸಿದ್ದಳು ಎನ್ನಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಇವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಮಹಿಳೆಯು ದಿಲೀಪ್‌ಗೆ ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಳು. ಈಕೆಯ ನಿರಂತರ ಕಿರುಕುಳದಿಂದ ದಿಲೀಪ್ ತೀವ್ರವಾಗಿ ನೊಂದಿದ್ದ ಎಂದು ಕುಟುಂಬಸ್ಥರು ದೂರಿದ್ದಾರೆ.
ಸಹೋದರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದ ಮಹಿಳೆ!
ಘಟನೆಯ ದಿನ ರಾತ್ರಿ ದಿಲೀಪ್ ಕೊನೆಯದಾಗಿ ಯೋಗಿತಾಗೆ ಫೋನ್ ಕರೆ ಮಾಡಿದ್ದ ಎನ್ನಲಾಗಿದೆ. ಆ ಬಳಿಕ ಆತ ತನ್ನ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಅಚ್ಚರಿಯ ವಿಷಯವೆಂದರೆ, ದಿಲೀಪ್ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯವನ್ನು ಸ್ವತಃ ಯೋಗಿತಾ ಇನ್‌ಸ್ಟಾಗ್ರಾಮ್ ಮೂಲಕ ದಿಲೀಪ್ ಸಹೋದರಿಗೆ ತಿಳಿಸಿದ್ದಾಳೆ. "ನಿನ್ನ ಸಹೋದರ ರೂಮಿನಲ್ಲಿ ಸೂಸೈಡ್ ಮಾಡಿಕೊಂಡಿದ್ದಾನೆ" ಎಂದು ಆಕೆ ಮೆಸೇಜ್ ಮಾಡಿದ ಬಳಿಕವೇ ಮನೆಯವರು ಬಾಗಿಲು ಮುರಿದು ನೋಡಿದಾಗ ಶವ ಪತ್ತೆಯಾಗಿದೆ.
ಕುಟುಂಬಸ್ಥರ ಆಕ್ರೋಶ – ಪೊಲೀಸರ ತನಿಖೆ
ತನ್ನ ಮಗನ ಸಾವಿಗೆ ಯೋಗಿತಾಳ ಬ್ಲ್ಯಾಕ್‌ಮೇಲ್ ಕಾರಣ ಎಂದು ಆರೋಪಿಸಿರುವ ಪೋಷಕರು, ಆಕೆಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಟೌನ್ ಪೊಲೀಸರು ಹಾಗೂ ಸೊಕೋ (SOCO) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

