ಚಿನ್ನ ಸ್ಮಗ್ಲಿಂಗ್‌  ಪ್ರಕರಣದ ರನ್ಯಾ ರಾವ್‌ ಅಪ್ಪ ಡಿಜಿಪಿ ರಾಮಚಂದ್ರ ರಾವ್‌  ವಿವಾದಗಳನ್ನು ಮೈಗೆ ಮೆತ್ತಿಕೊಂಡ ಬಗೆ...
x

ಚಿನ್ನ ಸ್ಮಗ್ಲಿಂಗ್‌ ಪ್ರಕರಣದ ರನ್ಯಾ ರಾವ್‌ ಅಪ್ಪ ಡಿಜಿಪಿ ರಾಮಚಂದ್ರ ರಾವ್‌ ವಿವಾದಗಳನ್ನು ಮೈಗೆ ಮೆತ್ತಿಕೊಂಡ ಬಗೆ...

ಈ ವಿಡಿಯೋಗಳು ಪೊಲೀಸ್ ಇಲಾಖೆಗೆ ಮುಜುಗರ ತಂದಿವೆ ಎಂದು ಪರಿಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಕ್ಷಣದಿಂದ ಜಾರಿಗೆ ಬರುವಂತೆ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.


Click the Play button to hear this message in audio format

ರಾಜ್ಯ ಪೊಲೀಸ್ ಇಲಾಖೆಯ ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಇತ್ತೀಚಿನ ವಿಡಿಯೋ ಹಗರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್‌ ಮಹಾನಿರ್ದೇಶಕರಾಗಿರುವ ರಾಮಚಂದ್ರ ರಾವ್ ತಮ್ಮ ಕಚೇರಿಯಲ್ಲೇ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವರೆನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಈ ಪ್ರಕರಣವು ಭಾರೀ ಚರ್ಚೆಗೆ ಒಳಗಾಗುತ್ತಿರುವಂತೆಯೇ ಅವರ ಮೇಲಿರುವ ಹಳೆಯ ಆರೋಪಗಳೂ ಮತ್ತೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.

ಪ್ರಮುಖವಾಗಿ ಅವರ ಮಲಮಗಳು ರನ್ಯಾರಾವ್‌ ಪ್ರಕರಣ. ಕಳೆದ ವರ್ಷವಷ್ಟೇ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಸುಮಾರು 12.56 ಕೋಟಿ ರೂಪಾಯಿ ಮೌಲ್ಯದ 14.2 ಕೆಜಿ ಚಿನ್ನವನ್ನು ದುಬೈನಿಂದ ಅಕ್ರಮವಾಗಿ ಸಾಗಿಸುವಾಗ ವಿಮಾನ ನಿಲ್ದಾಣದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.

ಆ ಸಂದರ್ಭದಲ್ಲಿ ನಟಿ ರನ್ಯಾ ಅವರಿಗೆ ವಿಮಾನ ನಿಲ್ದಾಣದಲ್ಲಿ 'ಪ್ರೋಟೋಕಾಲ್ ಸೌಲಭ್ಯ'ಗಳನ್ನು ಒದಗಿಸುವಲ್ಲಿ ರಾಮಚಂದ್ರ ರಾವ್ ಅವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಕಾರಣಕ್ಕಾಗಿಯೇ ಸರ್ಕಾರ ಅವರನ್ನು ಆ ಸಮಯದಲ್ಲಿ ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. ಮಗಳ ಸ್ಮಗ್ಲಿಂಗ್ ಪ್ರಕರಣ ಇನ್ನೂ ತಣ್ಣಗಾಗುವ ಮುನ್ನವೇ, ಈಗ ಅಪ್ಪ ರಾಮಚಂದ್ರ ರಾವ್ ಅವರದು ಎನ್ನಲಾದ ವಿಡಿಯೋ ವಿವಾದ ಭುಗಿಲೆದ್ದಿದೆ.

ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನಿಖೆಗೆ ಆದೇಶಿಸಿದ್ದಾರೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಕೆ. ರಾಮಚಂದ್ರ ರಾವ್ ಅವರನ್ನು ರಾಜ್ಯ ಸರ್ಕಾರ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಹಿರಿಯ ಅಧಿಕಾರಿಯೊಬ್ಬರು ಸಮವಸ್ತ್ರದಲ್ಲಿದ್ದಾಗಲೇ ಕಚೇರಿಯೊಳಗೆ ಅಸಭ್ಯವಾಗಿ ನಡೆದುಕೊಂಡಿರುವುದು ಸರ್ಕಾರಕ್ಕೆ ತೀವ್ರ ಮುಜುಗರ ತಂದಿದೆ ಎಂದು ಸರ್ಕಾರ ಜಾರಿಗೊಳಿಸಿದ ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಶಿಸ್ತು ಉಲ್ಲಂಘನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯು ಪೊಲೀಸ್ ಇಲಾಖೆ ಹಾಗೂ ಸರ್ಕಾರಕ್ಕೆ ಭಾರೀ ಮುಜುಗರ ಉಂಟುಮಾಡಿದೆ.

ವಿಡಿಯೋ ವೈರಲ್

ಸೋಮವಾರದಿಂದ ಹಿರಿಯ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರದ್ದೆನ್ನಲಾದ ಕೆಲವು ವಿಡಿಯೋಗಳು ಮತ್ತು ಆಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸಮವಸ್ತ್ರದಲ್ಲಿರುವ ಅಧಿಕಾರಿಯೊಬ್ಬರು ಕಚೇರಿಯ ಒಳಗೇ ಮಹಿಳೆಯರೊಂದಿಗೆ ಸಲುಗೆಯಿಂದ ಇರುವ ದೃಶ್ಯಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದವು.

ರಾಮಚಂದ್ರ ರಾವ್ ಅವರ ಸಮರ್ಥನೆ ಏನು?

ಈ ಎಲ್ಲಾ ಬೆಳವಣಿಗೆಯ ನಡುವೆ ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ರಾಮಚಂದ್ರ ರಾವ್, ಇವೆಲ್ಲವೂ ತಮಗೆ ಮಸಿ ಬಳಿಯಲು ಮಾಡಿರುವ ಸಂಚು ಎಂದು ಹೇಳಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ ಅವರು, ಮಾಧ್ಯಮಗಳೊಂದಿಗೆ ಮಾತನಾಡಿ, ʻʻಈ ವಿಡಿಯೋಗಳು ನಕಲಿ ಮತ್ತು ಎಡಿಟ್ ಮಾಡಲಾದವುಗಳಾಗಿವೆ. ಸುಮಾರು ಎಂಟು ವರ್ಷಗಳ ಹಿಂದೆ ನಾನು ಬೆಳಗಾವಿಯಲ್ಲಿದ್ದಾಗಿನ ದೃಶ್ಯಗಳನ್ನು ಈಗ ತಿರುಚಲಾಗಿದೆ. ಇಂದಿನ ತಂತ್ರಜ್ಞಾನದ ಕಾಲದಲ್ಲಿ ಏನೂ ಬೇಕಾದರೂ ಮಾಡಬಹುದುʼʼ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಹಳೆಯ ವಿವಾದಗಳ ನಂಟು

ರಾಮಚಂದ್ರ ರಾವ್ ಅವರ ವೃತ್ತಿಜೀವನವು ಮೊದಲಿನಿಂದಲೂ ವಿವಾದಗಳಿಂದಲೇ ಕೂಡಿದೆ. ಕಳೆದ ವರ್ಷವಷ್ಟೇ ಅವರ ಮಲಮಗಳು, ನಟಿ ರನ್ಯಾ ರಾವ್ 14.2 ಕೆಜಿ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದರು. ಆಗ ರಾಮಚಂದ್ರ ರಾವ್ ಅವರು ತಮ್ಮ ಅಧಿಕೃತ ಪೊಲೀಸ್ ಶಿಷ್ಟಾಚಾರವನ್ನು ಮಗಳ ಅಕ್ರಮ ಸಾಗಣೆಗೆ ಬಳಸಿಕೊಳ್ಳಲು ನೆರವಾಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿ ರಾವ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದ್ದರೂ, ತಾಂತ್ರಿಕ ಕಾರಣಗಳಿಂದ ಅವರು ಕ್ಲೀನ್ ಚಿಟ್ ಪಡೆದು ಮತ್ತೆ ಉನ್ನತ ಸ್ಥಾನ ಅಲಂಕರಿಸಿದ್ದರು.

ಈ ಪ್ರಕರಣದಲ್ಲಿ ರನ್ಯಾ ರಾವ್ ಅವರಿಗೆ -ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (COFEPOSA) ಅಡಿಯಲ್ಲಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ಸುಮಾರು 102 ಕೋಟಿ ರೂಪಾಯಿಗಳ ದಂಡ ವಿಧಿಸಿತ್ತು.

ಹಳೆಯ ಪ್ರಕರಣಗಳ ನಂಟು

ಕೇವಲ ಚಿನ್ನದ ಕಳ್ಳಸಾಗಣೆ ಮಾತ್ರವಲ್ಲದೆ, 2014ರಲ್ಲಿ ಮೈಸೂರಿನ ಇಲವಾಲ ಬಳಿ ನಡೆದ 2.27 ಕೋಟಿ ರೂಪಾಯಿ ನಗದು ಜಪ್ತಿ ಪ್ರಕರಣದಲ್ಲೂ ಇವರ ಮೇಲೆ ಹಣ ದುರ್ಬಳಕೆಯ ಆರೋಪವಿತ್ತು. ಅಂದು ದಕ್ಷಿಣ ವಲಯದ ಐಜಿಪಿ ಆಗಿದ್ದ ಇವರ ಗನ್ ಮ್ಯಾನ್ ಬಂಧನಕ್ಕೊಳಗಾಗಿದ್ದರು. ಇದರ ಜೊತೆಗೆ ಭೀಮಾತೀರದ ಚಡಚಣ ಎನ್‌ಕೌಂಟರ್ ಪ್ರಕರಣದಲ್ಲೂ ಇವರ ಪಾತ್ರದ ಬಗ್ಗೆ ಅನುಮಾನಗಳು ವ್ಯಕ್ತವಾಗಿದ್ದವು ಎನ್ನಲಾಗಿದೆ.

ಮೈಸೂರು ಪ್ರಕರಣ ಏನು?

2014ರಲ್ಲಿ ಕೇರಳದ ಕೋಝಿಕೋಡ್ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ನ್ನು ಮೈಸೂರಿನ ಇಲವಾಲ ಬಳಿ ಪೊಲೀಸರು ತಡೆದು ದಾಳಿ ನಡೆಸಿದ್ದರು. ದಾಳಿಯ ಸಮಯದಲ್ಲಿ 20 ಲಕ್ಷ ರೂ. ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿಕೊಂಡರು. ಆದರೆ ಹಣವನ್ನು ಸಾಗಿಸುತ್ತಿದ್ದ ಕೇರಳದ ವ್ಯಾಪಾರಿಗಳು "ನಿಜವಾದ ಮೊತ್ತ ರೂ. 2.27 ಕೋಟಿ. ಪೊಲೀಸರು ಉದ್ಯಮಿಯೊಂದಿಗೆ ಶಾಮೀಲಾಗಿ ಹಣದ ದೊಡ್ಡ ಭಾಗವನ್ನು ಬೇರೆಡೆಗೆ ತಿರುಗಿಸಿದ್ದಾರೆ," ಎಂದು ಅವರು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ ಸಿಬಿಐ, ರಾಮಚಂದ್ರ ರಾವ್ ಪ್ರಕರಣವನ್ನು ನಿರ್ವಹಿಸಿದ್ದರಲ್ಲಿ ಗಂಭೀರ ನ್ಯೂನತೆಗಳಿವೆ ಎಂದು ಹೇಳಿತ್ತು. ಆದರೆ ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಅವರ ವಿರುದ್ಧದ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು.

ಏನಿದು ಚಡಚಣ ಎನ್‌ಕೌಂಟರ್ ಪ್ರಕರಣ?

2017ರ ಅಕ್ಟೋಬ‌ರ್ 29ರಂದು ರೌಡಿ ಧರ್ಮರಾಜ ಚಡಚಣನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದರು. ಆತನ ತಮ್ಮ ಗಂಗಾಧರ ಚಡಚಣನನ್ನು ಈ ಸೋದರರ ಎದುರಾಳಿ ಮಹಾದೇವ ಭೈರಗೊಂಡನ ಸಹಚರರ ಸುಪರ್ದಿಗೆ ಕೊಟ್ಟಿದ್ದರು. ಅವರು ಗಂಗಾಧರನನ್ನು ತುಂಡು ತುಂಡಾಗಿ ಕತ್ತರಿಸಿ ಶವವನ್ನು ನದಿಗೆ ಎಸೆದಿದ್ದರು ಎಂದು ಆರೋಪಿಸಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಪಿಎಸ್‌ಐ ಗೋಪಾಲ್ ಹಳ್ಳೂರ ಅವರನ್ನು ಬಂಧಿಸುತ್ತಿದ್ದಂತೆಯೇ ಸರ್ಕಲ್ ಇನ್‌ಸ್ಪೆಕ್ಟರ್ ಎಂ.ಬಿ.ಅಸೋಡೆ ತಲೆಮರೆಸಿಕೊಂಡಿದ್ದರು. 2018ರಲ್ಲಿ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಅವರು ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ಹೇಳಿದ್ದರು. ಕೃತ್ಯ ನಡೆದ ಸಂದರ್ಭದಲ್ಲಿ ರಾಮಚಂದ್ರರಾವ್ ಉತ್ತರ ವಲಯದ ಐಜಿಪಿ ಆಗಿದ್ದರು.

ಸ್ಥಳೀಯ ಶಾಸಕರ ಶಿಫಾರಸಿನ ಮೇರೆಗೆ ಅವರು ಗೋಪಾಲ್‌ ಹಳ್ಳೂರ ಅವರನ್ನು ಚಡಚಣ ಠಾಣೆಗೆ ವರ್ಗ ಮಾಡಿದ್ದರು. ಈ ಬಗ್ಗೆ ಸಿಐಡಿ ರಾವ್ ಅವರನ್ನು ವಿಚಾರಣೆ ಮಾಡಿತ್ತು. "ನಾನು ಕಾನೂನಿನ ಪ್ರಕಾರವೇ ಹಳ್ಳೂರ ಅವರ ವರ್ಗ ಮಾಡಿದ್ದೆ. ಅವರು ಧರ್ಮರಾಜನನ್ನು ಎನ್‌ಕೌಂಟರ್ ಮಾಡುವ ಬಗ್ಗೆ ನನಗೂ ಮಾಹಿತಿ ಕೊಟ್ಟಿರಲಿಲ್ಲ. ನಂತರ ಎಸ್‌ಪಿ ಕರೆ ಮಾಡಿ ದಾಳಿಯ ಬಗ್ಗೆ ಹೇಳಿದರು. ಆ ನಂತರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೆ. ಈ ಪ್ರಕರಣದಲ್ಲಿ ನನ್ನಿಂದ ಲೋಪವಾಗಿಲ್ಲ," ಎಂದು ಆ ಸಂದರ್ಭದಲ್ಲಿ ರಾಮಚಂದ್ರ ರಾವ್‌ ಹೇಳಿಕೆ ನೀಡಿದ್ದರು.

ರಾಮಚಂದ್ರ ರಾವ್‌ ಹಿನ್ನೆಲೆ ಏನು?

ಕೆ. ರಾಮಚಂದ್ರ ರಾವ್ ಅವರು ಪೊಲೀಸ್ ಇಲಾಖೆಯಲ್ಲಿ ದೀರ್ಘಕಾಲದ ಅನುಭವ ಹೊಂದಿರುವ ಹಿರಿಯ ಅಧಿಕಾರಿಯಾಗಿದ್ದಾರೆ. 1993ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದ್ದ ಇವರು ಸೆಪ್ಟೆಂಬರ್‌ 2023ರಲ್ಲಿ ಡಿಜಿಪಿ ಹುದ್ದೆಗೆ ಪದೋನ್ನತಿ ಪಡೆದರು. ರನ್ಯಾರಾವ್‌ ಪ್ರಕರಣದ ಬಳಿಕ ಕಡ್ಡಾಯ ರಜೆಯಲ್ಲಿ ತೆರಳಿದ್ದ ರವು, 2025ರ ಆಗಸ್ಟ್‌ನಲ್ಲಿ ಬಳಿಕ ಪ್ರಸ್ತುತ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಕಗೊಂಡಿದ್ದರು.

ಇಲಾಖೆಯ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿರುವ ಇವರು, ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಜೊತೆಗೆ ಬೆಂಗಳೂರು ಮೆಟ್ರೊಪಾಲಿಟನ್‌ ಟಾಸ್ಕ್‌ ಫೋರ್ಸ್‌ನ ಎಡಿಜಿಪಿ ಮತ್ತು ದಕ್ಷಿಣ ವಲಯದ ಐಜಿಪಿಯಂತಹ ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದರು. ವಿಶೇಷವಾಗಿ ನಗರ ಪೊಲೀಸ್‌ ವ್ಯವಸ್ಥೆ ಹಾಗೂ ಮೂಲಸೌಕರ್ಯ ಯೋಜನೆಗಳ ಅನುಷ್ಠಾನದಲ್ಲಿ ಇವರು ಅಪಾರವಾದ ಪರಿಣತಿ ಹೊಂದಿದ್ದರು.

ರಾಜಕೀಯ ಸಂಘರ್ಷ

ಈ ಪ್ರಕರಣ ಈಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಹಿರಿಯ ಅಧಿಕಾರಿಗಳ ಇಂತಹ ನಡವಳಿಕೆಯಿಂದ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಸೇರಿದಂತೆ ಹಲವು ನಾಯಕರು ಆಕ್ರೋಶ ಹೊರಹಾಕಿದ್ದಾರೆ.

Read More
Next Story