ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ವಿಶೇಷ ನ್ಯಾಯಾಲಯದಲ್ಲಿ ಕೃತ್ಯ ಒಪ್ಪಿಕೊಂಡ ಆರೋಪಿ
x

ಮಂಗಳೂರು ಬಾಂಬ್‌ ಸ್ಪೋಟದ ಆರೋಪಿ ಮೊಹಮ್ಮದ್ ಶಾರೀಕ್

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ವಿಶೇಷ ನ್ಯಾಯಾಲಯದಲ್ಲಿ ಕೃತ್ಯ ಒಪ್ಪಿಕೊಂಡ ಆರೋಪಿ

ಕಳೆದ 2024ರ ಏಪ್ರಿಲ್ 20ರಂದು ಎನ್‌ಐಎ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಪ್ರಶ್ನಿಸಿದಾಗ ಶಾರೀಕ್ ತಾನು ನಿರಪರಾಧಿ ಎಂದು ಹೇಳಿದ್ದನು. ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಆತ ಸಾರಾಸಗಟಾಗಿ ತಳ್ಳಿಹಾಕಿದ್ದನು.


Click the Play button to hear this message in audio format

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇದೀಗ ಅತ್ಯಂತ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ವಿಶೇಷ ನ್ಯಾಯಾಲಯದ ಮುಂದೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರೀಕ್ ತನ್ನ ಕೃತ್ಯವನ್ನು ತಪ್ಪೊಪ್ಪಿಕೊಂಡಿದ್ದಾನೆ. ಈ ಹಿಂದೆ ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸುತ್ತಿದ್ದ ಆರೋಪಿಯು ಇದೀಗ ದಿಢೀರ್ ಆಗಿ ತನ್ನ ನಿಲುವು ಬದಲಿಸಿದ್ದು, ಆತ ಸಲ್ಲಿಸಿದ್ದ ತಪ್ಪೊಪ್ಪಿಗೆ ಅರ್ಜಿಯನ್ನು ನ್ಯಾಯಾಲಯವು ಮಾರ್ಚ್ 26ರಂದು ಅಧಿಕೃತವಾಗಿ ಅಂಗೀಕರಿಸಿದೆ.

ನಿಲುವು ಬದಲಿಸಿದ ಆರೋಪಿ

ಕಳೆದ 2024ರ ಏಪ್ರಿಲ್ 20ರಂದು ಎನ್‌ಐಎ ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಪ್ರಶ್ನಿಸಿದಾಗ ಶಾರೀಕ್ ತಾನು ನಿರಪರಾಧಿ ಎಂದು ಹೇಳಿದ್ದನು. ತನ್ನ ಮೇಲಿನ ಎಲ್ಲಾ ಆರೋಪಗಳನ್ನು ಆತ ಸಾರಾಸಗಟಾಗಿ ತಳ್ಳಿಹಾಕಿದ್ದನು. ಆದರೆ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಮತ್ತು ಸಾಕ್ಷ್ಯಾಧಾರಗಳು ಬಲವಾಗುತ್ತಿದ್ದಂತೆ ಆತನ ನಿಲುವಿನಲ್ಲಿ ಬದಲಾವಣೆಯಾಗಿದೆ. 2025ರ ಡಿಸೆಂಬರ್ ತಿಂಗಳಿನಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 229ರ ಅಡಿಯಲ್ಲಿ ಆರೋಪಿಯು ತಪ್ಪೊಪ್ಪಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದನು. ಸುದೀರ್ಘ ವಿಚಾರಣೆಯ ಬಳಿಕ ಇದೀಗ ನ್ಯಾಯಾಲಯವು ಈ ಅರ್ಜಿಯನ್ನು ಪುರಸ್ಕರಿಸಿದೆ.

ಟೈಮರ್ ದೋಷದಿಂದ ಸಂಭವಿಸಿದ್ದ ಸ್ಫೋಟ

2022ರ ನವೆಂಬರ್ 19ರಂದು ಮಂಗಳೂರಿನಲ್ಲಿ ಈ ಭಯಾನಕ ಘಟನೆ ನಡೆದಿತ್ತು. ಶಾರೀಕ್ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಆತ ಸಾಗಿಸುತ್ತಿದ್ದ ಪ್ರೆಶರ್ ಕುಕ್ಕರ್ ಬಾಂಬ್ ಆತನ ಮಡಿಲಲ್ಲೇ ಸ್ಫೋಟಗೊಂಡಿತ್ತು. ಈ ಪ್ರಕರಣದಲ್ಲಿ ಕುಕ್ಕರ್ ಒಳಗೆ ಐಇಡಿ ಇಟ್ಟು ಅದಕ್ಕೆ ಟೈಮರ್ ಫಿಕ್ಸ್ ಮಾಡಲಾಗಿತ್ತು. ಆದರೆ ಬಾಂಬ್ ಸ್ಫೋಟಗೊಳ್ಳಲು 90 ನಿಮಿಷಗಳ ಸಮಯವನ್ನು ನಿಗದಿಪಡಿಸುವ ಬದಲು ಕೇವಲ 9 ನಿಮಿಷಕ್ಕೆ ತಪ್ಪಾಗಿ ಟೈಮರ್ ಸೆಟ್ ಮಾಡಿದ್ದರಿಂದ ಆಟೋದಲ್ಲಿ ತೆರಳುವ ಮಾರ್ಗ ಮಧ್ಯೆಯೇ ಬಾಂಬ್ ಸಿಡಿದಿತ್ತು. ಈ ಅವಘಡದಲ್ಲಿ ಶಾರೀಕ್ ಸೇರಿದಂತೆ ಆಟೋ ಚಾಲಕನಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಸ್ಫೋಟದ ತಕ್ಷಣವೇ ಕಾರ್ಯಪ್ರವೃತ್ತರಾದ ಎನ್‌ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದರು. ಇದೇ ಪ್ರಕರಣದಲ್ಲಿ ಬಾಂಬ್ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳು ಹಾಗೂ ಉಪಕರಣಗಳನ್ನು ಪೂರೈಸಿದ ಆರೋಪದ ಅಡಿಯಲ್ಲಿ ಎರಡನೇ ಆರೋಪಿ ಸೈಯದ್ ಯಾಸೀನ್ ಎಂಬಾತನನ್ನು ಕೂಡ ಬಂಧಿಸಲಾಗಿತ್ತು.

ಉಗ್ರ ಸಂಘಟನೆಗಳ ನಂಟು ಮತ್ತು ಹಿನ್ನೆಲೆ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನಾದ ಮೊಹಮ್ಮದ್ ಶಾರೀಕ್, ನಿಷೇಧಿತ ಉಗ್ರ ಸಂಘಟನೆಗಳಾದ ಐಸಿಸ್ ಹಾಗೂ ಸಿಮಿ ಸಿದ್ಧಾಂತಗಳಿಂದ ತೀವ್ರವಾಗಿ ಪ್ರೇರಿತನಾಗಿದ್ದನು. ಈತ ಶಿವಮೊಗ್ಗದ ಐಸಿಸ್ ಮಾಡ್ಯುಲ್‌ನ ಸಕ್ರಿಯ ಸದಸ್ಯನಾಗಿದ್ದನು ಎಂಬ ಅಂಶ ತನಿಖೆಯಿಂದ ಬಹಿರಂಗವಾಗಿತ್ತು. ಕೇವಲ ಕುಕ್ಕರ್ ಬಾಂಬ್ ಮಾತ್ರವಲ್ಲದೆ, 2020ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ವಿವಾದಾತ್ಮಕ ಗೋಡೆ ಬರಹ ಪ್ರಕರಣ ಹಾಗೂ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ನಡೆಸಿದ್ದ ಪ್ರಾಯೋಗಿಕ ಬಾಂಬ್ ಸ್ಫೋಟ ಪ್ರಕರಣಗಳಲ್ಲೂ ಈತ ಪ್ರಮುಖ ಆರೋಪಿಯಾಗಿದ್ದಾನೆ. ಆದರೆ ಪ್ರಸ್ತುತ ಎನ್‌ಐಎ ನ್ಯಾಯಾಲಯದ ಮುಂದೆ ಕೇವಲ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮಾತ್ರ ತಾನು ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.

Read More
Next Story