235 ಕೋಟಿ ರೂ. ಜಿಎಸ್‌ಟಿ ತೆರಿಗೆ ವಂಚನೆ: ಬೆಂಗಳೂರಿನಲ್ಲಿ ಹಗರಣದ ಮಾಸ್ಟರ್‌ಮೈಂಡ್ ಬಂಧನ
x

235 ಕೋಟಿ ರೂ. ಜಿಎಸ್‌ಟಿ ತೆರಿಗೆ ವಂಚನೆ: ಬೆಂಗಳೂರಿನಲ್ಲಿ ಹಗರಣದ ಮಾಸ್ಟರ್‌ಮೈಂಡ್ ಬಂಧನ

ನೂರಾರು ಶೆಲ್ ಕಂಪನಿಗಳ ಹೆಸರಿನಲ್ಲಿ ಅಕ್ರಮವಾಗಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ವರ್ಗಾವಣೆ ಮಾಡುತ್ತಿದ್ದ ಈ ಬೃಹತ್ ಜಾಲವನ್ನು ದಾಖಲೆ ಸಮೇತ ಭೇದಿಸಲಾಗಿದೆ.


Click the Play button to hear this message in audio format

ದೇಶದ ತೆರಿಗೆ ವ್ಯವಸ್ಥೆಗೆ ಕನ್ನ ಹಾಕುತ್ತಿದ್ದ ಬೃಹತ್ ಜಾಲವೊಂದನ್ನು ಜಿಎಸ್‌ಟಿ ಗುಪ್ತಚರ ಮಹಾ ನಿರ್ದೇಶನಾಲಯದ (ಡಿಜಿಜಿಐ) ಬೆಳಗಾವಿ ವಲಯ ಘಟಕದ ಅಧಿಕಾರಿಗಳು ಭೇದಿಸಿದ್ದಾರೆ. ಸುಮಾರು 593 ಕೋಟಿ ರೂ., ಮೌಲ್ಯದ ನಕಲಿ ಇನ್‌ವಾಯ್ಸ್‌ಗಳನ್ನು ಸೃಷ್ಟಿಸಿ, ಸರ್ಕಾರಕ್ಕೆ ಸುಮಾರು 235 ಕೋಟಿ ರೂ.ಗಳಷ್ಟು ತೆರಿಗೆ ವಂಚನೆ ಮಾಡಿರುವ ಈ ಹಗರಣದ ಪ್ರಮುಖ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಈ ಇಡೀ ಹಗರಣದ ಮಾಸ್ಟರ್‌ಮೈಂಡ್ ಮೊಹಮ್ಮದ್ ಸೈಫುಲ್ಲಾ. ಅಧಿಕೃತವಾಗಿ ನೋಂದಾಯಿತ ಜಿಎಸ್‌ಟಿ ಪ್ರಾಕ್ಟಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಸೈಫುಲ್ಲಾ ಕೇವಲ ದಾಖಲೆಗಳಲ್ಲಿ ಮಾತ್ರ ಇರುವ ಹಲವಾರು ಕಂಪನಿಗಳ ಜಿಎಸ್‌ಟಿ ಸಂಖ್ಯೆಗಳನ್ನು ನಿರ್ವಹಿಸುತ್ತಿದ್ದ. ಪ್ರತಿ ಬಿಲ್‌ನ ಮೌಲ್ಯದ ಮೇಲೆ ನಿರ್ದಿಷ್ಟ ಶೇಕಡಾವಾರು ಕಮಿಷನ್ ಪಡೆದು ನಕಲಿ ಇನ್‌ವಾಯ್ಸ್‌ಗಳನ್ನು ವಿತರಿಸುತ್ತಿದ್ದರು. ಅಧಿಕಾರಿಗಳು ದಾಖಲೆ ಸಮೇತ ವಿಚಾರಣೆ ನಡೆಸಿದಾಗ, ಸೈಫುಲ್ಲಾ ಅವರು ತಮ್ಮ ಈ ಅಕ್ರಮ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಸುಳಿವು ಸಿಕ್ಕಿದು ಹೇಗೆ?

ಈ ಬೃಹತ್ ಹಗರಣದ ಸುಳಿವು ಸಿಕ್ಕಿದ್ದು ಒಂದು ಸಂಶಯಾಸ್ಪದ ಜಿಎಸ್‌ಟಿ ನೋಂದಣಿಯ ತನಿಖೆಯ ಸಂದರ್ಭದಲ್ಲಿ. ಈ ಅನುಮಾನದ ಬೆನ್ನತ್ತಿದ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಸ್ಟಾರ್ ಟ್ಯಾಕ್ಸ್ ಕನ್ಸಲ್ ಟೆಂಟ್ ಸಂಸ್ಥೆಗೆ ಸಂಬಂಧಿಸಿದ ವಿವಿಧ ಕಚೇರಿಗಳು ಮತ್ತು ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದರು. ಈ ಶೋಧ ಕಾರ್ಯದ ವೇಳೆ, ಯಾವುದೇ ನೈಜ ಸರಕು ಅಥವಾ ಸೇವೆಗಳ ಪೂರೈಕೆ ಮಾಡದೆಯೇ ಕೇವಲ ಕಾಗದದ ಮೇಲೆ ಬಿಲ್‌ಗಳನ್ನು ಸೃಷ್ಟಿಸುವ ವ್ಯವಸ್ಥಿತ ಜಾಲ ಪತ್ತೆಯಾಯಿತು.

ಹಗರಣದ ಸ್ವರೂಪ

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ನೂರಾರು ನಕಲಿ ಜಿಎಸ್‌ಟಿ ನೋಂದಣಿಗಳನ್ನು ಮಾಡಿಕೊಂಡಿದ್ದರು. ಈ ನೋಂದಣಿಗಳನ್ನು ಕೇವಲ ನಕಲಿ ಇನ್‌ವಾಯ್ಸ್‌ಗಳು ಮತ್ತು ಇ-ವೇ ಬಿಲ್‌ಗಳನ್ನು ಸೃಷ್ಟಿಸಲು ಮಾತ್ರ ಬಳಸಲಾಗುತ್ತಿತ್ತು. ಈ ಮೂಲಕ ವಿವಿಧ ಕಂಪನಿಗಳಿಗೆ ಅಕ್ರಮವಾಗಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಹಾದಿ ಮಾಡಿಕೊಡಲಾಗುತ್ತಿತ್ತು.

ಈ ಜಾಲವು ಅತ್ಯಂತ ತಾಂತ್ರಿಕವಾಗಿ ಕೆಲಸ ಮಾಡುತ್ತಿತ್ತು. ನಕಲಿ ವ್ಯವಹಾರಗಳನ್ನು ದಾಖಲಿಸಲು ಮತ್ತು ಅವುಗಳನ್ನು ಮೇಲ್ನೋಟಕ್ಕೆ ನೈಜವೆಂದು ತೋರಿಸಲು ಅತ್ಯಾಧುನಿಕ ಆನ್‌ಲೈನ್ ಅಕೌಂಟಿಂಗ್ ಸಾಫ್ಟ್‌ವೇರ್‌ಗಳನ್ನು ಬಳಸಲಾಗುತ್ತಿತ್ತು. ಅಸ್ತಿತ್ವದಲ್ಲೇ ಇಲ್ಲದ ಹಲವು ಶೆಲ್ ಕಂಪನಿಗಳ ಮೂಲಕ ಈ ವ್ಯವಹಾರಗಳನ್ನು ತಿರುಗಿಸಿ ತೋರಿಸಲಾಗುತ್ತಿತ್ತು. ಈ ಮೂಲಕ ಸುಮಾರು 235 ಕೋಟಿ ರೂಪಾಯಿಗಳ ಐಟಿಸಿಯನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನೂನು ಕ್ರಮ

ಫೆ. 24 ರಂದು ಬೆಂಗಳೂರಿನಲ್ಲಿ ಮೊಹಮ್ಮದ್ ಸೈಫುಲ್ಲಾನನ್ನು, ಸಿಜಿಎಸ್‌ಟಿ ಕಾಯ್ದೆ 2017ರ ಸೆಕ್ಷನ್ 69 ರ ಅಡಿಯಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹೆಚ್ಚಿನ ವಿಚಾರಣೆಗಾಗಿ ಬೆಳಗಾವಿಗೆ ಕರೆದೊಯ್ಯಲು ನ್ಯಾಯಾಲಯವು ಮಂಜೂರು ಮಾಡಿತು. ನಂತರ ಬೆಳಗಾವಿಯ ಜೆಎಂಎಫ್‌ಸಿ 4ನೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಈ ಜಾಲವು ಕೇವಲ ಕರ್ನಾಟಕಕ್ಕೆ ಸೀಮಿತವಾಗಿದೆಯೇ ಅಥವಾ ಹೊರರಾಜ್ಯಗಳಿಗೂ ಹಬ್ಬಿದೆಯೇ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ನಕಲಿ ಇನ್‌ವಾಯ್ಸ್‌ಗಳನ್ನು ಬಳಸಿಕೊಂಡು ಲಾಭ ಪಡೆದ ಇತರ ಕಂಪನಿಗಳು ಮತ್ತು ವ್ಯಕ್ತಿಗಳನ್ನು ಪತ್ತೆಹಚ್ಚುವ ಕೆಲಸ ಪ್ರಗತಿಯಲ್ಲಿದೆ. ಹಗರಣದ ಒಟ್ಟು ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.

Read More
Next Story