Crime News| ಅನಾರೋಗ್ಯ ಪೀಡಿತ ಮಗನ ಚೇತರಿಕೆಗಾಗಿ  ಮಗಳನ್ನೇ ನರಬಲಿ ಕೊಟ್ಟ ಹೆತ್ತಮ್ಮ
x

ಸ್ವಂತ 13 ವರ್ಷದ ಮಗಳನ್ನೇ ತಾಯಿ ನರಬಲಿ ಕೊಟ್ಟಿರುವ ಭೀಕರ ಕೃತ್ಯವಿದು.

Crime News| ಅನಾರೋಗ್ಯ ಪೀಡಿತ ಮಗನ ಚೇತರಿಕೆಗಾಗಿ ಮಗಳನ್ನೇ ನರಬಲಿ ಕೊಟ್ಟ ಹೆತ್ತಮ್ಮ

ಮಗನ ಸುಖಕ್ಕಾಗಿ ಹೆತ್ತ ಮಗಳನ್ನೇ ಬಲಿ ಕೊಟ್ಟ ರಾಕ್ಷಸಿ ತಾಯಿ. ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದ ಈ ಅಮಾನವೀಯ ಕೃತ್ಯದ ಸಂಪೂರ್ಣ ವಿವರ ಇಲ್ಲಿದೆ.


Click the Play button to hear this message in audio format

ಮಗನ ಅನಾರೋಗ್ಯ ಗುಣಪಡಿಸಲು ಹಾಗೂ ಕುಟುಂಬದ ಕಷ್ಟಗಳನ್ನು ದೂರಮಾಡಲು ಸ್ವಂತ ತಾಯಿಯೇ ಮಗಳನ್ನು ನರಬಲಿ ಕೊಟ್ಟಿರುವ ಅಮಾನವೀಯ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯ ಕುಸುಂಭ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ನಾಪತ್ತೆಯಾಗಿದ್ದ 13 ವರ್ಷದ ಬಾಲಕಿಯನ್ನು ಆಕೆಯ ತಾಯಿ, ತಾಯಿಯ ಪ್ರೇಮಿ ಮತ್ತು ಒಬ್ಬ ಮಂತ್ರವಾದಿ ಸೇರಿ ಬಲಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 24 ರಂದು ಮಂಗಳ ಜುಲುಸ್ ಮೆರವಣಿಗೆಯ ಸಮಯದಲ್ಲಿ ಬಾಲಕಿ ನಾಪತ್ತೆಯಾಗಿದ್ದಳು. ಮರುದಿನ ಬೆಳಗ್ಗೆ ಸ್ಥಳೀಯ ಸರ್ಕಾರಿ ಶಾಲೆಯ ಹಿಂಭಾಗದ ಬಿದಿರಿನ ಪೊದೆಯೊಂದರಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಬಾಲಕಿಯ ತಾಯಿಯೇ ಬೇರೆಯವರ ಮೇಲೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದಳು. ಆದರೆ ಜಾರ್ಖಂಡ್ ಡಿಜಿಪಿ ಮತ್ತು ಹಜಾರಿಬಾಗ್ ಎಸ್‌ಪಿ ಅವರ ಸೂಚನೆಯಂತೆ ರಚಿಸಲಾದ ವಿಶೇಷ ತನಿಖಾ ತಂಡವು ತಾಂತ್ರಿಕ ಪುರಾವೆಗಳ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಬೆಚ್ಚಿಬೀಳಿಸುವ ಸತ್ಯ ಬಯಲಾಗಿದೆ.

ಶಾಂತಿ ದೇವಿ ಎಂಬ ಮಾಟಗಾತಿ, ಬಾಲಕಿಯ ತಾಯಿಗೆ ಮಗನ ಕಾಯಿಲೆ ಗುಣವಾಗಬೇಕಾದರೆ ಕನ್ಯಾ ಬಲಿ ನೀಡಲೇಬೇಕು ಎಂದು ಪ್ರಚೋದಿಸಿದ್ದಳು. ಕಳೆದ ಮೂರು ತಿಂಗಳಿನಿಂದ ಈ ಬಗ್ಗೆ ಸಂಚು ರೂಪಿಸಿದ್ದ ತಾಯಿ, ದುರ್ಗಾ ಅಷ್ಟಮಿಯ ಶುಭ ಮುಹೂರ್ತದಲ್ಲೇ ಮಗಳನ್ನು ಬಲಿ ನೀಡಲು ನಿರ್ಧರಿಸಿದ್ದಳು. ಅಂದು ರಾತ್ರಿ ಪೂಜೆಯ ನೆಪದಲ್ಲಿ ಮಗಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಪ್ರೇಮಿ ಭೀಮ್ ರಾಮ್ ಎಂಬುವವನ ಜೊತೆಗೂಡಿ ಈ ಬರ್ಬರ ಕೃತ್ಯ ಎಸಗಿದ್ದಾಳೆ.

ಅಲ್ಲಿ ಭೀಮ್ ರಾಮ್ ಬಾಲಕಿಯ ಕತ್ತು ಹಿಸುಕಿದ್ದರೆ, ಆಕೆ ಒದ್ದಾಡದಂತೆ ತಾಯಿಯೇ ಮಗಳ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಳು. ನಂತರ ತಾಂತ್ರಿಕಳ ಸೂಚನೆಯಂತೆ ವಿಧಿವಿಧಾನದ ಭಾಗವಾಗಿ ಬಾಲಕಿಯ ತಲೆಗೆ ಹೊಡೆದು ರಕ್ತ ಹರಿಸಿದ್ದಲ್ಲದೆ, ಖಾಸಗಿ ಅಂಗಗಳಿಗೆ ಮರದ ಕೋಲಿನಿಂದ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾರೆ. ಸದ್ಯ ಬಂಧಿತರಾಗಿರುವ ಆರೋಪಿಗಳಲ್ಲಿ ಭೀಮ್ ರಾಮ್ ಎಂಬಾತ ಈ ಹಿಂದೆ ತನ್ನ ಅತ್ತಿಗೆಯನ್ನು ಸೇರಿದಂತೆ ಇಬ್ಬರನ್ನು ಕೊಂದ ಹಳೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಾಯಿ, ಪ್ರೇಮಿ ಮತ್ತು ತಾಂತ್ರಿಕ ಸೇರಿದಂತೆ ಎಲ್ಲಾ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Read More
Next Story