ಕೆಲಸ ಬಿಟ್ಟಿದ್ದಕ್ಕೆ ಕಿರಿಕ್; ಮ್ಯಾನೇಜರ್‌ನನ್ನೇ ಕೊಲೆ ಮಾಡಿದ ಮಾಜಿ ಉದ್ಯೋಗಿ
x

ಹಳೆ ಕೆಲಸಗಾರ ಹನುಮಂತಪ್ಪನಿಂದ ಮ್ಯಾನೇಜರ್ ಹತ್ಯೆ, ಆರೋಪಿ ಬಂಧನ.

ಕೆಲಸ ಬಿಟ್ಟಿದ್ದಕ್ಕೆ ಕಿರಿಕ್; ಮ್ಯಾನೇಜರ್‌ನನ್ನೇ ಕೊಲೆ ಮಾಡಿದ ಮಾಜಿ ಉದ್ಯೋಗಿ

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕಾರ್ಖಾನೆಯ ಮ್ಯಾನೇಜರ್ ಒಬ್ಬರನ್ನು ಕೆಲಸ ಬಿಟ್ಟಿದ್ದ ಮಾಜಿ ಉದ್ಯೋಗಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.


Click the Play button to hear this message in audio format

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಕಾರ್ಖಾನೆಯ ಮ್ಯಾನೇಜರ್ ಒಬ್ಬರನ್ನು ಕೆಲಸಗಾರನೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಿಗಳರಪಾಳ್ಯದ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್ ಎಂಬುವವರೇ ಕೊಲೆಯಾದ ದುರ್ದೈವಿ.

ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಹನುಮಂತಪ್ಪ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಇತ್ತೀಚೆಗಷ್ಟೇ ಹನುಮಂತಪ್ಪ ಕಾರ್ಖಾನೆಯ ಕೆಲಸವನ್ನು ತೊರೆದಿದ್ದು, ಈ ವಿಚಾರವಾಗಿ ಮ್ಯಾನೇಜರ್ ರಾಹುಲ್ ಹಾಗೂ ಆತನ ನಡುವೆ ತೀವ್ರ ವೈಮನಸ್ಸು ಬೆಳೆದಿತ್ತು ಎನ್ನಲಾಗಿದೆ. ಸೋಮವಾರ ರಾತ್ರಿ ಈ ಇಬ್ಬರ ನಡುವೆ ಜಗಳ ಆರಂಭವಾಗಿದ್ದು, ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಈ ವೇಳೆ ಆಕ್ರೋಶಗೊಂಡ ಹನುಮಂತಪ್ಪ, ತನ್ನ ಬಳಿಯಿದ್ದ ಚಾಕುವಿನಿಂದ ರಾಹುಲ್ ಅವರಿಗೆ ಮನಬಂದಂತೆ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ.

ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಾಹುಲ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅತಿಯಾದ ರಕ್ತಸ್ರಾವದಿಂದಾಗಿ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ರಾಜಗೋಪಾಲನಗರ ಪೊಲೀಸರು ಪರಿಶೀಲನೆ ನಡೆಸಿದ್ದು, ಸದ್ಯ ಆರೋಪಿ ಹನುಮಂತಪ್ಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇತ್ತೀಚೆಗೆ ಅತ್ತಿಬೆಲೆಯ ಮಲ್ಲೇನಹಳ್ಳಿಯಲ್ಲಿ ಸಾಲದ ಬಾಧೆ ತಾಳಲಾರದೆ ಯುವಕನೊಬ್ಬ ತನ್ನ ತಾಯಿ ಆಶಾ ಮತ್ತು ಅಕ್ಕ ವರ್ಷಿತಾ ಎಂಬುವವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿತ್ತು. ಘಟನೆಯಲ್ಲಿ 12 ವರ್ಷದ ಬಾಲಕನ ಮೇಲೆಯೂ ಹಲ್ಲೆ ನಡೆದಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಕೃತ್ಯದ ನಂತರ ಆರೋಪಿ ಮೋಹನ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚೀಟಿ ವ್ಯವಹಾರದಲ್ಲಿ ಉಂಟಾದ ನಷ್ಟ ಮತ್ತು ಸಾಲಗಾರರ ಕಿರುಕುಳವೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಮತ್ತೊಂದು ಭೀಕರ ಘಟನೆಯಲ್ಲಿ, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ 16 ವರ್ಷದ ಅಪ್ರಾಪ್ತ ಹುಡುಗನೊಬ್ಬ ಯಮುನಾ ಮತ್ತು ಸುದೀಪ್ ಎಂಬ ಅಕ್ಕ-ತಮ್ಮನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿತ್ತು. ಯಮುನಾ ಅವರ ಪತಿ ಮತ್ತು ಆರೋಪಿ ಹುಡುಗನ ತಾಯಿಯ ನಡುವಿನ ಸಂಬಂಧದ ಕುರಿತು ಗಲಾಟೆ ನಡೆಸಲು ಹೋದಾಗ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.

Read More
Next Story