ಉಡುಪಿ ಮೀನುಗಾರರ ಸಾಲ ಮನ್ನಾ ಹಗರಣ: ಇಡಿ ತನಿಖೆಯಲ್ಲಿ 1.66 ಕೋಟಿ ರೂ. ಅಕ್ರಮ ಬಯಲು
x

ಉಡುಪಿ ಮೀನುಗಾರರ ಸಾಲ ಮನ್ನಾ ಹಗರಣ: ಇಡಿ ತನಿಖೆಯಲ್ಲಿ 1.66 ಕೋಟಿ ರೂ. ಅಕ್ರಮ ಬಯಲು

ಉಡುಪಿ ಜಿಲ್ಲೆಯ ಬೈಂದೂರು ಭಾಗದಲ್ಲಿ ಮೀನುಗಾರರ ಸ್ವಸಹಾಯ ಸಂಘಗಳ ಹೆಸರಿನಲ್ಲಿ ನಡೆದಿದೆ ಎನ್ನಲಾದ ಬೃಹತ್ ಸಾಲ ಮನ್ನಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದೆ.


Click the Play button to hear this message in audio format

ಉಡುಪಿ ಜಿಲ್ಲೆಯ ಬೈಂದೂರು ಭಾಗದಲ್ಲಿ ಮೀನುಗಾರರ ಸ್ವಸಹಾಯ ಸಂಘಗಳ ಹೆಸರಿನಲ್ಲಿ ನಡೆದಿದೆ ಎನ್ನಲಾದ ಬೃಹತ್ ಸಾಲ ಮನ್ನಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಹತ್ವದ ಕ್ರಮ ಕೈಗೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಇಡಿ ಮಂಗಳೂರು ಉಪ ವಲಯ ಕಚೇರಿಯು ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದೆ.

ಹಗರಣದಲ್ಲಿ ಸುಮಾರು 1.66 ಕೋಟಿ ರೂ.ನಷ್ಟು ಅಕ್ರಮ ಹಣ ವರ್ಗಾವಣೆಯಾಗಿರುವುದು ಇಡಿ ತನಿಖೆಯಿಂದ ಬೆಳಕಿಗೆ ಬಂದಿದೆ. ಹಗರಣದ ಮೂಲವು ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಮೂಕಾಂಬಿಕಾ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳಾದ ಬೇಬಿ ಕೋಟಾರಿ, ಹರೀಶ್ ಖಾರ್ವಿ, ರಾಮದಾಸ ಖಾರ್ವಿ ಮತ್ತು ಅಂದಿನ ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣ ದೇವಡಿಗ ಎಂಬುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ರಾಜ್ಯ ಸರ್ಕಾರದ ಮೀನುಗಾರರ ಸಾಲ ಮನ್ನಾ ಯೋಜನೆಯನ್ನು ದುರುಪಯೋಗಪಡಿಸಿಕೊಂಡು, ಅನರ್ಹ ಸಂಘಗಳ ಹೆಸರಿನಲ್ಲಿ ಹಣ ಲೂಟಿ ಮಾಡಿದ ಆರೋಪ ಇವರ ಮೇಲಿದೆ. ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆಯ ಮೇಲೆ ಇಡಿ ತನಿಖೆಯನ್ನು ಕೈಗೆತ್ತಿಕೊಂಡಿತ್ತು.

ಟ್ರಸ್ಟ್ - ಬ್ಯಾಂಕ್ ವ್ಯವಸ್ಥಾಪಕ ನಡುವೆ ‘ಅಪವಿತ್ರ ಮೈತ್ರಿ’

ಪ್ರಮುಖ ಆರೋಪಿಗಳಾದ ಬೇಬಿ, ಹರೀಶ್ ಮತ್ತು ಪಿ. ರಾಮದಾಸ್ ‘ಮೂಕಾಂಬಿಕಾ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್’ ಮೂಲಕ 2017-18ನೇ ಹಣಕಾಸು ವರ್ಷದಲ್ಲಿ ವಿವಿಧ ಸ್ವಸಹಾಯ ಸಂಘಗಳಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಕೊಡಿಸುವ ವ್ಯವಸ್ಥೆ ಮಾಡಿದ್ದರು. ಇಲ್ಲಿ ಟ್ರಸ್ಟ್‌ನ ಕೆಲಸ ಕೇವಲ ಸಾಲ ಕೊಡಿಸುವುದು ಮಾತ್ರವಾಗಿರಲಿಲ್ಲ. ಸಂಘಗಳಿಂದ ಸಾಲದ ಕಂತುಗಳನ್ನು ವಸೂಲಿ ಮಾಡಿ ಬ್ಯಾಂಕ್‌ಗೆ ಪಾವತಿಸುವ ಜವಾಬ್ದಾರಿಯನ್ನೂ ಇವರೇ ವಹಿಸಿಕೊಂಡಿದ್ದರು. ಇಲ್ಲಿಯೇ ವಂಚನೆ ಆರಂಭವಾಗಿತ್ತು. ಸಂಘದ ಸದಸ್ಯರು ಪ್ರಾಮಾಣಿಕವಾಗಿ ಕಟ್ಟಿದ ಹಣವನ್ನು ಆರೋಪಿಗಳು ಸಂಪೂರ್ಣವಾಗಿ ಬ್ಯಾಂಕ್‌ಗೆ ಜಮೆ ಮಾಡದೆ, ಒಂದು ದೊಡ್ಡ ಭಾಗವನ್ನು ತಮ್ಮ ಸ್ವಂತ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದರು. ಈ ಮೂಲಕ ಸದಸ್ಯರಿಗೆ ಮತ್ತು ಬ್ಯಾಂಕ್‌ಗೆ ಮೊದಲ ಹಂತದ ವಂಚನೆ ಮಾಡಿದ್ದರು ಎಂದು ಇಡಿ ಹೇಳಿದೆ.





ಸಾಲ ಮನ್ನಾ ಯೋಜನೆಯ ದುರುಪಯೋಗ

ವಂಚನೆಯನ್ನು ಮುಚ್ಚಿ ಹಾಕಲು ಮತ್ತು ಸದಸ್ಯರಿಂದ ಲೂಟಿ ಮಾಡಿದ ಹಣವನ್ನು ಸರಿಹೊಂದಿಸಲು ಆರೋಪಿಗಳು ಮಾಸ್ಟರ್ ಪ್ಲಾನ್ ರೂಪಿಸಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ರಾಮಕೃಷ್ಣ ಪಿ ಅವರೊಂದಿಗೆ ಶಾಮೀಲಾದ ಆರೋಪಿಗಳು, ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ‘ಮೀನುಗಾರರ ಸ್ವಸಹಾಯ ಸಂಘಗಳ ಸಾಲ ಮನ್ನಾ ಯೋಜನೆ’ಯನ್ನು ಗುರಿಯಾಗಿಸಿಕೊಂಡರು. ಯಾವುದೇ ಸರಿಯಾದ ದಾಖಲೆಗಳಿಲ್ಲದಿದ್ದರೂ, ಮೀನುಗಾರಿಕೆಯೇ ಮಾಡದ ಅಥವಾ ಮೀನುಗಾರರ ಸಂಘಗಳಲ್ಲದ 58 ಅನರ್ಹ ಸ್ವಸಹಾಯ ಸಂಘಗಳನ್ನು‘ಮೀನುಗಾರರ ಸಂಘಗಳು’ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸಿದರು. ಬ್ಯಾಂಕ್ ವ್ಯವಸ್ಥಾಪಕ ಸಹಕಾರದೊಂದಿಗೆ ಈ 58 ಸಂಘಗಳ ಸಾಲ ಮನ್ನಾ ಮೊತ್ತವಾಗಿ ಒಟ್ಟು 1.66 ಕೋಟಿ ರೂ. ಪಡೆಯುವಲ್ಲಿ ಯಶಸ್ವಿಯಾದರು. ಈ ಮೊತ್ತವನ್ನು ಬಳಸಿಕೊಂಡು ಈ ಹಿಂದೆ ಸಂಘಗಳಿಂದ ವಸೂಲಿ ಮಾಡಿದ್ದ ಹಣವನ್ನು ಸರಿಹೊಂದಿಸಿ, ಉಳಿದ ಹಣವನ್ನು ವೈಯಕ್ತಿಕ ಉದ್ದೇಶಗಳಿಗಾಗಿ ಲೂಟಿ ಮಾಡಿದ್ದರು ಎಂದು ಇಡಿ ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಿದೆ.

ಅಕ್ರಮ ಹಣ ವರ್ಗಾವಣೆ ಆರೋಪ

ಜಾರಿ ನಿರ್ದೇಶನಾಲಯದ ಪ್ರಕಾರ, ಈ 1.66 ಕೋಟಿ ರೂಪಾಯಿಗಳು ‘ಅಪರಾಧದ ಮೂಲಕ ಗಳಿಸಿದ ಆದಾಯ’ ಎಂದು ಪರಿಗಣಿಸಲಾಗಿದೆ. ಅಕ್ರಮ ಹಣವನ್ನು ಸಕ್ರಮಗೊಳಿಸಲು ಅಥವಾ ಅದನ್ನು ಬೇರೆ ಉದ್ದೇಶಗಳಿಗೆ ವರ್ಗಾವಣೆ ಮಾಡುವುದು ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಈ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ಸಾಧ್ಯತೆಯಿದೆ. ಹಗರಣವು ಕೇವಲ ಹಣಕಾಸಿನ ವಂಚನೆಯಲ್ಲ, ಇದು ಗ್ರಾಮೀಣ ಭಾಗದ ಬಡ ಮೀನುಗಾರರ ಮತ್ತು ಮಹಿಳಾ ಸ್ವಸಹಾಯ ಸಂಘಗಳ ನಂಬಿಕೆಗೆ ಮಾಡಿದ ದ್ರೋಹವಾಗಿದೆ. ಸರ್ಕಾರದ ಜನಪರ ಯೋಜನೆಗಳನ್ನು ಬಳಸಿಕೊಂಡು ಪ್ರಭಾವಿಗಳು ಮತ್ತು ಬ್ಯಾಂಕ್ ಅಧಿಕಾರಿಗಳು ಹೇಗೆ ಲೂಟಿ ಮಾಡುತ್ತಾರೆ ಎಂಬುದಕ್ಕೆ ಈ ಪ್ರಕರಣ ಒಂದು ಜೀವಂತ ಉದಾಹರಣೆಯಾಗಿದೆ.

Read More
Next Story