
ಕ್ಷೌರ ನಿರಾಕರಣೆ|ಗದಗದಲ್ಲಿ ‘ಸರ್ಕಾರಿ ಕ್ಷೌರದಂಗಡಿʼ ; ಅಸ್ಪೃಶ್ಯತೆಗೆ ಪ್ರೋತ್ಸಾಹ ನೀಡಿತೇ ಸರ್ಕಾರ?
ಅಸ್ಪೃಶ್ಯತೆ ಆಚರಿಸಿದವರಿಗೆ ಶಿಕ್ಷೆ ನೀಡುವ ಬದಲು 'ಸರ್ಕಾರಿ ಕ್ಷೌರದಂಗಡಿ' ತೆರೆದ ಜಿಲ್ಲಾಡಳಿತದ ಕ್ರಮವು ತೀವ್ರ ಟೀಕೆಗೆ ಗುರಿಯಾಗಿದೆ. ಸರ್ಕಾರವೇ ಅಸಮಾನತೆಯನ್ನು ಜೀವಂತವಾಗಿರಿಸಿ ಸಂವಿಧಾನದ ಆಶಯವನ್ನು ಬುಡಮೇಲಾಗಿಸಿದೆ.
ಅಸ್ಪೃಶ್ಯತೆಯನ್ನು ಬೇರುಸಹಿತ ಕಿತ್ತೊಗೆಯಬೇಕಾದ ಸರ್ಕಾರವೇ ಈಗ ಅಸ್ಪೃಶ್ಯತೆಗೆ ಪರೋಕ್ಷ ಸಹಕಾರ ನೀಡಿದ ಪ್ರಸಂಗ ತೀವ್ರ ಟೀಕೆಗೆ ಗುರಿಯಾಗಿದೆ. ಗದಗಿನ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ನಿರಾಕರಿಸಿದ ಹಿನ್ನೆಲೆ ಜಿಲ್ಲಾಡಳಿತವೇ ಪ್ರತ್ಯೇಕ ʼಸರ್ಕಾರಿ ಕ್ಷೌರದಂಗಡಿʼ ತೆರೆಯುವ ಮೂಲಕ ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಏನಿದು ಘಟನೆ?
ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡಲು ಕ್ಷೌರಿಕರು ಹಿಂದೇಟು ಹಾಕಿದ್ದರು. ಗ್ರಾಮದಲ್ಲಿ ತಹಶೀಲ್ದಾರ್ ಅವರು ಸಭೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮೂಢನಂಬಿಕೆ ಹೆಸರಿನಲ್ಲಿ ಅಸ್ಪೃಶ್ಯತೆ ಆಚರಿಸುತ್ತಿದ್ದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಿದ್ದ ಜಿಲ್ಲಾಡಳಿತವೇ ಮುಂದೆ ನಿಂತು ಅಧಿಕೃತವಾಗಿ 'ಸರ್ಕಾರಿ ಕಟಿಂಗ್ ಶಾಪ್' ಆರಂಭಿಸಿದೆ. ಇದು ಅಸ್ಪೃಶ್ಯತೆ ಆಚರಿಸುವವರಿಗೆ ಪ್ರೋತ್ಸಾಹಿಸುವಂತಿದೆ ಎಂದು ಸಾಹಿತಿಗಳು, ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿರಾಕರಣೆಗೆ ಕಾರಣವೇನು ?
ಮಹಾನವಮಿ ಸಮಯದಲ್ಲಿ ವೀರಭದ್ರೇಶ್ವರ ಸ್ವಾಮಿ ದೇವರು ಹಡಪದ ಸಮಾಜದವರ(ಕ್ಷೌರಿಕರ) ಮನೆಗೆ ಭೇಟಿ ನೀಡುವ ಸಂಪ್ರದಾಯವಿದೆ. ಈ ಸಮಯದಲ್ಲಿ ದಲಿತರಿಗೆ ಕ್ಷೌರ ಮಾಡಿದರೆ ದೇವರಿಗೆ ದೋಷ ಉಂಟಾಗುತ್ತದೆ ಎಂಬ ಮೂಢನಂಬಿಕೆ ಮುಂದಿಟ್ಟುಕೊಂಡು ಕ್ಷೌರಿಕರು ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ್ದರು.
ದಲಿತರಿಗೆ ಕ್ಷೌರ ನಿರಾಕರಿಸುವುದು ಕಾನೂನು ಬದ್ಧ ಅಪರಾಧ. ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ಅಸ್ಪೃಶ್ಯತೆ ಆಚರಿಸಿದವರನ್ನು ಜೈಲಿಗಟ್ಟುವ ಬದಲು, ಅಧಿಕಾರಿಗಳು ಕ್ಷೌರ ಮಾಡಲು ನಿರಾಕರಿಸಿದವರಿಗೆ ಪರ್ಯಾಯ ಮಾರ್ಗ ಹುಡುಕಿಕೊಟ್ಟಿದ್ದಾರೆ. ಇದು ಅಪರಾಧಿಗಳಿಗೆ ನೀಡಿದ 'ಕ್ಲೀನ್ ಚಿಟ್' ಎಂಬ ವಾದಗಳು ಕೇಳಿ ಬರುತ್ತಿವೆ.
ಖಾಸಗಿ ಕ್ಷೌರದಂಗಡಿಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ ಎಂಬ ವಾಸ್ತವ ಒಪ್ಪಿಕೊಂಡ ಸರ್ಕಾರ, ಅವರಿಗೆಂದೇ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು ಸಹ ಅಸ್ಪೃಶ್ಯತೆಯನ್ನು ಪರೋಕ್ಷವಾಗಿ ಎತ್ತಿಹಿಡಿದಂತಾಗಿದೆ. ತಹಶೀಲ್ದಾರ್ ಸಭೆ ನಡೆಸಿದರೂ ಬಗ್ಗದ ಕ್ಷೌರಿಕರ ವಿರುದ್ಧ ನಾಗರಿಕ ಹಕ್ಕು ಜಾರಿ (PCR) ಕಾಯ್ದೆಯಡಿ ಕ್ರಮ ಜರುಗಿಸಬೇಕಿತ್ತು. ಆದರೆ, ಅವರ ಹಠಕ್ಕೆ ಮಣಿದು ಸರ್ಕಾರವೇ ಪ್ರತ್ಯೇಕ ಅಂಗಡಿ ತೆರೆದದ್ದು, ಅಧಿಕಾರಿಗಳ ಅಸಹಾಯಕತೆ ಅಥವಾ ಪರೋಕ್ಷ ಬೆಂಬಲವನ್ನು ಎತ್ತಿ ತೋರಿಸುತ್ತದೆ ಎನ್ನುವಂತಾಗಿದೆ.
ಶಿಕ್ಷೆಯ ಬದಲು ಶರಣಾಗತಿ?
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕೊಪ್ಪಳ, ಹಾಸನ ಮತ್ತು ಮೈಸೂರು ಭಾಗಗಳಲ್ಲಿ ಇಂತಹ ಪ್ರಕರಣಗಳು ನಡೆದಾಗ ಸರ್ಕಾರ ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಆದರೆ, ಗದಗ ಜಿಲ್ಲಾಡಳಿತದ ಈ ನಡೆ ಹಳೆಯ ಸಂಪ್ರದಾಯವಾದಿಗಳಿಗೆ ಗೆಲುವು ತಂದುಕೊಟ್ಟಿದೆ.
ಸಂಪ್ರದಾಯದ ಹೆಸರಿನಲ್ಲಿ ದಲಿತರನ್ನು ಹೊರಗಿಟ್ಟವರ ಪರವಾನಗಿ ರದ್ದುಪಡಿಸಿ, ಅವರ ಮೇಲೆ ಕಾನೂನು ಕ್ರಮ ಜರುಗಿಸಿದ್ದರೆ ಅದು ಇತರರಿಗೆ ಪಾಠವಾಗುತ್ತಿತ್ತು. ಆದರೆ ಈಗ ಸರ್ಕಾರವೇ ಅಂಗಡಿ ತೆರೆದಿರುವುದು "ನಾವು ಬದಲಾಗುವುದಿಲ್ಲ, ಸರ್ಕಾರವೇ ಹೊಂದಾಣಿಕೆ ಮಾಡಿಕೊಳ್ಳಲಿ" ಎಂಬ ಉದ್ಧಟತನಕ್ಕೆ ದಾರಿ ಮಾಡಿಕೊಟ್ಟಿದೆ.
"ಸರ್ಕಾರ ಮಾಡಬೇಕಿರುವುದು ಅಸ್ಪೃಶ್ಯತೆ ಆಚರಿಸುವವರಿಗೆ ಶಿಕ್ಷೆ ನೀಡುವುದೇ ಹೊರತು, ಅವರು ಸೃಷ್ಟಿಸಿದ ಸಮಸ್ಯೆಗಳಿಗೆ ಸಮಾಧಾನಕಾರಿಯಾಗಿ ಪ್ರತ್ಯೇಕ ಶಾಪ್ ತೆರೆಯುವುದಲ್ಲ. ಇದು ಸಮಾನತೆಯ ಸಂಕೇತವಲ್ಲ, ಬದಲಿಗೆ ಸರ್ಕಾರದ ಸೋಲಿನ ಸಂಕೇತ." ಎಂದು ಸಾಮಾಜಿಕ ಕಾರ್ಯಕರ್ತರು ಕಿಡಿಕಾರಿದ್ದಾರೆ.
ದಲಿತರಿಗೆ ಕ್ಷೌರ ಮಾಡಲು ನಿರಾಕರಿಸಿದ ಕ್ಷೌರಿಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಸರ್ಕಾರದ ಮೊದಲ ಕರ್ತವ್ಯವಾಗಿತ್ತು. ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ದಲಿತರನ್ನು ಸಮಾಜದ ಮುಖ್ಯವಾಹಿನಿಯಿಂದ ಹೊರಗಿಟ್ಟವರ ಮೇಲೆ ಪ್ರಕರಣ ದಾಖಲಿಸಿ ಶಿಕ್ಷೆ ನೀಡಬೇಕಿತ್ತು. ಆದರೆ, ಜಿಲ್ಲಾಡಳಿತವು ತಪ್ಪಿತಸ್ಥರಿಗೆ ಬಿಸಿ ಮುಟ್ಟಿಸುವ ಬದಲು, ತಾನೇ ಒಂದು ಅಂಗಡಿ ತೆರೆಯುವ ಮೂಲಕ ಅಸ್ಪೃಶ್ಯತೆ ಆಚರಿಸುವವರ ಹಠಕ್ಕೆ ಮಣಿದಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಹಿತಿ ಬಸವರಾಜ ಸೂಳಿಭಾವಿ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, "ದಲಿತರಿಗೆ ಕ್ಷೌರ ನಿರಾಕರಿಸಿದವರ ಮೇಲೆ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಬೇಕಿತ್ತು. ದಲಿತರ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಜೈಲಿಗಟ್ಟಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಯಾವ ಕೆಲಸವು ಆಗಿಲ್ಲ. ದಲಿತರಿಗೆ ಪ್ರತ್ಯೇಕ ಕ್ಷೌರದಂಗಡಿ ತೆರೆಯುವ ಮೂಲಕ ಅಧಿಕಾರಿಗಳೇ, ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ ಎನ್ನುವುದನ್ನು ಒಪ್ಪಿಕೊಂಡಿದೆ. ಜತೆಗೆ ಇಂತಹ ಆಚರಣೆಗೆ ಬೆಂಬಲ ನೀಡಿದೆ. ಹೀಗಾಗಿ ಇಂತಹ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಜರುಗಿಸಬೇಕು. ಮಠಾಧೀಶರು ಹಾಗೂ ಚಿಂತಕರು ಸಿಂಗಟಾಲೂರು ಗ್ರಾಮಕ್ಕೆ ಹೋಗಿ ಅವರು ಸಹ ಕ್ಷೌರ ಮಾಡಿಸಿಕೊಂಡು ಅರಿವು ಮೂಡಿಸಬೇಕು. ಮುಂದಿನ ದಿನಗಳಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿದರೆ, ದಲಿತರಿಗಾಗಿ ಪ್ರತ್ಯೇಕ ದೇವಾಲಯ ನಿರ್ಮಿಸುತ್ತಾರೆಯೇ"? ಎಂದು ಪ್ರಶ್ನಿಸಿದರು.

