Gurmatkal: Accused of assault on Scheduled Castes for sitting on temple fence
x
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಸಿದ್ದಲಿಂಗಪ್ಪ.

ಗುರುಮಠಕಲ್: ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದಕ್ಕೆ ಪರಿಶಿಷ್ಟರ ಮೇಲೆ ಹಲ್ಲೆ ಆರೋಪ

ಕಿಡಿಗೇಡಿಗಳ ವರ್ತನೆಯನ್ನು ಪ್ರಶ್ನಿಸಿದ ಅನಿಲ್‌ಕುಮಾರ್, "ಇಂದಿನ ಕಾಲದಲ್ಲಿ ಜಾತಿಯ ಹೆಸರಿನಲ್ಲಿ ಹೀಗೆ ತಾರತಮ್ಯ ಮಾಡುವಂತಿಲ್ಲ. ನಮಗೂ ಎಲ್ಲ ದೇವಾಲಯಗಳಿಗೆ ಪ್ರವೇಶಿಸುವ ಹಕ್ಕಿದೆ" ಎಂದು ದಿಟ್ಟವಾಗಿ ಉತ್ತರಿಸಿದ್ದಾರೆ.


Click the Play button to hear this message in audio format

ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಯಂಪಾಡ ಗ್ರಾಮದಲ್ಲಿ ಅಸ್ಪೃಶ್ಯತೆಯ ಕರಾಳ ಛಾಯೆ ಮರುಕಳಿಸಿದ್ದು, ದೇವಸ್ಥಾನದ ಮುಂಭಾಗದ ಕಟ್ಟೆಯ ಮೇಲೆ ಕುಳಿತಿದ್ದ ಪರಿಶಿಷ್ಟ ಜಾತಿಯ ವ್ಯಕ್ತಿಗಳ ಮೇಲೆ ಕಬ್ಬಲಿಗ ಸಮುದಾಯದ ಯುವಕರು ಏಕಾಏಕಿ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಶನಿವಾರ ನಡೆದ ಈ ಅಮಾನವೀಯ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಎಂ.ಟಿ. ಪಲ್ಲಿ ಗ್ರಾಮದ ಪೋಷಪ್ಪ ಮೀದಿಗಡ್ಡ ಮತ್ತು ಅನಂತಮ್ಮ ದಂಪತಿಯ ಪುತ್ರ ಮಹಾಂತೇಶನ ಜವಳ ಕಾರ್ಯಕ್ರಮವನ್ನು ಯಂಪಾಡ ಗ್ರಾಮದ ಹನುಮಾನ್ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಪೋಷಪ್ಪ ಅವರ ಸಂಬಂಧಿ, ಗಾಜರಕೋಟ ಗ್ರಾಮದ ಅನಿಲ್‌ಕುಮಾರ್ ಬೇನಳ್ಳಿ ಅವರು ಆಯಾಸ ಕಳೆಯಲು ದೇವಸ್ಥಾನದ ಮುಂಭಾಗದ ಕಟ್ಟೆಯ ಮೇಲೆ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಸ್ಥಳೀಯ ಕೆಲ ಕಿಡಿಗೇಡಿಗಳು, "ನೀವು ಪರಿಶಿಷ್ಟರು, ದೇವಸ್ಥಾನದ ಕಟ್ಟೆ ಏರುವಂತಿಲ್ಲ, ತಕ್ಷಣ ಕೆಳಗಿಳಿಯಿರಿ" ಎಂದು ದಬಾಯಿಸಿ ಅವರನ್ನು ಕೆಳಗಿಳಿಸಲು ಯತ್ನಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಜಾತಿ ನಿಂದನೆ ಪ್ರಶ್ನಿಸಿದ್ದಕ್ಕೆ ಭೀಕರ ಹಲ್ಲೆ

ಕಿಡಿಗೇಡಿಗಳ ವರ್ತನೆಯನ್ನು ಪ್ರಶ್ನಿಸಿದ ಅನಿಲ್‌ಕುಮಾರ್, "ಇಂದಿನ ಕಾಲದಲ್ಲಿ ಜಾತಿಯ ಹೆಸರಿನಲ್ಲಿ ಹೀಗೆ ತಾರತಮ್ಯ ಮಾಡುವಂತಿಲ್ಲ. ನಮಗೂ ಎಲ್ಲ ದೇವಾಲಯಗಳಿಗೆ ಪ್ರವೇಶಿಸುವ ಹಕ್ಕಿದೆ" ಎಂದು ದಿಟ್ಟವಾಗಿ ಉತ್ತರಿಸಿದ್ದಾರೆ. ಈ ಮಾತಿನಿಂದ ಮತ್ತಷ್ಟು ಕೆರಳಿದ ಯಂಪಾಡ ಗ್ರಾಮದ ಲಕ್ಷ್ಮಣ ಕಾಳಪ್ಪ, ಅನಂತಪ್ಪ ಹಣಮಂತ, ರಮೇಶ ಸಾಬಣ್ಣ ಮತ್ತು ಅವರ ಗುಂಪು ಅನಿಲ್‌ಕುಮಾರ್ ಹಾಗೂ ಅವರ ಜೊತೆಗಿದ್ದವರ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ. ಹಲ್ಲೆಯ ಪರಿಣಾಮವಾಗಿ ಅನಿಲ್‌ಕುಮಾರ್ ಅವರ ತಲೆಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದ್ದು, ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಗುರುಮಠಕಲ್ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಸಿಎಚ್‌ಸಿ) ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬೆನ್ನಲ್ಲೇ ಯಂಪಾಡ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗುರುಮಠಕಲ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.

Read More
Next Story