
ಮೃತ ಉದ್ಯಮಿ ರಾಯ್ ಸಿ.ಜೆ.
ರಾಯ್ ಸಿ.ಜೆ ಸಾವು ಪ್ರಕರಣ: ಕೆಂಪು ಶಾಯಿಯಲ್ಲಿ ಬರೆದ 9 ಪುಟಗಳ ಟಿಪ್ಪಣಿ ಎಸ್‌ಐಟಿ ವಶಕ್ಕೆ, ತನಿಖೆ ತೀವ್ರ
ತನಿಖೆಯ ಭಾಗವಾಗಿ ರಾಯ್ ಅವರ ಕುಟುಂಬಸ್ಥರು ಮತ್ತು ಆಪ್ತರಿಂದ ವಶಪಡಿಸಿಕೊಳ್ಳಲಾದ ದಾಖಲೆಗಳ ನಡುವೆ ಈ ಪತ್ರ ಪತ್ತೆಯಾಗಿದೆ. ಈ ಟಿಪ್ಪಣಿಯಲ್ಲಿ ರಾಯ್ ಅವರು ಬೇರೆ ಬೇರೆ ಸಮಯದಲ್ಲಿ ಎದುರಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ರಾಯ್ ಸಿ.ಜೆ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ, ರಾಯ್ ಅವರು ಕೆಂಪು ಶಾಯಿಯಲ್ಲಿ ಕೈಬರಹದಲ್ಲಿ ಬರೆದಿದ್ದಾರೆ ಎನ್ನಲಾದ ಒಂಬತ್ತು ಪುಟಗಳ ಟಿಪ್ಪಣಿಯನ್ನು ಗಂಭೀರವಾಗಿ ಪರಿಶೀಲಿಸುತ್ತಿದೆ.
ತನಿಖೆಯ ಭಾಗವಾಗಿ ರಾಯ್ ಅವರ ಕುಟುಂಬಸ್ಥರು ಮತ್ತು ಆಪ್ತರಿಂದ ವಶಪಡಿಸಿಕೊಳ್ಳಲಾದ ದಾಖಲೆಗಳ ನಡುವೆ ಈ ಪತ್ರ ಪತ್ತೆಯಾಗಿದೆ. ಈ ಟಿಪ್ಪಣಿಯಲ್ಲಿ ರಾಯ್ ಅವರು ಬೇರೆ ಬೇರೆ ಸಮಯದಲ್ಲಿ ಎದುರಿಸಿದ ವಿವಿಧ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಅವರ ಸಾವಿಗೆ ಕಾರಣವಾದ ಸಂದರ್ಭಗಳನ್ನು ಅರ್ಥಮಾಡಿಕೊಳ್ಳಲು ಈ ಟಿಪ್ಪಣಿ ಪ್ರಮುಖ ಸುಳಿವು ನೀಡುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, "ನಾವು ಕುಟುಂಬದವರಿಂದ ಮತ್ತು ಸಹವರ್ತಿಗಳಿಂದ ಹಲವಾರು ಕಾಗದ ಪತ್ರಗಳನ್ನು ವಶಪಡಿಸಿಕೊಂಡಿದ್ದೇವೆ. ಅದರಲ್ಲಿ ರಾಯ್ ಅವರೇ ಕೆಂಪು ಶಾಯಿಯಲ್ಲಿ ಬರೆದಿದ್ದಾರೆ ಎಂದು ಶಂಕಿಸಲಾದ 9 ಪುಟಗಳ ಟಿಪ್ಪಣಿಯೂ ಇದೆ. ಅದರ ಪ್ರತಿಯೊಂದು ಸಾಲನ್ನು ವಿಶ್ಲೇಷಿಸಲಾಗುತ್ತಿದೆ," ಎಂದು ತಿಳಿಸಿದ್ದಾರೆ. ಆದರೆ ತನಿಖೆಯ ಸೂಕ್ಷ್ಮತೆಯ ದೃಷ್ಟಿಯಿಂದ ಟಿಪ್ಪಣಿಯ ವಿವರಗಳನ್ನು ಹಂಚಿಕೊಳ್ಳಲು ಅವರು ನಿರಾಕರಿಸಿದ್ದಾರೆ.
ಸದ್ಯಕ್ಕೆ ಅಸಹಜ ಸಾವು ಪ್ರಕರಣ ದಾಖಲು
ಪ್ರಸ್ತುತ ಈ ಪ್ರಕರಣವನ್ನು 'ಅಸಹಜ ಸಾವು' ಎಂದು ದಾಖಲಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ಆಯಾಮದ ಅಡಿಯಲ್ಲಿ ಪ್ರಕರಣವನ್ನು ಇನ್ನೂ ಪರಿಗಣಿಸಲಾಗಿಲ್ಲ. "ತನಿಖೆ ಪ್ರಗತಿಯಲ್ಲಿದೆ, ಮುಂದೆ ಬರುವ ಫಲಿತಾಂಶಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು," ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಐಟಿ ದಾಳಿ ಮತ್ತು ಮಾನಸಿಕ ಒತ್ತಡದ ಹಿನ್ನೆಲೆ
ಜನವರಿ 30 ರಂದು ಬೆಂಗಳೂರಿನ ರಿಚ್‌ಮಂಡ್ ಸರ್ಕಲ್ ಬಳಿಯ ತಮ್ಮ ಕಚೇರಿಯಲ್ಲಿ ರಾಯ್ ಅವರು ತಮ್ಮ ಲೈಸೆನ್ಸ್ಡ್ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೇರಳದಿಂದ ಬಂದಿದ್ದ ಆದಾಯ ತೆರಿಗೆ ಅಧಿಕಾರಿಗಳ ತಂಡ ಹಿಂದಿನ ಮೂರು ದಿನಗಳಿಂದ ಶೋಧ ನಡೆಸಿ, ಅವರನ್ನು ವಿಚಾರಣೆ ನಡೆಸುತ್ತಿದ್ದ ದಿನವೇ ಈ ಘಟನೆ ನಡೆದಿತ್ತು.
ಕಳೆದ ಡಿಸೆಂಬರ್‌ನಿಂದಲೂ ರಾಯ್ ಅವರ ಮೇಲೆ ಐಟಿ ಇಲಾಖೆಯ ಕಣ್ಣಿತ್ತು. ಅವರ ಕಚೇರಿ ಸಿಬ್ಬಂದಿಯನ್ನು ಎಸ್‌ಐಟಿ ಪ್ರಶ್ನಿಸಿದೆ. ಅಲ್ಲದೆ, ರಾಯ್ ಅವರು ಮನೋವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದ್ದು, ಅವರು ತೀವ್ರ ಒತ್ತಡದಲ್ಲಿದ್ದರು ಎಂಬ ಅಂಶವೂ ತನಿಖೆಯಲ್ಲಿ ಪರಿಶೀಲನೆಯಲ್ಲಿದೆ. ಐಟಿ ಅಧಿಕಾರಿಗಳನ್ನು ಎಸ್‌ಐಟಿ ಪ್ರಶ್ನಿಸಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

