
ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಮಣ್ಯಂ
ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಮಣ್ಯಂ ಆತ್ಮಹತ್ಯೆ
ಶ್ರೀಲಂಕಾ ಮೂಲದವರಾಗಿದ್ದ ಸುಭಾಷಿಣಿ ಭಾರತದಲ್ಲಿ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ ಅವರು ಬೆಂಗಳೂರು ಮೂಲದ ಉದ್ಯಮಿ ಪಿಪ್ಪಿನ್ (Pippin) ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು.
ತಮಿಳು ಟಿವಿ ವೀಕ್ಷಕರಿಗೆ ಚಿರಪರಿಚಿತರಾಗಿದ್ದ ಹಾಗೂ ಸನ್ ಟಿವಿಯ ಜನಪ್ರಿಯ 'ಕಯಲ್' (Kayal) ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಸುಭಾಷಿಣಿ ಬಾಲಸುಬ್ರಮಣ್ಯಂ (36) ಅವರು ಚೆನ್ನೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಈ ದಿಢೀರ್ ಸಾವು ತಮಿಳು ಕಿರುತೆರೆ ಹಾಗೂ ಚಿತ್ರರಂಗದಲ್ಲಿ ತೀವ್ರ ಆಘಾತ ಮೂಡಿಸಿದೆ.
ಶ್ರೀಲಂಕಾ ಮೂಲದವರಾಗಿದ್ದ ಸುಭಾಷಿಣಿ ಭಾರತದಲ್ಲಿ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ ಅವರು ಬೆಂಗಳೂರು ಮೂಲದ ಉದ್ಯಮಿ ಪಿಪ್ಪಿನ್ (Pippin) ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಮದುವೆಯ ನಂತರ ಪತಿಯೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರೂ, 'ಕಯಲ್' ಧಾರಾವಾಹಿಯ ಚಿತ್ರೀಕರಣದ ಅನುಕೂಲಕ್ಕಾಗಿ ಅವರು ಚೆನ್ನೈನ ಅಯ್ಯಪ್ಪನ್ ತಾಂಕಲ್‌ನಲ್ಲಿರುವ ಅಪಾರ್ಟ್‌ಮೆಂಟ್ ಒಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ವೀಡಿಯೋ ಕಾಲ್ ಜಗಳವೇ ಕಾರಣ?
ಸಾಮಾಜಿಕ ಜಾಲತಾಣಗಳಲ್ಲಿ, ಅದರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿ 4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಸುಭಾಷಿಣಿ ಸದಾ ಸಕ್ರಿಯರಾಗಿರುತ್ತಿದ್ದರು ಹಾಗೂ ತಮ್ಮ ದಿನನಿತ್ಯದ ಬದುಕಿನ ಅಪ್‌ಡೇಟ್‌ಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ ಭಾನುವಾರ ರಾತ್ರಿ ಪತಿಯೊಂದಿಗೆ ವೀಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಇಬ್ಬರ ನಡುವೆ ಕೌಟುಂಬಿಕ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ ಎನ್ನಲಾಗಿದೆ. ವಾಗ್ವಾದದಿಂದ ತೀವ್ರ ಮನನೊಂದ ಸುಭಾಷಿಣಿ, ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತಿಗೆ ತಿಳಿಸಿ ಕರೆ ಕಡಿತಗೊಳಿಸಿದ್ದಾರೆ. ಬಳಿಕ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಾವಿನ ನಿಖರ ಕಾರಣ ತಿಳಿಯಲು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಹುಟ್ಟುಹಬ್ಬದ ಸಂಭ್ರಮಕ್ಕೂ ಮುನ್ನವೇ ದುರಂತ
ಕಿರುತೆರೆ ಮಾತ್ರವಲ್ಲದೆ ಸಿನಿಮಾಗಳಲ್ಲೂ ನಟಿಸಿದ್ದ ಸುಭಾಷಿಣಿ, 2012ರಲ್ಲಿ ಶ್ರೀಲಂಕಾ ಹಿನ್ನೆಲೆಯ 'ಇನಿ ಅವನ್' ಹಾಗೂ ಇತ್ತೀಚೆಗೆ 2023ರಲ್ಲಿ ಆರಿ ನಟನೆಯ 'ಎಲ್ಲಾಮ್ ಮೇಲ ಇರುಕುರಾವನ್ ಪಾತುಪ್ಪಾನ್' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೇ ಏಪ್ರಿಲ್ 12 ರಂದು ಸುಭಾಷಿಣಿ ಅವರ ಹುಟ್ಟುಹಬ್ಬವಿತ್ತು. ಜೊತೆಗೆ ಏಪ್ರಿಲ್ 21 ರಂದು ಅವರ ವಿವಾಹದ ಎರಡನೇ ವಾರ್ಷಿಕೋತ್ಸವವಿತ್ತು. ಆದರೆ ಈ ಎರಡೂ ಸಂಭ್ರಮಗಳನ್ನು ಆಚರಿಸುವ ಮುನ್ನವೇ ಅವರು ಇಹಲೋಕ ತ್ಯಜಿಸಿದ್ದಾರೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

