ಕನ್ನಡ ನಟಿಯ ರಹಸ್ಯ ವಿಡಿಯೋ ಚಿತ್ರೀಕರಣ: ಹಣಕ್ಕಾಗಿ ಬ್ಲ್ಯಾಕ್‌ಮೇಲ್, FIR ದಾಖಲು
x

ವಿಡಿಯೋ ಕಳುಹಿಸಿದ ಬೆನ್ನಲ್ಲೇ ಹಣ ನೀಡುವಂತೆ ಬೇಡಿಕೆಯಿಟ್ಟಿರುವ ಆರೋಪಿ, ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. 

ಕನ್ನಡ ನಟಿಯ ರಹಸ್ಯ ವಿಡಿಯೋ ಚಿತ್ರೀಕರಣ: ಹಣಕ್ಕಾಗಿ ಬ್ಲ್ಯಾಕ್‌ಮೇಲ್, FIR ದಾಖಲು

ಬೆಂಗಳೂರಿನ ಕೋರಮಂಗಲ ಕ್ರೀಡಾಂಗಣದಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಿ ವೇಳೆ ಕನ್ನಡ ಕಿರುತೆರೆ ನಟಿಯೊಬ್ಬರ ಖಾಸಗಿ ವಿಡಿಯೋವನ್ನು ಶೌಚಾಲಯದಲ್ಲಿ ರಹಸ್ಯವಾಗಿ ಚಿತ್ರೀಕರಿಸಲಾಗಿದೆ.


Click the Play button to hear this message in audio format

ಸೆಲೆಬ್ರೆಟಿ ಕ್ರಿಕೆಟ್ ಪಂದ್ಯಾವಳಿಯ ವೇಳೆ ಖ್ಯಾತ ಕನ್ನಡ ಕಿರುತೆರೆ ನಟಿಯೊಬ್ಬರ ಖಾಸಗಿ ವಿಡಿಯೋವನ್ನು ಶೌಚಾಲಯದಲ್ಲಿ ರಹಸ್ಯವಾಗಿ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆಯಿಟ್ಟಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ನಟಿ ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಮೂರು ದಿನಗಳ ಮಹಿಳಾ ಸೆಲೆಬ್ರಿಟಿ ಕ್ರಿಕೆಟ್ ಟೂರ್ನಮೆಂಟ್ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ರಿಯಾಲಿಟಿ ಶೋ ಮೂಲಕವೂ ಜನಪ್ರಿಯತೆ ಗಳಿಸಿರುವ ನಟಿ, ಫೆಬ್ರವರಿ 7 ರಂದು ಪಂದ್ಯಾವಳಿಯ ಎರಡನೇ ದಿನದಂದು ಮಹಿಳಾ ಶೌಚಾಲಯಕ್ಕೆ ತೆರಳಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬರು ಗುಟ್ಟಾಗಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರೋಪಿಯು ನಟಿಯ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಆಕೆಯ ಗೆಳೆಯನಿಗೆ ಕಳುಹಿಸಿದ್ದು, ಅದು ನಟಿಯದ್ದೇ ಖಾತೆ ಎಂದು ತಪ್ಪಾಗಿ ಭಾವಿಸಿ ಸಂದೇಶ ರವಾನಿಸಿದ್ದ ಎನ್ನಲಾಗಿದೆ. ವಿಡಿಯೋ ಕಳುಹಿಸಿದ ಬೆನ್ನಲ್ಲೇ ಹಣ ನೀಡುವಂತೆ ಬೇಡಿಕೆಯಿಟ್ಟಿರುವ ಆರೋಪಿ, ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೆ, ನಟಿಯ ಗೆಳೆಯನಿಗೆ ನಿರಂತರವಾಗಿ ವಿಡಿಯೋ ಕರೆಗಳನ್ನು ಮಾಡುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡಿ ವಸೂಲಿಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಫೆಬ್ರವರಿ 13 ರಂದು ನಟಿ ಈ ಬಗ್ಗೆ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬ್ಲ್ಯಾಕ್ಮೇಲ್ಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳನ್ನು ಪೆನ್ ಡ್ರೈವ್ ಮೂಲಕ ಸಾಕ್ಷ್ಯವಾಗಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಸದ್ಯ ಪೊಲೀಸರು ಐಟಿ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 77, 351 (ಕ್ರಿಮಿನಲ್ ಬೆದರಿಕೆ) ಮತ್ತು 308 (ಸುಲಿಗೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

Read More
Next Story