
ಕಿದ್ವಾಯಿ ಆಸ್ಪತ್ರೆ ಅವ್ಯವಸ್ಥೆ; ಏ.24ರೊಳಗೆ ವರದಿ ನೀಡಲು ಲೋಕಾಯುಕ್ತರ ಆದೇಶ
ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ವೈಫಲ್ಯಗಳು, ಹಣಕಾಸಿನ ಅವ್ಯವಹಾರಗಳು ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಗಂಭೀರವಾಗಿ ಪರಿಗಣಿಸಿದ್ದಾರೆ.
ರಾಜ್ಯದ ಪ್ರತಿಷ್ಠಿತ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆಯಾದ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಸಂಸ್ಥೆಯಲ್ಲಿ ನಡೆಯುತ್ತಿರುವ ಆಡಳಿತಾತ್ಮಕ ವೈಫಲ್ಯ, ಹಣಕಾಸಿನ ಅವ್ಯವಹಾರ ಮತ್ತು ಮೂಲಸೌಕರ್ಯ ಕೊರತೆಯನ್ನು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ. ಆಸ್ಪತ್ರೆ ಅವ್ಯವಸ್ಥೆ ಸುಧಾರಿಸಲು ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಲೋಕಾಯುಕ್ತ ಕಚೇರಿಯಲ್ಲಿ ಸೋಮವಾರ ನಡೆದ ವಿಚಾರಣೆಯಲ್ಲಿ ಆಸ್ಪತ್ರೆ ನಿರ್ದೇಶಕ ಡಾ. ನವೀನ್, ಆರ್ಥಿಕ ಸಲಹೆಗಾರರಾದ ಹರೀಶ್ ಮತ್ತು ಆಡಳಿತಾಧಿಕಾರಿ ವೆಂಕಟೇಶಪ್ಪ ಅವರನ್ನು ಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅವರು, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅತ್ಯಂತ ಅಗತ್ಯವಾದ ಪ್ರೋಟೀನ್ ಮತ್ತು ಟ್ರಾಸ್ಟುಜುಮಾಬ್ ಔಷಧಗಳು ಲಭ್ಯವಿಲ್ಲದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ಔಷಧ ಪೂರೈಕೆಗೆ ಪತ್ರ ವ್ಯವಹಾರ ನಡೆಸಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆದರೆ, ಲೋಕಾಯುಕ್ತರು ಎರಡು ಔಷಧಗಳಲ್ಲದೆ, ರೋಗಿಗಳಿಗೆ ಬೇಕಾದ ಎಲ್ಲಾ ಅಗತ್ಯ ಔಷಧಗಳನ್ನು ಪೂರೈಸಲು ಕ್ರಮ ಕೈಗೊಳ್ಳಬೇಕು. ಅಡ್ಡಿಯಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆರೋಗ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದರು.
ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ್ ಭಾರತ್ ಯೋಜನೆಯಲ್ಲಿರುವ ಕೆಲವು ಕಠಿಣ ನಿಬಂಧನೆಗಳಿಂದಾಗಿ ರೋಗಿಗಳು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಈ ನಿಬಂಧನೆಗಳನ್ನು ಸಡಿಲಗೊಳಿಸಿ ರೋಗಿಗಳಿಗೆ ಸುಲಭವಾಗಿ ಚಿಕಿತ್ಸೆ ಸಿಗುವಂತೆ ಮಾಡಬೇಕು. ಕಿದ್ವಾಯಿ ಆಸ್ಪತ್ರೆ ಮತ್ತು ಇಲಾಖೆ ನಡುವೆ ಸಮನ್ವಯ ಸಾಧಿಸಬೇಕು ಎಂದು ಸಲಹೆ ನೀಡಿದ್ದಾರೆ.
ವಿಚಾರಣೆ ವೇಳೆ ಬೆಳಕಿಗೆ ಬಂದ ಅತ್ಯಂತ ಆಘಾತಕಾರಿ ವಿಷಯವೆಂದರೆ ವೈದ್ಯರ ಕೊರತೆ. ಮೆಡಿಕಲ್ ಆಂಕಾಲಜಿ ವಿಭಾಗದಲ್ಲಿ ತಜ್ಞ ವೈದ್ಯರ ಹುದ್ದೆ ಖಾಲಿ ಇದೆ. ಸರ್ಕಾರವು ಸೂಪರ್ ಸ್ಪೆಷಾಲಿಟಿ ವೈದ್ಯರಿಗೆ ಕೇವಲ 1.20 ಲಕ್ಷ ರೂ. ಗೌರವಧನ ನಿಗದಿಪಡಿಸಿದೆ. ಇಷ್ಟು ಕಡಿಮೆ ವೇತನಕ್ಕೆ ಕೆಲಸ ಮಾಡಲು ಯಾವುದೇ ತಜ್ಞ ವೈದ್ಯರು ಮುಂದೆ ಬರುತ್ತಿಲ್ಲ. ಬದಲಾಗಿ, ಈಗಿರುವ ವೈದ್ಯರು ರಾಜೀನಾಮೆ ನೀಡುತ್ತಿದ್ದಾರೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಲೋಕಾಯುಕ್ತರು, ವೈದ್ಯರನ್ನು ಆಕರ್ಷಿಸಲು ಸರ್ಕಾರವು ವಿಶೇಷ ಪ್ರೋತ್ಸಾಹಧನ ಮತ್ತು ಸೌಲಭ್ಯ ನೀಡಬೇಕು. ನಿವೃತ್ತ ಪ್ರೊಫೆಸರ್‌ಗಳನ್ನು ಮತ್ತೆ ಸೇವೆಯಲ್ಲಿ ತೊಡಗಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದರು.
ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಧರ್ಮಶಾಲೆ, ವಾರ್ಡ್‌ಗಳು ಮತ್ತು ಶೌಚಾಲಯಗಳು ಸ್ವಚ್ಛತೆಯಿಂದ ಕೂಡಿರಲಿಲ್ಲ. ರೋಗಿಗಳು ಮಲಗುವ ಸ್ಥಳಗಳಲ್ಲಿ ಸ್ವಚ್ಛತೆ ಇರಲಿಲ್ಲ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಯಿತು. ಕಿದ್ವಾಯಿ ಆಸ್ಪತ್ರೆಯ ನಿರ್ವಹಣೆಯಲ್ಲಿನ ವ್ಯಾಪಕ ಭ್ರಷ್ಟಾಚಾರ ಮತ್ತು ರೋಗಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಅನಾಮಧೇಯ ವ್ಯಕ್ತಿಯೊಬ್ಬರು ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಪ್ರಕರಣವನ್ನು ಸ್ವಯಂ ಪ್ರೇರಿತ ದೂರೆಂದು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದ್ದರು. ಆರಂಭದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್ ನೀಡಲಾಯಿತಾದರೂ, ಸರಿಯಾದ ಮಾಹಿತಿ ನೀಡದೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುವುದನ್ನು ಅರಿತ ಲೋಕಾಯುಕ್ತರು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಅಲ್ಲಿನ ಸ್ಥಿತಿಯನ್ನು ಕಂಡು ಉತ್ತರಿಸುವಂತೆ ನೊಟೀಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಯಿತು. ಔಷಧಗಳ ಪೂರೈಕೆಯಲ್ಲಿ ವಿಳಂಬವಾಗಬಾರದು. ವೈದ್ಯರ ನೇಮಕಾತಿಗೆ ಸಂಬಂಧಿಸಿದ ವೇತನ ಶ್ರೇಣಿಯನ್ನು ಮರುಪರಿಶೀಲಿಸಬೇಕು. ಇದರೊಂದಿಗೆ ಆಸ್ಪತ್ರೆಯಲ್ಲಿ ಕೈಗೊಂಡ ಸುಧಾರಣಾ ಕ್ರಮಗಳ ಬಗ್ಗೆ ವರದಿಯನ್ನು ಮುಂದಿನ ವಿಚಾರಣಾ ದಿನಾಂಕ ಏ.24ರೊಳಗೆ ಸಲ್ಲಿಸುವಂತೆ ಆದೇಶಿಸಿದರು.

