
ರಾಜ್ಯಾದ್ಯಂತ ಲೋಕಾಯುಕ್ತ ಬೃಹತ್ ಬೇಟೆ: ವಿವಿಧ ಜಿಲ್ಲೆಗಳ 10ಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ಏಕಕಾಲಕ್ಕೆ ದಾಳಿ
Lokayukta Raid| ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ಬೆಳ್ಳಂಬೆಳಗ್ಗೆ ಸರಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.
ಕರ್ನಾಟಕದಾದ್ಯಂತ ಭ್ರಷ್ಟ ಅಧಿಕಾರಿಗಳ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು, ಗುರುವಾರ ಬೆಳ್ಳಂಬೆಳಗ್ಗೆ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಬೃಹತ್ ರೇಡ್ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಫೀಲ್ಡ್‌ಗಿಳಿದಿರುವ ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 10ಕ್ಕೂ ಹೆಚ್ಚು ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ತನಿಖೆ ತೀವ್ರಗೊಂಡಿದ್ದು, ಬೆಂಗಳೂರು ಸಿಟಿ-1 ಯುನಿಟ್ ವ್ಯಾಪ್ತಿಯಲ್ಲಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ (KRIDL) ಮುಖ್ಯ ಇಂಜಿನಿಯರ್ ವಸಂತ್ ವಿ. ನಾಯಕ್ ಅವರ ಮನೆ ಮತ್ತು ಕಚೇರಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರೊಂದಿಗೆ, ಬೆಂಗಳೂರು ಸಿಟಿ-2 ಯುನಿಟ್ ವ್ಯಾಪ್ತಿಯಲ್ಲಿ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿಯ ರೈತ ಸೇವಾ ಸಹಕಾರ ಸಂಘದ ಸಿಇಒ ಆರ್. ಶಶಿಧರ್ ಹಾಗೂ ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹೆಚ್. ಸಿ. ಇಂದ್ರೇಶ್ ಅವರ ಆಸ್ತಿಪಾಸ್ತಿಗಳ ಮೇಲೆ ಕೂಡ ದಾಳಿ ನಡೆಸಲಾಗಿದೆ.
ವಿವಿಧ ಜಿಲ್ಲೆಗಳಲ್ಲಿ ರೇಡ್
ರಾಜ್ಯದ ಇತರ ಜಿಲ್ಲೆಗಳಲ್ಲೂ ಲೋಕಾಯುಕ್ತ ಅಧಿಕಾರಿಗಳು ಭೇಟೆ ಮುಂದುವರಿಸಿದ್ದು, ಯಾದಗಿರಿಯ ವಿದ್ಯುತ್ ಇಲಾಖೆಯ ಉಪ ವಿದ್ಯುತ್ ಪರಿಶೀಲಕರಾದ ವೀರೇಶ್ ಹಿರೇಮಠ ಹಾಗೂ ಮಂಡ್ಯ ಲೋಕೋಪಯೋಗಿ ಇಲಾಖೆಯ ಮಂಡ್ಯ ಉಪವಿಭಾಗದ ಎಇಎಸ್ ಸತೀಶ್ ಅವರ ನಿವಾಸಗಳಲ್ಲಿ ತೀವ್ರ ಪರಿಶೀಲನೆ ನಡೆಯುತ್ತಿದೆ. ಧಾರವಾಡದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಕೆ. ಸುರಕೋಡ ಅವರ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ಮಾಡಲಾಗಿದ್ದು, ಹಾಸನ ಮಹಾನಗರ ಪಾಲಿಕೆಯ ಎಇಇ ಎಂ. ಸಿ. ಸತ್ಯನಾರಾಯಣ ಅವರ ಆಸ್ತಿ ವಿವರಗಳ ಮೇಲೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಮೈಸೂರಿನ ಜಲ ಭವನದಲ್ಲಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ಆಸಿಫ್ ಇಕ್ಬಾಲ್ ಹಾಗೂ ವಿಜಯಪುರದ ಕೃಷ್ಣಾ ಭಾಗ್ಯ ಜಲ ನಿಗಮದ ಕಿರಿಯ ಅಭಿಯಂತರ ಪ್ರಕಾಶ್ ಪಿ. ಜಿ. ಅವರು ಕೂಡ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಳಗ್ಗೆಯಿಂದಲೇ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳ ಮನೆಯಲ್ಲಿನ ಚಿನ್ನಾಭರಣ, ಬೆಲೆಬಾಳುವ ಪೀಠೋಪಕರಣಗಳು, ಬ್ಯಾಂಕ್ ಖಾತೆಗಳು ಹಾಗೂ ರಿಯಲ್ ಎಸ್ಟೇಟ್ ಹೂಡಿಕೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ತನಿಖೆಯ ಅಂತ್ಯಕ್ಕೆ ಲಭ್ಯವಾದ ಒಟ್ಟು ಅಕ್ರಮ ಆಸ್ತಿಯ ಮೌಲ್ಯ ತಿಳಿದುಬರಲಿದೆ.

