
ಸಿ.ಜೆ. ರಾಯ್ ಸಾವಿನ ಹಿಂದೆ ಅಡಗಿದೆಯೇ ಇಂಟರ್ನೆಟ್ ಕರೆಗಳ ರಹಸ್ಯ
ಉದ್ಯಮಿ ರಾಯ್ ಸಿ.ಜೆ ಆತ್ಮಹತ್ಯೆ|ಇಂಟರ್ನೆಟ್ ಕರೆಗಳ ಬೆನ್ಹತ್ತಿದ ಎಸ್‌ಐಟಿ
ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ಬೆನ್ನುಹತ್ತಿದ ಎಸ್‌ಐಟಿ ಪೊಲೀಸರಿಗೆ ಮಹತ್ವದ ಸುಳಿವು ಲಭ್ಯವಾಗಿದೆ. ರಾಯ್ ಪ್ರಭಾವಿ ವ್ಯಕ್ತಿಗಳಿಗೆ ಇಂಟರ್ನೆಟ್ ಕರೆ ಮಾಡಿರುವುದು ಪತ್ತೆಯಾಗಿದೆ.
ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಹಾಗೂ ಖ್ಯಾತ ಉದ್ಯಮಿ ರಾಯ್ ಸಿ.ಜೆ ಅವರ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಚುರುಕುಗೊಳಿಸಿದೆ. ರಾಯ್ ಅವರ ಸಾವಿನ ಸುತ್ತಲಿನ ನಿಗೂಢತೆಯನ್ನು ಭೇದಿಸಲು ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಮೊರೆ ಹೋಗಿದ್ದು, ಪ್ರಮುಖವಾಗಿ ಅವರ ಮೊಬೈಲ್ ಫೋನ್ ಕರೆಗಳ ಮೇಲೆ ಕೇಂದ್ರೀಕರಿಸಿದ್ದಾರೆ.
ತನಿಖಾ ತಂಡಕ್ಕೆ ಈಗಾಗಲೇ ರಾಯ್ ಅವರ ಮೊಬೈಲ್‌ನ ಕರೆ ವಿವರಗಳ ದಾಖಲೆ ಲಭ್ಯವಾಗಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ. ಈ ವೇಳೆ ರಾಯ್ ಅವರು ಸಾಮಾನ್ಯ ಕರೆಗಳಿಗಿಂತ ಹೆಚ್ಚಾಗಿ ಇಂಟರ್ನೆಟ್ ಕರೆಗಳನ್ನು ಮಾಡಿರುವುದು ಪತ್ತೆಯಾಗಿದೆ. ಆತ್ಮಹತ್ಯೆಗೂ ಮುನ್ನ ಅವರು ಕೆಲವು ಪ್ರಭಾವಿ ವ್ಯಕ್ತಿಗಳೊಂದಿಗೆ ಇಂಟರ್ನೆಟ್ ಮೂಲಕ ಸಂಭಾಷಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಆ ವ್ಯಕ್ತಿಗಳು ಯಾರು ಮತ್ತು ಯಾವ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿತ್ತು ಎಂಬ ಬಗ್ಗೆ ಎಸ್‌ಐಟಿ ತೀವ್ರ ವಿಚಾರಣೆ ನಡೆಸುತ್ತಿದೆ.
ಆದಾಯ ತೆರಿಗೆ ಇಲಾಖೆಯ ದಾಳಿಯ ಸಂದರ್ಭದಲ್ಲೇ ರಾಯ್ ಸಿ.ಜೆ ಅವರು ಈ ನಿರ್ಧಾರಕ್ಕೆ ಬಂದಿರುವುದು ಹಾಗೂ ಇಂಟರ್ನೆಟ್ ಕರೆಗಳು ಪ್ರಕರಣಕ್ಕೆ ದೊಡ್ಡ ತಿರುವು ನೀಡುವ ಸಾಧ್ಯತೆಯಿದೆ. ಮೊಬೈಲ್ ಕರೆಗಳ ಜೊತೆಗೆ ಅವರ ಲ್ಯಾಪ್‌ಟಾಪ್ ಮತ್ತು ಐಫೋನ್ ಪಾಸ್‌ವರ್ಡ್‌ಗಳನ್ನು ಪಡೆದುಕೊಂಡು ಡಿಜಿಟಲ್ ಪುರಾವೆಗಳನ್ನು ಕಲೆಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. ಮೃತರ ಕುಟುಂಬ ಸದಸ್ಯರು ಹಾಗೂ ಕಚೇರಿ ಸಿಬ್ಬಂದಿಯಿಂದಲೂ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಇಂಟರ್ನೆಟ್ ಕರೆಗಳ ರಹಸ್ಯ ಬಯಲಾದಲ್ಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಹಿನ್ನೆಲೆ
ಶುಕ್ರವಾರ (ಜನವರಿ 30) ಮಧ್ಯಾಹ್ನ ಸುಮಾರು 3:15 ಗಂಟೆಗೆ ಬೆಂಗಳೂರಿನ ರಿಚ್‌ಮಂಡ್ ಸರ್ಕಲ್ ಬಳಿ ಇರುವ ತಮ್ಮ ಕಚೇರಿಯಲ್ಲಿ ರಾಯ್ ಸಿ. ಜೆ ಅವರು ತಮ್ಮ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಕಳೆದ ಮೂರು ದಿನಗಳಿಂದ ರಾಯ್ ಸಿ. ಜೆ ಅವರ ಕಚೇರಿ ಮತ್ತು ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸುತ್ತಿದ್ದರು. ತೆರಿಗೆ ವಂಚನೆಯ ದೂರಿನ ಹಿನ್ನೆಲೆಯಲ್ಲಿ ಕೇರಳದ ಐಟಿ ತಂಡವು ಈ ತನಿಖೆ ಕೈಗೊಂಡಿತ್ತು. ಘಟನೆಯ ದಿನ ಅಧಿಕಾರಿಗಳು ರಾಯ್ ಅವರನ್ನು ವಿಚಾರಣೆ ನಡೆಸುತ್ತಿದ್ದರು. ಈ ವೇಳೆ ಅವರು ದಾಖಲೆಗಳನ್ನು ತರುತ್ತೇನೆ ಎಂದು ಹೇಳಿ ಪಕ್ಕದ ಕೊಠಡಿಗೆ ತೆರಳಿ, ಅಲ್ಲಿ ಗುಂಡು ಹಾರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಿಜೆ ರಾಯ್ ಯಾರು?
ಸಿಜೆ ರಾಯ್ ಬೆಂಗಳೂರು, ಕೇರಳ ಮತ್ತು ದುಬೈನಲ್ಲಿ 160ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿದ್ದ ಇವರು ದಕ್ಷಿಣ ಭಾರತದ ಪ್ರಭಾವಿ ಬಿಲ್ಡರ್ ಆಗಿದ್ದರು. ಇವರು ಕೇವಲ ಉದ್ಯಮಿಯಷ್ಟೇ ಅಲ್ಲದೆ, 'ಮರಕ್ಕಾರ್' ನಂತಹ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳು ಸೇರಿದಂತೆ ಹಲವು ಕನ್ನಡ ಮತ್ತು ಮಲಯಾಳಂ ಸಿನಿಮಾಗಳನ್ನು ನಿರ್ಮಿಸಿದ್ದರು.

