
ಬಿಕ್ಲು ಶಿವ ಕೊಲೆ ಕೇಸ್; ಜಾಮೀನು ಅರ್ಜಿ ತಿರಸ್ಕೃತ- ಬೈರತಿ ಬಸವರಾಜ್‌ಗೆ ಮತ್ತೆ ಸಂಕಷ್ಟ
ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಹೀಗಾಗಿ ಶಾಸಕ ಬೈರತಿ ಬಸವರಾಜ್ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಾಗಿದೆ ಎಂದು ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಮತ್ತೆ ಬಂಧನದ ಭೀತಿ ಎದುರಾಗಿದೆ. ಹೈಕೋರ್ಟ್ ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಫೆ.10ರಂದು ಅರ್ಜಿ ವಜಾಗೊಂಡಿದ್ದು, ಇದರಿಂದಾಗಿ ಬಿಕ್ಲುಶಿವ ಕೊಲೆ ಪ್ರಕರಣ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರಿಗೆ ಬೈರತಿ ಬಸವರಾಜ್ ಬಂಧಿಸುವ ಹಾದಿ ಸುಗಮವಾಗಿದೆ.
ಸಿಐಡಿ ಪೊಲೀಸರಿಂದ ಬಂಧನ ಭೀತಿಯಲ್ಲಿರುವ ಶಾಸಕ ಭೈರತಿ ಬಸವರಾಜು ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ. ಈ ಹಿಂದೆ ಕೆಳ ನ್ಯಾಯಾಲಯದಲ್ಲಿ ಬೈರತಿ ಬಸವರಾಜು ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿತ್ತು. ಈ ವೇಳೆಯೂ ಶಾಸಕರು ನಾಪತ್ತೆಯಾಗಿದ್ದರು. ಈಗ ಹೈಕೋರ್ಟ್‌ನಿಂದಲೂ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು, ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಮತ್ತೊಮ್ಮೆ ನಾಪತ್ತೆಯಾಗಿದ್ದಾರೆ.
ಕೊಲೆ ಪ್ರಕರಣದಲ್ಲಿ ಪೊಲೀಸರು ಭಾಗಿ
ಬಿಕ್ಲುಶಿವ ಕೊಲೆ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರ, ಸಿಐಡಿ ಪರ ವಕೀಲರು ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ. ಹೀಗಾಗಿ ಶಾಸಕ ಬೈರತಿ ಬಸವರಾಜುರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಾಗಿದ್ದು, ನಿರೀಕ್ಷಣಾ ಜಾಮೀನು ನೀಡಬಾರದೆಂದು ವಾದಿಸಿದ್ದರು. ಹತ್ಯೆಯಾದ ಬಿಕ್ಲುಶಿವ ತಾಯಿ ಕೂಡ ಕೇವಲ 24 ಗಂಟೆಯಲ್ಲಿ ತಮ್ಮ ಹೇಳಿಕೆಯನ್ನೇ ಮಾಧ್ಯಮಗಳ ಮುಂದೆ ಬದಲಾಯಿಸಿದ್ದರು ಎಂದು ವಕೀಲರು ತಿಳಿಸಿದ್ದಾರೆ.
ಪೊಲೀಸರಿಗೆ ಕೊಟ್ಟ ದೂರಿನಲ್ಲೂ ಕೆಲ ವ್ಯತ್ಯಾಸಗಳಿವೆ. ಹೀಗಾಗಿ ಶಾಸಕ ಭೈರತಿ ಬಸವರಾಜುರನ್ನು ಬಂಧಿಸಲು ಅವಕಾಶ ಕೊಡಬೇಕು. ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದೆಂದು ವಾದಿಸಿದ್ದರು. ಈ ಕೊಲೆ ಕೇಸ್ ನಲ್ಲಿ ಕೋಕಾ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿರುವುದಾಗಿ ಸಿಐಡಿ ಪರ ವಕೀಲರು ಹೈಕೋರ್ಟ್ ಗೆ ತಿಳಿಸಿದ್ದಾರೆ.
ಏನಿದು ಪ್ರಕರಣ ?
2025 ಜುಲೈ 15ರಂದು ಹಲಸೂರಿನಲ್ಲಿ ನಡೆದ ಬಿಕ್ಲು ಶಿವನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನೊಂದಿಗೆ ಶಾಸಕರು ನೇರ ಸಂಪರ್ಕ ಹೊಂದಿರುವುದು ತನಿಖೆಯಿಂದ ತಿಳಿದುಬಂದಿತ್ತು. ಕೊಲೆಗೂ ಮುನ್ನ ಹಲವು ಬಾರಿ ಇಬ್ಬರು ಪರಸ್ಪರ ಭೇಟಿಯಾಗಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಸಾಕ್ಷ್ಯಾಧಾರಗಳು ದೊರೆತಿರುವುದರಿಂದ ಶಾಸಕರ ಬಂಧನ ಮತ್ತು ವಿಚಾರಣೆ ಅಗತ್ಯ ಎಂದು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದ ನಿರೀಕ್ಷಣಾ ಜಾಮೀನು ನಿರಾಕರಿಸಲಾಗಿತ್ತು.

