
ನಟಿ ರನ್ಯಾ ರಾವ್ ವಿರುದ್ಧ 100 ಕೋಟಿ ರೂ. ಚಿನ್ನ ಕಳ್ಳಸಾಗಣೆ ಪ್ರಕರಣ: ಇಡಿ ಚಾರ್ಜ್‌ಶೀಟ್ ಸಲ್ಲಿಕೆ
Ranya Rao| ಕನ್ನಡ ನಟಿ ರನ್ಯಾ ರಾವ್ ಮತ್ತು ಅವರ ಸಹಚರರ ವಿರುದ್ಧ 102.55 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಚಾರ್ಜ್‌ಶೀಟ್ ಸಲ್ಲಿಸಿದೆ.
ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ಮತ್ತು ಅವರ ಇಬ್ಬರು ಸಹಚರರ ವಿರುದ್ಧ ದಾಖಲಾಗಿದ್ದ ಚಿನ್ನ ಕಳ್ಳಸಾಗಣೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ.
ಬೃಹತ್ ಪ್ರಮಾಣದ ಚಿನ್ನದ ದಂಧೆ
ಇಡಿ ಮಾಹಿತಿ ಪ್ರಕಾರ, ಮಾರ್ಚ್ 2024 ರಿಂದ ಮಾರ್ಚ್ 2025 ರ ಅವಧಿಯಲ್ಲಿ ಸುಮಾರು 127.287 ಕೆ.ಜಿ. ವಿದೇಶಿ ಮೂಲದ ಚಿನ್ನವನ್ನು ಭಾರತಕ್ಕೆ ಅಕ್ರಮವಾಗಿ ಸಾಗಿಸಲಾಗಿದೆ. ಇದರ ಅಂದಾಜು ಮೌಲ್ಯ 102.55 ಕೋಟಿ ರೂಪಾಯಿ. ಕಳ್ಳಸಾಗಣೆ ಮಾಡಿದ ಚಿನ್ನವನ್ನು ದೇಶೀಯ ಮಾರುಕಟ್ಟೆಯಲ್ಲಿ ಮಾರಿ ಬಂದ ನಗದನ್ನು ಹವಾಲಾ ಮಾರ್ಗ ಹಾಗೂ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಸಕ್ರಮ ಹಣದಂತೆ ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು?
ಈ ಪ್ರಕರಣವು ಆರಂಭವಾಗಿದ್ದು ಮಾರ್ಚ್ 3, 2025 ರಂದು. ದುಬೈಯಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ತಡೆದರು. ತಪಾಸಣೆ ನಡೆಸಿದಾಗ ಅವರ ಬಳಿ ದಾಖಲೆ ಇಲ್ಲದ 14.213 ಕೆ.ಜಿ. ಚಿನ್ನ ಪತ್ತೆಯಾಗಿತ್ತು.
ಇದರ ಬೆನ್ನಲ್ಲೇ ಸಿಬಿಐ (CBI) ಎಫ್‌ಐಆರ್ ದಾಖಲಿಸಿತು. ಹಣದ ಅಕ್ರಮ ವರ್ಗಾವಣೆಯ ವಾಸನೆ ಬಂದ ಕಾರಣ ಜಾರಿ ನಿರ್ದೇಶನಾಲಯ (ED) ರಂಗಕ್ಕಿಳಿದು PMLA (ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ) ಅಡಿಯಲ್ಲಿ ತನಿಖೆ ಆರಂಭಿಸಿತು.
ಜಪ್ತಿಯಾದ ಆಸ್ತಿ ಪಾಸ್ತಿ
ತನಿಖೆಯ ಭಾಗವಾಗಿ ರನ್ಯಾ ಹೆಸರಿನಲ್ಲಿದ್ದ 34.12 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳನ್ನು ಇಡಿ ಅಧಿಕಾರಿಗಳು ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದಾರೆ. ಅಲ್ಲದೆ, ದಾಳಿಯ ವೇಳೆ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ 2.67 ಕೋಟಿ ರೂ. ನಗದು ಪತ್ತೆಯಾಗಿದೆ.
ತನಿಖೆಯ ವಿವರ
ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ನೀಡಿದ ದೂರಿನ ಮೇರೆಗೆ ಸಿಬಿಐ ದಾಖಲಿಸಿದ್ದ ಎಫ್‌ಐಆರ್ ಆಧರಿಸಿ, ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಈ ತನಿಖೆ ನಡೆಸಿದ್ದಾರೆ. ವಿದೇಶದಲ್ಲಿ ಚಿನ್ನದ ಖರೀದಿ, ವ್ಯವಸ್ಥಿತ ಕಳ್ಳಸಾಗಣೆ ಮತ್ತು ಹವಾಲಾ ಜಾಲದ ಮೂಲಕ ಹಣ ರವಾನೆಯಾಗುತ್ತಿದ್ದ ದೊಡ್ಡ ಜಾಲವನ್ನು ತನಿಖೆ ಬಯಲಿಗೆಳೆದಿದೆ.
"ಇಂತಹ ಕಳ್ಳಸಾಗಣೆ ಚಟುವಟಿಕೆಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳುಮಾಡುವುದಲ್ಲದೇ, ಹಣಕಾಸು ನಿಯಂತ್ರಣ ಸಂಸ್ಥೆಗಳ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುತ್ತವೆ" ಎಂದು ಜಾರಿ ನಿರ್ದೇಶನಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

