
ಶಾಸಕ ಭೈರತಿ ಬಸವರಾಜು
ಬೈರತಿ ಬಸವರಾಜ್ ನಿರೀಕ್ಷಣಾ ಜಾಮೀನು: ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಾ ಸಿಐಡಿ?
ಬಿಕ್ಲು ಶಿವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನು ನ್ಯಾಯಯುತವಾಗಿಲ್ಲ ಎಂದು ಸಿಐಡಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರೌಡಿ ಶೀಟರ್ ಬಿಕ್ಲು ಶಿವು ಕೊಲೆ ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿದ್ದು, ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರ ಪೀಠದ ಮುಂದೆ ತನಿಖಾ ಸಂಸ್ಥೆ ಸಿಐಡಿ ಪರ ವಕೀಲರು ಶಾಸಕರಿಗೆ ನೀಡಿರುವ ಮಧ್ಯಂತರ ಜಾಮೀನು ನ್ಯಾಯಯುತವಾಗಿಲ್ಲ ಎಂದು ಆಕ್ಷೇಪ ವ್ಯಕ್ತಿಪಡಿಸಿದ್ದಾರೆ.
ಬುಧವಾರ(ಜ.28) ಹೈಕೋರ್ಟ್‌ನಲ್ಲಿ ವಿಚಾರಣೆ ವೇಳೆ ಸಿಐಡಿ ಪರ ವಾದ ಮಂಡಿಸಿದ ಸರ್ಕಾರಿ ಅಭಿಯೋಜಕರು, ಶಾಸಕ ಬೈರತಿ ಬಸವರಾಜ್ ಅವರಿಗೆ ಜಾಮೀನು ನೀಡಬಾರದು ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ. ಈ ಹಿಂದೆ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ. ಈಗ ಹೊಸದಾಗಿ ಅರ್ಜಿ ಸಲ್ಲಿಸಲು ಯಾವುದೇ ಪರಿಸ್ಥಿತಿ ಬದಲಾಗಿಲ್ಲ. ಅರ್ಜಿದಾರರು ಪ್ರಭಾವಿ ವ್ಯಕ್ತಿಯಾಗಿದ್ದು, ಜಾಮೀನು ನೀಡಿದರೆ ಸಾಕ್ಷಿಗಳ ಮೇಲೆ ಒತ್ತಡ ಹೇರುವ ಮತ್ತು ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಸಿಐಡಿ ಪರ ವಕೀಲರು ವಾದಿಸಿದರು.
ಸುಪ್ರೀಂ ಕೋರ್ಟ್‌ಗೆ ಹೋಗಿ ಎಂದು ಬೈರತಿ ವಕೀಲ
ಪ್ರತಿಯಾಗಿ ವಾದ ಮಾಡಿದ ಶಾಸಕರ ಪರ ವಕೀಲರು,"ಪೊಲೀಸರ ಬಳಿ ಯಾವುದೇ ಸಾಕ್ಷ್ಯವಿಲ್ಲ. ಪ್ರಕರಣದ ಮೊದಲ ಆರೋಪಿ ಜಗದೀಶ್ ಮತ್ತು ಬಸವರಾಜ್ ನಡುವೆ ಸಂಭಾಷಣೆ ನಡೆದಿದೆ ಎನ್ನಲು ಯಾವುದೇ ಸಿಡಿಆರ್ ದಾಖಲೆಗಳಿಲ್ಲ. ಯಾವುದೇ ನೇರ ಅಥವಾ ಸಾಂದರ್ಭಿಕ ಸಾಕ್ಷ್ಯಗಳು ಸಿಐಡಿ ಬಳಿ ಇಲ್ಲ. ಸಿಐಡಿ ತನಿಖೆ ಆರಂಭವಾದಾಗಿನಿಂದ ಈವರೆಗೆ ಶಾಸಕರಿಗೆ ವಿಚಾರಣೆಗೆ ಹಾಜರಾಗುವಂತೆ ಒಂದೇ ಒಂದು ನೋಟಿಸ್ ನೀಡಿಲ್ಲ. ಅಷ್ಟೇ ಅಲ್ಲದೆ, ಇತರ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿರುವ ಪೊಲೀಸರು, ಬಸವರಾಜ್ ವಿರುದ್ಧ ಮಾತ್ರ ಯಾವುದೇ ದೋಷಾರೋಪ ಪಟ್ಟಿ ಸಲ್ಲಿಸಿಲ್ಲʼʼ ಎಂದರು.
"ಮಧ್ಯಂತರ ಜಾಮೀನು ನೀಡಿರುವುದು ಅನ್ಯಾಯ ಎಂದು ತನಿಖಾಧಿಕಾರಿಗಳಿಗೆ ಅನಿಸಿದರೆ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿ. ಅಲ್ಲದೆ, ಪೊಲೀಸರು ಶಾಸಕರ ಜೊತೆ ಕೈಜೋಡಿಸಿದ್ದಾರೆ ಎಂಬ ಸರ್ಕಾರಿ ಅಭಿಯೋಜಕರ ಹೇಳಿಕೆಯು ಸ್ವತಃ ತಮ್ಮದೇ ಇಲಾಖೆಯ ವಿರುದ್ಧ ಮಾಡಿದ ಆರೋಪದಂತಿದೆ ಎಂದು ಟೀಕಿಸಿದರು.

