ಮ್ಯೂಲ್ ಅಕೌಂಟ್ ವಂಚನೆಯಲ್ಲಿ ಬ್ಯಾಂಕ್ ಅಧಿಕಾರಿಗಳೂ ಶಾಮೀಲು? ತನಿಖೆಗೆ ಮುಂದಾದ ಸೈಬರ್
x

ಮ್ಯೂಲ್ ಅಕೌಂಟ್ ವಂಚನೆಯಲ್ಲಿ ಬ್ಯಾಂಕ್ ಅಧಿಕಾರಿಗಳೂ ಶಾಮೀಲು? ತನಿಖೆಗೆ ಮುಂದಾದ ಸೈಬರ್

ಸೈಬರ್‌ ಕ್ರೈಂ ಇತ್ತೀಚಿಗಿನ ದಿನದಲ್ಲಿ ಸಂಘಟಿತ ವ್ಯವಹಾರವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಹೀಗಾಗಿ ಆರೋಪಿಗಳ ಸಿಂಡಿಕೇಟ್‌ಗಳನ್ನು, ನೆಟ್‌ವರ್ಕ್‌ಗಳನ್ನು ಗುರಿಯಾಗಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


Click the Play button to hear this message in audio format

ತಂತ್ರಜ್ಞಾನ ಬೆಳೆದಂತೆ ಸೈಬರ್‌ ಅಪರಾಧಗಳ ಸ್ವರೂಪವೂ ಬದಲಾಗುತ್ತಿದ್ದು, ರಾಜ್ಯದಲ್ಲಿ ಸೈಬರ್‌ ಅಪರಾಧಗಳ ಜಾಲವು ಕೇವಲ ಬಿಡಿಬಿಡಿಯಾಗಿ ಕೆಲಸ ಮಾಡದೆ, ಇತ್ತೀಚಿಗಿನ ದಿನದಲ್ಲಿ ಸಂಘಟಿತ ವ್ಯವಹಾರವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ. ಹೀಗಾಗಿ ಆರೋಪಿಗಳ ಸಿಂಡಿಕೇಟ್‌ಗಳನ್ನು, ನೆಟ್‌ವರ್ಕ್‌ಗಳನ್ನು ಗುರಿಯಾಗಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಸೈಬರ್ ಕಮಾಂಡ್ ಸೆಂಟರ್‌ನ ಡಿಜಿಪಿ ಪ್ರಣವ್ ಮೊಹಂತಿ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು, ಸೈಬರ್‌ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಶನಿವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಆರೋಪಿಗಳ ಬಂಧನದ ವೇಳೆ ಹಲವು ವಿಚಾರಗಳು ಗೊತ್ತಾಗಿದೆ. ಆರೋಪಿಗಳು ಮ್ಯೂಲ್ ಅಕೌಂಟ್ (ನಕಲಿ ಖಾತೆ) ತೆರೆಯಲು ಬ್ಯಾಂಕ್ ಅಧಿಕಾರಿಗಳ ಸಹಕಾರವಿದೆಯೇ ಎಂಬ ಸಂಶಯ ಇದೆ. ಇತ್ತೀಚೆಗೆ ಯಾವ ಬ್ಯಾಂಕ್‌ಗಳಲ್ಲಿ ಅತಿ ಹೆಚ್ಚು ಹೊಸ ಖಾತೆಗಳು ತೆರೆದಿವೆ. ಅವುಗಳ ಕೆವೈಸಿ ಪ್ರಕ್ರಿಯೆ ಸರಿಯಾಗಿದೆಯೇ? ಎಂಬ ಬಗ್ಗೆ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಬ್ಯಾಂಕ್‌ ಸಿಬ್ಬಂದಿ ಮೇಲೂ ಅನುಮಾನ ಇದ್ದು, ಈ ನಿಟ್ಟಿನಲ್ಲಿಯೂ ತನಿಖೆ ಕೈಗೊಳ್ಳಲಾಗುವುದು. ಒಂದು ವೇಳೆ ಸೈಬರ್ ಅಪರಾಧಗಳಿಗೆ ಬ್ಯಾಂಕ್ ಸಿಬ್ಬಂದಿ ಅಥವಾ ಅಧಿಕಾರಿಗಳು ಶಾಮೀಲಾಗಿರುವುದು ಸಾಬೀತಾದರೆ, ಅಂತಹವರನ್ನು ಯಾವುದೇ ದಾಕ್ಷಿಣ್ಯವಿಲ್ಲದೆ ಬಂಧಿಸಲಾಗುವುದು ಎಂದು ತಿಳಿಸಿದರು.

2021ರ ನಂತರದ ಅವಧಿಯಲ್ಲಿ ರಾಜ್ಯದಲ್ಲಿ ಸೈಬರ್ ಅಪರಾಧಗಳ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಆರಂಭದಲ್ಲಿ ಸಣ್ಣ ಮೊತ್ತದ ವಂಚನೆಯಾಗಿ ಆರಂಭವಾದ ಈ ಕೃತ್ಯಗಳು, ಈಗ ಟೆಲಿಗ್ರಾಮ್, ವಾಟ್ಸಾಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣ ಮೂಲಕ ವ್ಯವಸ್ಥಿತವಾಗಿ ನಡೆಯುತ್ತಿವೆ. ವಂಚಕರು ಇವುಗಳನ್ನು ಕೇವಲ ಅಪರಾಧವೆಂದು ನೋಡದೆ, ಒಂದು ಲಾಭದಾಯಕ ವ್ಯವಹಾರವೆಂಬಂತೆ ನಡೆಸುತ್ತಿದ್ದಾರೆ. ಸುಳ್ಳು ಹೂಡಿಕೆ ಯೋಜನೆಗಳು, ಟಾಸ್ಕ್ ಬೇಸ್ಡ್ ಕೆಲಸಗಳು ಮತ್ತು ಡಿಜಿಟಲ್ ಅರೆಸ್ಟ್‌ನಂತಹ ತಂತ್ರಗಳನ್ನು ಬಳಸಿ ಜನರನ್ನು ಬಲೆಗೆ ಬೀಳಿಸುತ್ತಿದ್ದಾರೆ. ಸೈಬರ್ ಅಪರಾಧಗಳನ್ನು ಸಂಘಟಿತವಾಗಿ ಎದುರಿಸಲು ಕೇಂದ್ರದ 'ಐ4ಸಿ' ಮಾದರಿಯಲ್ಲಿ ರಾಜ್ಯದಲ್ಲೂ 'ಕೆ4ಸಿ' ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಇದು ರಾಜ್ಯದ ಎಲ್ಲಾ ಸೈಬರ್ ಠಾಣೆಗಳ ನಡುವೆ ಸಮನ್ವಯ ಸಾಧಿಸಲಿದೆ. ದೊಡ್ಡ ಮೊತ್ತದ ವಂಚನೆ ನಡೆದಾಗ ಅಥವಾ ಸರ್ಕಾರಿ ವೆಬ್‌ಸೈಟ್‌ಗಳ ಮೇಲೆ ಸೈಬರ್ ದಾಳಿ ನಡೆದಾಗ ತಕ್ಷಣವೇ ಕಾರ್ಯಪ್ರವೃತ್ತರಾಗಲು ಇಲ್ಲಿ ನುರಿತ ತಜ್ಞರ ತಂಡವಿರಲಿದೆ ಎಂದು ಮಾಹಿತಿ ನೀಡಿದರು.

ವಿದೇಶಕ್ಕೆ ಹಣ ವರ್ಗಾವಣೆ?

ಪೊಲೀಸ್ ಇಲಾಖೆಯು ಈಗ ಕೇವಲ ವಂಚಕರನ್ನು ಬಂಧಿಸಿ ಕೈತೊಳೆದುಕೊಳ್ಳುತ್ತಿಲ್ಲ. ಬದಲಿಗೆ ಈ ವಂಚನೆಯ ಹಿಂದೆ ಇರುವ ದೊಡ್ಡ ನೆಟ್‌ವರ್ಕ್ ಮತ್ತು ಸಿಂಡಿಕೇಟ್‌ಗಳನ್ನು ಪತ್ತೆ ಹಚ್ಚುವ ಕೆಲಸವನ್ನು ಮಾಡಲಾಗುತ್ತಿದೆ. ಅಪರಾಧಿಗಳ ಜಾಲದ ಮೂಲವನ್ನು ಶೋಧ ನಡೆಸಲಾಗುತ್ತಿದೆ. ಬಂಧಿತ ಆರೋಪಿಗಳ ವಿಚಾರಣೆಯಿಂದ ಈ ಜಾಲವು ಎಷ್ಟು ವಿಸ್ತಾರವಾಗಿದೆ ಎಂಬುದು ಗೊತ್ತಾಗುತ್ತಿದೆ. ಕಾರ್ಯಾಚರಣೆಯು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ, ಅಂತಾರಾಷ್ಟ್ರೀಯ ಮಟ್ಟದ ನಂಟುಗಳು ಇರುವ ಬಗ್ಗೆ ಗೊತ್ತಾಗಿದೆ. ತನಿಖೆ ಕೈಗೊಂಡ ಹಲವು ಪ್ರಕರಣದಲ್ಲಿ ಫ್ರಾನ್ಸ್ ದೇಶಕ್ಕೆ ಹಣ ವರ್ಗಾವಣೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿದೇಶಿ ಬ್ಯಾಂಕ್ ಖಾತೆಗಳಿಗೆ ಅಥವಾ ವಿದೇಶಿ ವಿನಿಮಯದ ಮೂಲಕ ಹಣ ರವಾನೆಯಾಗುತ್ತಿರುವ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣ ಹೇಗೆ ವರ್ಗಾವಣೆಯಾಯಿತು ಮತ್ತು ಇದರ ಹಿಂದೆ ವಿದೇಶಿ ಹ್ಯಾಕರ್‌ಗಳ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

100 ಕೋಟಿ ರೂ.ಗಿಂತ ಹೆಚ್ಚು ವಂಚನೆ

ಶಿವಮೊಗ್ಗದಲ್ಲಿ ಇತ್ತೀಚೆಗೆ ಬಂಧಿತನಾದ ಶರತ್‌ಕುಮಾರ್ ಎಂಬ ಆರೋಪಿಯು ಸೈಬರ್ ವಂಚನೆ ಜಾಲದ ಒಂದು ಪ್ರಮುಖ ಕೊಂಡಿಯಾಗಿದ್ದು, ಕೇವಲ 19 ನಕಲಿ ಖಾತೆಗಳ ಮೂಲಕ ಸುಮಾರು 11 ಕೋಟಿ ರೂ.ಗಳಷ್ಟು ಹಣದ ವರ್ಗಾವಣೆ ಮಾಡಿರುವುದು ಸೈಬರ್ ಕಮಾಂಡ್ ಘಟಕದ ತನಿಖೆಯಲ್ಲಿ ಬಹಿರಂಗವಾಗಿದೆ. ಈ 19 ಖಾತೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನಲ್ಲಿ ಬರೋಬ್ಬರಿ 96 ಪ್ರಕರಣಗಳು ದಾಖಲಾಗಿರುವುದು ಜಾಲದ ವಿಸ್ತಾರವನ್ನು ತೋರಿಸುತ್ತದೆ. ಈವರೆಗೆ ಸಮಗ್ರ ಜಾಲದ ಮೂಲಕ ಸುಮಾರು 100 ಕೋಟಿ ರೂ.ಗಿಂತ ಹೆಚ್ಚು ಮೊತ್ತದ ವಂಚನೆ ನಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಸೈಬರ್ ವಂಚಕರು ಮುಗ್ದ ಜನರನ್ನು, ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಳ್ಳುತ್ತಾರೆ. ಸ್ವಲ್ಪ ಹಣದ ಆಮಿಷವೊಡ್ಡಿ ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಪಡೆದು ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ. ಈ ಖಾತೆಗಳ ಸಂಪೂರ್ಣ ನಿಯಂತ್ರಣವನ್ನು ವಂಚಕರು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ. ಸಾರ್ವಜನಿಕರಿಗೆ ವಂಚಿಸಿದ ಹಣವನ್ನು ಈ ಖಾತೆಗಳಿಗೆ ವರ್ಗಾಯಿಸಿ, ನಂತರ ಅದನ್ನು ಬೇರೆ ಬೇರೆ ಹಂತಗಳಲ್ಲಿ ಡ್ರಾ ಮಾಡಿಕೊಳ್ಳುತ್ತಾರೆ. ಇದನ್ನು ತಾಂತ್ರಿಕ ಭಾಷೆಯಲ್ಲಿ ‘ಮ್ಯೂಲ್ ಅಕೌಂಟ್ಸ್’ ಎನ್ನಲಾಗುತ್ತದೆ ಎಂದರು.

Read More
Next Story