
ಭಾರತಿನಗರ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ, ಕೆಆರ್ ಪುರಂನ ಬಿಜೆಪಿ ಶಾಸಕ ಬೈರತಿ ಬಸವರಾಜ್ ಹೆಸರು ಕೇಳಿ ಬಂದಿದೆ.
ಬಿಕ್ಲು ಶಿವ ಕೊಲೆ ಪ್ರಕರಣ : ಬೈರತಿ ಬಸವರಾಜಗೆ ಜೈಲೋ? ಸಿಐಡಿ ವಶನೋ? ಶನಿವಾರ ತೀರ್ಪು
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಸಿಐಡಿ ವಶದಲ್ಲಿರುವ ಶಾಸಕ ಬೈರತಿ ಬಸವರಾಜ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚಿಸಿದೆ.
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸಿಐಡಿ ವಶದಲ್ಲಿರುವ ಶಾಸಕ ಬೈರತಿ ಬಸವರಾಜ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಕೂಡಲೇ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ. ಇದೇ ವೇಳೆ, ಶಾಸಕರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ನೀಡಬೇಕೇ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕೇ ಎಂಬ ತೀರ್ಪನ್ನು ನ್ಯಾಯಾಲಯವು ಶನಿವಾರಕ್ಕೆ ಕಾಯ್ದಿರಿಸಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಹೃದಯ ಸಂಬಂಧಿ ಸಮಸ್ಯೆ ಬಗ್ಗೆ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಸಿಐಡಿಗೆ ಸೂಚಿಸಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದ ವೇಳೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ತಪಾಸಣೆ ಮತ್ತು ಚಿಕಿತ್ಸೆಯ ಅಗತ್ಯವಿದ್ದುದರಿಂದ ನ್ಯಾಯಾಲಯವು ಈ ನಿರ್ದೇಶನ ನೀಡಿದೆ. ಬೈರತಿ ಬಸವರಾಜ ಅವರನ್ನು ಕೂಡಲೇ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆದೊಯ್ದು, ಹಿರಿಯ ತಜ್ಞ ವೈದ್ಯರ ಸಮ್ಮುಖದಲ್ಲಿ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಬೇಕು. ಶಾಸಕರು ಸದ್ಯ ಸಿಐಡಿ ಕಸ್ಟಡಿಯಲ್ಲಿರುವುದರಿಂದ, ಆಸ್ಪತ್ರೆಯಲ್ಲಿ ತಪಾಸಣೆ ನಡೆಯುವ ಸಂದರ್ಭದಲ್ಲೂ ಅವರು ಸಿಐಡಿ ಪೊಲೀಸರ ಸುಪರ್ದಿಯಲ್ಲೇ ಇರಬೇಕು. ಬೌರಿಂಗ್ ಆಸ್ಪತ್ರೆಯ ಪ್ರಾಥಮಿಕ ವರದಿ ಮತ್ತು ಜಯದೇವ ಆಸ್ಪತ್ರೆಯ ಸಮಗ್ರ ವೈದ್ಯಕೀಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಶನಿವಾರ ಆರೋಪಿಯನ್ನು ವೈದ್ಯಕೀಯ ವರದಿಗಳ ಸಮೇತ ಹಾಜರುಪಡಿಸಬೇಕು ಎಂದು ನಿರ್ದೇಶನ ನೀಡಿದೆ.
ಬೈರತಿ ಬಸವರಾಜ ಭವಿಷ್ಯ ಈಗ ವೈದ್ಯಕೀಯ ವರದಿಯ ಮೇಲೆ ನಿಂತಿದೆ. ಒಂದು ವೇಳೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರೆ ಅವರಿಗೆ ನ್ಯಾಯಾಂಗ ಬಂಧನದ ಅಡಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲು ಅವಕಾಶ ನೀಡಲಾಗುತ್ತದೆಯೇ? ಅಥವಾ ಸಿಐಡಿ ಮತ್ತಷ್ಟು ದಿನಗಳ ಕಾಲ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಿದೆಯೇ? ಎಂಬುದು ಶನಿವಾರ ಗೊತ್ತಾಗಲಿದೆ. ಹಲವು ವರ್ಷಗಳ ಹಿಂದೆ ನಡೆದಿದ್ದ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದ ಮರುತನಿಖೆ ನಡೆಸುತ್ತಿರುವ ಸಿಐಡಿ, ಈ ಪ್ರಕರಣದಲ್ಲಿ ಭೈರತಿ ಬಸವರಾಜ್ ಅವರ ಪಾತ್ರವಿರುವ ಶಂಕೆಯ ಮೇಲೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

