
'ಧುರಂಧರ್' ಸಿನಿಮಾದಲ್ಲಿ ಅಡುಗೆಯವನ ಪಾತ್ರದ ಮೂಲಕ ಗಮನಸೆಳೆದಿದ್ದ ನಟ ನದೀಮ್ ಖಾನ್ ಅವರನ್ನು ಮುಂಬೈ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮಹಿಳೆಗೆ 10 ವರ್ಷ ಲೈಂಗಿಕ ಶೋಷಣೆ: 'ಧುರಂಧರ್' ನಟ ಪೊಲೀಸ್ ವಶಕ್ಕೆ
ಮದುವೆಯ ಸುಳ್ಳು ಭರವಸೆ ನೀಡಿ ದಶಕದ ಕಾಲ ಮನೆಗೆಲಸದ ಮಹಿಳೆಯನ್ನು ಲೈಂಗಿಕವಾಗಿ ಶೋಷಿಸಿದ ಆರೋಪದ ಮೇಲೆ 'ಧುರಂಧರ್' ಚಿತ್ರದ ನಟ ನದೀಮ್ ಖಾನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಬಾಲಿವುಡ್‌ನ ಇತ್ತೀಚಿನ ಬಹುನಿರೀಕ್ಷಿತ 'ಧುರಂಧರ್' ಸಿನಿಮಾದಲ್ಲಿ ಅಡುಗೆಯವನ ಪಾತ್ರದ ಮೂಲಕ ಗಮನಸೆಳೆದಿದ್ದ ನಟ ನದೀಮ್ ಖಾನ್ ಅವರನ್ನು ಮುಂಬೈ ಪೊಲೀಸರು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬಂಧಿಸಿದ್ದಾರೆ. ತನ್ನ ಮನೆಯಲ್ಲೇ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಕಳೆದ ಹತ್ತು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ನಟನ ಮೇಲಿದೆ.
ಏನಿದು ಪ್ರಕರಣ
ದೂರು ನೀಡಿದ 41 ವರ್ಷದ ಮಹಿಳೆ ಕಳೆದ ಹಲವು ವರ್ಷಗಳಿಂದ ವಿವಿಧ ಚಿತ್ರರಂಗದ ಗಣ್ಯರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. 2015 ರಲ್ಲಿ ನದೀಮ್ ಖಾನ್ ಅವರ ಪರಿಚಯವಾಗಿತ್ತು. ಈ ವೇಳೆ ನಟ ನದೀಮ್ ಖಾನ್ ಮಹಿಳೆಗೆ ಮದುವೆಯಾಗುವ ಸುಳ್ಳು ಭರವಸೆ ನೀಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆದರೆ ಮದುವೆಯಾಗಲು ನಟ ನಿರಾಕರಿಸಿದ ಕಾರಣ ಸಂತ್ರಸ್ತೆ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಮೊದಲ ಬಾರಿಗೆ ಈ ಘಟನೆ ನಡೆದಿದ್ದು ಮಾಲ್ವಾನಿ ಪೊಲೀಸ್ ವ್ಯಾಪ್ತಿಯಲ್ಲಿ ಆಗಿದ್ದರಿಂದ, ಪ್ರಕರಣವನ್ನು 'ಜೀರೋ ಎಫ್‌ಐಆರ್' ಮೂಲಕ ಮಾಲ್ವಾನಿ ಪೊಲೀಸರಿಗೆ ವರ್ಗಾಯಿಸಲಾಗಿದೆ. ಸದ್ಯ ನಟನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂತಹ ಸಮಯದಲ್ಲಿ ಸಿನಿಮಾದ ಪೋಷಕ ನಟನೊಬ್ಬ ಈ ಪ್ರಕರಣದಲ್ಲಿ ಸಿಲುಕಿಕೊಂಡಿರುವುದು ಚಿತ್ರತಂಡಕ್ಕೆ ಮುಜುಗರ ತಂದಿದೆ. ನದೀಮ್ ಖಾನ್ ಈ ಹಿಂದೆ 'ವಾಧ್' ಚಿತ್ರದಲ್ಲೂ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ರಣವೀರ್ ಸಿಂಗ್ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ ‘ಧುರಂಧರ್’ ಹೊಸ ಸಿನಿಮಾಗಳ ಪೈಪೋಟಿಯ ನಡುವೆಯೂ ಎಂಟನೇ ವಾರಾಂತ್ಯದಲ್ಲಿ 1 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ಈ ಸಿನಿಮಾದಲ್ಲಿ ಇದ್ದಾರೆ.
ಧುರಂಧರ್ ಓಟಿಟಿ ಬಿಡುಗಡೆ ಯಾವಾಗ ಮತ್ತು ಎಲ್ಲಿ?
ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿರುವ ಈ ಸ್ಪೈ ಥ್ರಿಲ್ಲರ್ ಚಿತ್ರದ ಓಟಿಟಿ ಹಕ್ಕುಗಳನ್ನು ಜನಪ್ರಿಯ ಡಿಜಿಟಲ್ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್ ಪಡೆದುಕೊಂಡಿದೆ. ಈ ಸಿನಿಮಾ ಜನವರಿ 30 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭವಾಗುವ ನಿರೀಕ್ಷೆಯಿದೆ.
ಗಳಿಕೆಯ ವಿಚಾರದಲ್ಲೂ ‘ಧುರಂಧರ್’ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಬಿಡುಗಡೆಯಾದ 52ನೇ ದಿನ ಅಂದರೆ ಎಂಟನೇ ಭಾನುವಾರದಂದು ಈ ಚಿತ್ರ ಭಾರತದಲ್ಲಿ 1.35 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದರೊಂದಿಗೆ ಚಿತ್ರದ ಒಟ್ಟು ದೇಶೀಯ ಗಳಿಕೆ ಈಗ 833.4 ಕೋಟಿ ರೂಪಾಯಿಗಳಿಗೆ ತಲುಪಿದೆ. ಇಷ್ಟು ವಾರಗಳ ನಂತರವೂ ಚಿತ್ರವು ಕೋಟಿ ಲೆಕ್ಕದಲ್ಲಿ ಗಳಿಕೆ ಮಾಡುತ್ತಿರುವುದು ಬಾಲಿವುಡ್ ಮಟ್ಟಿಗೆ ಅಪರೂಪದ ಸಾಧನೆಯಾಗಿದೆ.

