ಮಂಜುಮ್ಮಲ್ ಬಾಯ್ಸ್ ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ಕಿರುಕುಳ ಕೇಸ್
x

ಮಂಜುಮ್ಮಲ್ ಬಾಯ್ಸ್ ಖ್ಯಾತಿಯ ಮಲಯಾಳಂ ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ.

'ಮಂಜುಮ್ಮಲ್ ಬಾಯ್ಸ್' ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ಕಿರುಕುಳ ಕೇಸ್

ಮಂಜುಮ್ಮಲ್ ಬಾಯ್ಸ್ ಖ್ಯಾತಿಯ ಮಲಯಾಳಂ ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ಕಿರುಕುಳದ ಗಂಭೀರ ಆರೋಪ ಕೇಳಿಬಂದಿದೆ. ಕೊಚ್ಚಿ ಪೊಲೀಸರು ಬಿಎನ್‌ಎಸ್ ಸೆಕ್ಷನ್ 74 ಮತ್ತು 75ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.


Click the Play button to hear this message in audio format

ಮಲಯಾಳಂ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದಿದ್ದ 'ಮಂಜುಮ್ಮಲ್ ಬಾಯ್ಸ್' ಚಿತ್ರದ ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಮಹಿಳಾ ನಟಿಯೊಬ್ಬರು ನೀಡಿದ ಲೈಂಗಿಕ ಕಿರುಕುಳದ ದೂರಿನ ಮೇರೆಗೆ ಕೇರಳ ಪೊಲೀಸರು ಚಿದಂಬರಂ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಸುಮಾರು ಎರಡು ವರ್ಷಗಳ ಹಿಂದೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೊಚ್ಚಿಯ ಇಲಂಕುಲಂನಲ್ಲಿರುವ ನಟಿಯ ಫ್ಲ್ಯಾಟ್‌ಗೆ ಅಕ್ರಮವಾಗಿ ಪ್ರವೇಶಿಸಿದ ನಿರ್ದೇಶಕ ಚಿದಂಬರಂ, ನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ ಮತ್ತು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ನಟಿ ಗಂಭೀರ ಆರೋಪ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಟಿ ನೀಡಿದ ದೂರಿನ ಆಧಾರದ ಮೇಲೆ ಎರ್ನಾಕುಲಂ ಟೌನ್ ಸೌತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 74 (ಮಹಿಳೆಯ ಘನತೆಗೆ ಕುಂದು ತರುವುದು) ಮತ್ತು ಸೆಕ್ಷನ್ 75 (ಲೈಂಗಿಕ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ (ಮಾರ್ಚ್ 2, 2026) ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಪ್ರಾಥಮಿಕ ತನಿಖೆ ಕೈಗೆತ್ತಿಕೊಂಡಿದ್ದಾರೆ.

ʻʻಸದ್ಯಕ್ಕೆ ಸಂತ್ರಸ್ತೆಯ ಹೇಳಿಕೆಯನ್ನು ಪಡೆದು ಪ್ರಕರಣ ದಾಖಲಿಸಲಾಗಿದೆ. ಘಟನೆಯ ಕುರಿತು ಹೆಚ್ಚಿನ ಪರಿಶೀಲನೆ ಮತ್ತು ಪುರಾವೆಗಳ ಸಂಗ್ರಹದ ನಂತರವಷ್ಟೇ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆಯ ಭಾಗವಾಗಿ ಶೀಘ್ರದಲ್ಲೇ ನಿರ್ದೇಶಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ.

'ಮಂಜುಮ್ಮಲ್ ಬಾಯ್ಸ್' ಸಿನಿಮಾ ಮೂಲಕ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ಚಿದಂಬರಂ, ಸದ್ಯ ಜಿತು ಮಾಧವನ್ ಅವರ ಚಿತ್ರಕಥೆಯುಳ್ಳ 'ಬಾಲನ್' ಎಂಬ ಹೊಸ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹೊಸ ಆರೋಪದ ಬಗ್ಗೆ ನಿರ್ದೇಶಕ ಚಿದಂಬರಂ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇನ್ನೂ ಬಂದಿಲ್ಲ.

ಚಿದಂಬರಂ ಅವರು ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕರಾಗಿದ್ದು, 2021ರಲ್ಲಿ ಬಸಿಲ್ ಜೋಸೆಫ್ ಪ್ರಧಾನ ಪಾತ್ರದಲ್ಲಿದ್ದ 'ಜಾನ್.ಇ.ಮನ್' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಅವರ ಎರಡನೇ ಚಿತ್ರವಾದ 'ಮಂಜುಮ್ಮೆಲ್ ಬಾಯ್ಸ್' 2024ರಲ್ಲಿ ಬಿಡುಗಡೆಯಾಗಿ ವಿಮರ್ಶಕರಿಂದ ಮತ್ತು ಚಿತ್ರರಂಗದ ಗಣ್ಯರಿಂದ ಅಭೂತಪೂರ್ವ ಪ್ರಶಂಸೆ ಪಡೆಯಿತು. ಈ ಚಿತ್ರದ ಅದ್ಭುತ ನಿರ್ದೇಶನಕ್ಕಾಗಿ ಇವರಿಗೆ 2024ರ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಚಲನಚಿತ್ರ ನಿರ್ದೇಶಕ ಪ್ರಶಸ್ತಿ ಒಲಿಯಿತು. ಸದ್ಯ ಇವರು ಜಿತು ಮಾಧವನ್ ಅವರ ಕಥೆ ಇರುವ 'ಬಾಲನ್' ಎಂಬ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ನಟ ದೀಲೀಪ್ ಅವರ ಜೊತೆ ಇವರು ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು, ಆದರೆ ಚಿದಂಬರಂ ಅವರು ಈ ಸುದ್ದಿಯಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read More
Next Story