ಪತಿಯ ವಿರುದ್ಧ ಕೇಸ್‌ ರೀ ಓಪನ್‌ ಮಾಡೋದಾಗಿ ಬೆದರಿಕೆ- ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇನ್ಸ್‌ಪೆಕ್ಟರ್
x

ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ. ಅವರ ವಿರುದ್ಧ ಲೈಂಗಿಕ ಕಿರುಕುಳ, ಹಣದ ಬೇಡಿಕೆ ಮತ್ತು ಅಧಿಕಾರ ದುರುಪಯೋಗದ ಗಂಭೀರ ದೂರು ದಾಖಲಾಗಿದೆ.

ಪತಿಯ ವಿರುದ್ಧ ಕೇಸ್‌ ರೀ ಓಪನ್‌ ಮಾಡೋದಾಗಿ ಬೆದರಿಕೆ- ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇನ್ಸ್‌ಪೆಕ್ಟರ್

ಸಂತ್ರಸ್ತೆಯ ಅಪ್ರಾಪ್ತ ಮಗಳ ಮೇಲೂ ಇನ್ಸ್‌ಪೆಕ್ಟರ್ ಕೆಟ್ಟ ದೃಷ್ಟಿ ಬೀರಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ತನಿಖೆಗೆ ಆದೇಶಿಸಿದ್ದು, ಮಹಿಳಾ ಆಯೋಗವು ಕಠಿಣ ಕ್ರಮಕ್ಕೆ ಸೂಚಿಸಿದೆ.


Click the Play button to hear this message in audio format

ರಕ್ಷಣೆ ನೀಡಬೇಕಾದ ಪೊಲೀಸ್ ಅಧಿಕಾರಿಯೇ ಭಕ್ಷಕನಾದರೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿರುವ ಘಟನೆಯೊಂದು ಕರಾವಳಿ ಭಾಗದಲ್ಲಿ ಸಂಚಲನ ಮೂಡಿಸಿದೆ. ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ. ಅವರ ವಿರುದ್ಧ ಲೈಂಗಿಕ ಕಿರುಕುಳ, ಹಣದ ಬೇಡಿಕೆ ಮತ್ತು ಅಧಿಕಾರ ದುರುಪಯೋಗದ ಗಂಭೀರ ಆರೋಪಗಳು ಕೇಳಿಬಂದಿದ್ದು, ಪ್ರಕರಣ ಈಗ ರಾಜ್ಯ ಸರ್ಕಾರದ ಮೆಟ್ಟಿಲೇರಿದೆ. ಈ ಸಂಬಂಧ ಸಂತ್ರಸ್ತ ಮಹಿಳೆಯರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡುವ ಮೂಲಕ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

ಎರಡು ವರ್ಷಗಳ ಹಿಂದೆ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಪತಿಯನ್ನು ಬಂಧಿಸಲಾಗಿತ್ತು. ಈ ವೇಳೆ ಪತಿಯನ್ನು ಬಿಡುಗಡೆ ಮಾಡಲು ಇನ್‌ಸ್ಪೆಕ್ಟರ್ ಸಂದೇಶ್ ಅವರು 25 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಮತ್ತು ಲೈಂಗಿಕವಾಗಿ ಸಹಕರಿಸುವಂತೆ ಪೀಡಿಸಿದ್ದರು ಎಂಬ ಗಂಭೀರ ಆರೋಪ ದೂರಿನಲ್ಲಿ ಕೇಳಿಬಂದಿದೆ. ಒಂದು ವೇಳೆ ಈ ಬೇಡಿಕೆಗಳಿಗೆ ಒಪ್ಪದಿದ್ದರೆ ಪತಿಯ ವಿರುದ್ಧದ ರೀ ಓಪನ್‌ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಅಲ್ಲದೆ, ಇನ್‌ಸ್ಪೆಕ್ಟರ್ ರಾತ್ರಿ ವೇಳೆ ಕಾಂಪೌಂಡ್ ಗೋಡೆ ಜಿಗಿದು ಮನೆಗೆ ನುಗ್ಗುತ್ತಿದ್ದರು ಮತ್ತು ಬಲವಂತವಾಗಿ ನೃತ್ಯ ಮಾಡುವಂತೆ ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಉನ್ನತ ಮಟ್ಟದ ತನಿಖೆಗೆ ಆಗ್ರಹ

ಮಂಗಳೂರು ಪೊಲೀಸರಿಂದ ಈ ಪ್ರಕರಣದ ನ್ಯಾಯಯುತ ತನಿಖೆ ನಡೆಯುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಮೂವರು ಮಹಿಳೆಯರು, ಪ್ರಕರಣವನ್ನು ವಿಶೇಷ ತನಿಖಾ ತಂಡ ಅಥವಾ ಸಿಐಡಿಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ರಾಜ್ಯ ಮಹಿಳಾ ಆಯೋಗವು ಮಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದಿದ್ದು, ರಕ್ಷಣೆ ನೀಡಬೇಕಾದ ಅಧಿಕಾರಿಯೇ ಇಂತಹ ಕೃತ್ಯದಲ್ಲಿ ತೊಡಗಿರುವುದು ಖಂಡನೀಯ ಎಂದು ಹೇಳಿದೆ. ಕೂಡಲೇ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಆಯೋಗ ನಿರ್ದೇಶನ ನೀಡಿದೆ.

ಅಪ್ರಾಪ್ತ ಮಗಳ ಮೇಲೂ ಕೆಟ್ಟದೃಷ್ಟಿ

ಈ ಪ್ರಕರಣದಲ್ಲಿ ಅತ್ಯಂತ ಅಮಾನವೀಯ ಸಂಗತಿಯೆಂದರೆ, ಇನ್ಸ್‌ಪೆಕ್ಟರ್ ತಾನು ಈ ಹಿಂದೆ ಲೈಂಗಿಕವಾಗಿ ಬಳಸಿಕೊಂಡಿದ್ದ ಮಹಿಳೆಯ ಅಪ್ರಾಪ್ತ ಮಗಳ ಮೇಲೂ ಕಣ್ಣು ಹಾಕಿದ್ದರು ಎನ್ನಲಾಗಿದೆ. ಸಂತ್ರಸ್ತ ಮಹಿಳೆಗೆ ಫೋನ್ ಮಾಡಿ, ಆಕೆಯ ಮಗಳು ಓದುತ್ತಿರುವ ಕಾಲೇಜಿಗೆ ಬರುವುದಾಗಿ ಬೆದರಿಕೆ ಹಾಕಿರುವ ಆಡಿಯೋ ತುಣುಕು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.

ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಪ್ರಕರಣದ ತನಿಖೆಯನ್ನು ಉತ್ತರ ವಿಭಾಗದ ಎಸಿಪಿ ಅವರಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಈವರೆಗೆ ಯಾವುದೇ ಮಹಿಳೆಯರು ಲೈಂಗಿಕ ಕಿರುಕುಳದ ಬಗ್ಗೆ ನೇರವಾಗಿ ಠಾಣೆಗೆ ಬಂದು ದೂರು ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ದ್ವೇಷ ಅಥವಾ ಕೌಟುಂಬಿಕ ವಿವಾದಗಳ ಹಿನ್ನೆಲೆಯಲ್ಲಿ ಈ ಆರೋಪಗಳು ಕೇಳಿಬರುತ್ತಿವೆಯೇ ಎಂಬ ಆಯಾಮದಲ್ಲೂ ಇಲಾಖೆ ಪರಿಶೀಲಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

Read More
Next Story