
ಮದುವೆ ನಿರಾಕರಿಸಿದ್ದಕ್ಕೆ ಬಲವಂತವಾಗಿ ಎಚ್‌ಐವಿ ರಕ್ತ ಚುಚ್ಚಿಸಿಕೊಂಡಿದ್ದ ಹೈದರಾಬಾದ್‌ನ ಯುವತಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
HIV Positive Blood|ಮದುವೆಗೆ ಒಲ್ಲೆ ಎಂದ ಯುವತಿಗೆ HIV ರಕ್ತ ಇಂಜೆಕ್ಟ್ ಮಾಡಿದ ಪಾಪಿ; ಮನನೊಂದ ಯುವತಿ ಆತ್ಮಹತ್ಯೆ
ಮದುವೆ ನಿರಾಕರಿಸಿದ್ದಕ್ಕೆ ಯುವತಿಗೆ ಎಚ್‌ಐವಿ ರಕ್ತ ಚುಚ್ಚಿದ್ದ ಆರೋಪಿ. ಇದರಿಂದ ಮನನೊಂದ ಹೈದರಾಬಾದ್‌ನ 24 ವರ್ಷದ ಯುವತಿ ತೀವ್ರ ಮಾನಸಿಕ ಆಘಾತದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ವಿವಾಹ ನಿಶ್ಚಿತಾರ್ಥ ಮುರಿದುಕೊಂಡಿದ್ದಕ್ಕೆ ಆಕ್ರೋಶಗೊಂಡು ಯುವಕನೊಬ್ಬ ಹೆಚ್‌ಐವಿ ಸೋಂಕಿತ ತನ್ನ ರಕ್ತವನ್ನು ಯುವತಿಯ ದೇಹಕ್ಕೆ ಬಲವಂತವಾಗಿ ಇಂಜೆಕ್ಟ್ ಮಾಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಇದರಿಂದ ತೀವ್ರ ಖಿನ್ನತೆಗೊಳಗಾದ 22 ವರ್ಷದ ಯುವತಿ ಶುಕ್ರವಾರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಮನೋಹರ್ ಮತ್ತು ಸಂತ್ರಸ್ತ ಯುವತಿ ದೂರದ ಸಂಬಂಧಿಗಳಾಗಿದ್ದರು. ಇವರಿಬ್ಬರಿಗೂ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಆದರೆ, ಮನೋಹರ್ ಪೋಷಕರು ಎಚ್‌ಐವಿ ಪಾಸಿಟಿವ್ ಆಗಿದ್ದ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಯುವತಿಯ ಪೋಷಕರು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮನೋಹರ್‌ನನ್ನು ರಕ್ತ ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಮನೋಹರ್ ಕೂಡ ಎಚ್‌ಐವಿ ಸೋಂಕಿತ ಎಂಬುದು ದೃಢಪಟ್ಟಿದೆ. ಇದರಿಂದ ಆತಂಕಗೊಂಡ ಯುವತಿ ಕೂಡಲೇ ಈ ಸಂಬಂಧವನ್ನು ಕಡಿದುಕೊಂಡು ಮದುವೆಯಾಗಲು ನಿರಾಕರಿಸಿದ್ದಳು.
ತನ್ನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದರಿಂದ ಕೆರಳಿದ ಮನೋಹರ್, ಮಾರ್ಚ್ 11 ರಂದು ಯುವತಿಯ ಮನೆಗೆ ನುಗ್ಗಿ ಆಕೆಗೆ ಬಲವಂತವಾಗಿ ಎಚ್‌ಐವಿ ಸೋಂಕಿತ ರಕ್ತವಿದ್ದ ಇಂಜೆಕ್ಷನ್ ಚುಚ್ಚಿದ್ದಾನೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಆದರೆ, ಈ ಘಟನೆಯ ನಂತರ ಯುವತಿ ತೀವ್ರ ಖಿನ್ನತೆಗೆ ಜಾರಿದ್ದರು. ಎಚ್‌ಐವಿ ಸೋಂಕು ತಗುಲಿರುವ ಭಯ, ಸಾಮಾಜಿಕ ಕಳಂಕ ಮತ್ತು ಭಾವನಾತ್ಮಕ ಆಘಾತದಿಂದ ಹೊರಬರಲಾಗದೆ ಶುಕ್ರವಾರ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ.
ಶುಕ್ರವಾರ ಮನೆಯಲ್ಲಿ ಯುವತಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿಸಿ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಆರೋಪಿಯ ಮೇಲೆ ಈಗಾಗಲೇ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109 ರಡಿ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

